ADVERTISEMENT

ಧಾರವಾಡ: ರಸ್ತೆ ಗುಂಡಿಗಳು ಮುಚ್ಚುವ ಕಾರ್ಯ ಆರಂಭ

ಹದಗೆಟ್ಟ ರಸ್ತೆಗಳ ಸಮಸ್ಯೆಗೆ ಸಿಗುವುದೇ ಕಾಯಂ ಪರಿಹಾರ?

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2020, 15:29 IST
Last Updated 3 ನವೆಂಬರ್ 2020, 15:29 IST
ಹುಬ್ಬಳ್ಳಿಯ ಕಾಟನ್‌ ಮಾರ್ಕೆಟ್‌ ಬಳಿ ಮಂಗಳವಾರ ಗುಂಡಿಬಿದ್ದ ರಸ್ತೆಯಲ್ಲೇ ವಾಹನಗಳು ಸಾಗಿದವು
ಹುಬ್ಬಳ್ಳಿಯ ಕಾಟನ್‌ ಮಾರ್ಕೆಟ್‌ ಬಳಿ ಮಂಗಳವಾರ ಗುಂಡಿಬಿದ್ದ ರಸ್ತೆಯಲ್ಲೇ ವಾಹನಗಳು ಸಾಗಿದವು   

ಹುಬ್ಬಳ್ಳಿ: ನಗರದ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವ ಕೆಲಸವನ್ನು ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಮಂಗಳವಾರ ಆರಂಭಿಸಿದೆ.

ಹೋದ ವರ್ಷ ವಿಪರೀತ ಮಳೆಯಾದ ಕಾರಣ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳು ಬಿದ್ದು ಸಂಚಾರಕ್ಕೆ ಪ್ರಯಾಸ ಪಡುವ ಪರಿಸ್ಥಿತಿ ಎದುರಾಗಿತ್ತು. ಆ ಗುಂಡಿಗಳನ್ನು ಈ ಸಲದ ಮಳೆಗಾಲಕ್ಕೂ ಮೊದಲೆ ಮುಚ್ಚಲು ನಿರ್ಧರಿಸಲಾಗಿತ್ತಾದರೂ, ಕೋವಿಡ್‌ ಮತ್ತು ಲಾಕ್‌ಡೌನ್‌ನಿಂದ ಸಾಧ್ಯವಾಗಿರಲಿಲ್ಲ. ಕೆಲವೆಡೆ ಹಾಕಿದ್ದ ತೇಪೆ ಈ ಸಲ ಸುರಿದ ಮಳೆಗೆ ಕಿತ್ತುಕೊಂಡು ಹೋಗಿದೆ. ಹೀಗಾಗಿ ಸವಾರರು ಸ್ಥಳೀಯ ಆಡಳಿತವನ್ನು ಮತ್ತು ಜನಪ್ರತಿನಿಧಿಗಳನ್ನು ಶಪಿಸುತ್ತಲೇ ವಾಹನಗಳ ಸಂಚಾರ ಮಾಡುತ್ತಿದ್ದರು.

ಕಿತ್ತು ಹೋದ ರಸ್ತೆ, ಆಳವಾಗಿ ಬಿದ್ದಿರುವ ಗುಂಡಿಗಳನ್ನು ತುರ್ತಾಗಿ ಮುಚ್ಚಿಸಬೇಕು ಎಂದು ಸ್ಥಳೀಯ ಸಂಘಟನೆಗಳು ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಿದ್ದವು. ಈ ಸಲದ ಮಳೆಗಾಲದ ಬಳಿಕ ಗುಂಡಿಗಳನ್ನು ಮುಚ್ಚುವುದಾಗಿ ಪಾಲಿಕೆ ಹೇಳಿತ್ತು. ಕೆಲ ದಿನಗಳಿಂದ ನಗರದಲ್ಲಿ ಮಳೆ ಬಿಡುವ ನೀಡಿರುವ ಕಾರಣ ಕೆಲವೆಡೆ ದುರಸ್ತಿ ಕಾರ್ಯ ಆರಂಭವಾಗಿದ್ದು, ಬುಧವಾರ ಪೂರ್ಣಪ್ರಮಾಣದಲ್ಲಿ ಕೆಲಸ ಶುರುವಾಗಲಿದೆ.

ADVERTISEMENT

ಹಳೇ ಕೋರ್ಟ್‌ ವೃತ್ತದ ಶಿರಡಿ ಸಾಯಿಬಾಬಾ ದೇವಸ್ಥಾನದ ಮುಂಭಾಗದಲ್ಲಿ ದ್ವಿಚಕ್ರ ವಾಹನದಲ್ಲಿ ಹೊರಟಿದ್ದ ಅರವಿಂದ ನಗರದ ನಾಗರಾಜ ನಾಯ್ಕ ‘ಪ್ರತಿ ವರ್ಷ ತೇಪೆ ಹಾಕುವ ಕೆಲಸ ಮಾಡುತ್ತಾರೆ. ಸ್ವಲ್ಪ ಜೋರಾಗಿ ಮಳೆ ಬಂದರೂ ತೇಪೆ ಹೋಗಿ ಗುಂಡಿ ಬಿದ್ದಿರುತ್ತದೆ. ಪ್ರತಿ ಸಲವೂ ತಾತ್ಕಾಲಿಕ ದುರಸ್ತಿ ಮಾಡುವ ಬದಲು ಕಾಯಂ ಪರಿಹಾರ ಕಂಡುಕೊಳ್ಳಬೇಕು. ಸಾರ್ವಜನಿಕರು ತೆರಿಗೆ ಪಾವತಿಸುವ ಕಾರಣ ಮೂಲ ಅಗತ್ಯತೆಗಳಲ್ಲಿ ಒಂದಾದ ರಸ್ತೆಯ ಗುಣಮಟ್ಟ ಹೆಚ್ಚಿಸಲು ಆದ್ಯತೆ ಕೊಡಬೇಕು’ ಎಂದರು.

ಈ ಕುರಿತು ಪ್ರಜಾವಾಣಿಗೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ‘ಸಾಮಾನ್ಯ ನಿಧಿಯಲ್ಲಿ ₹2.5 ಕೋಟಿ ಮೊತ್ತದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ಆರಂಭವಾಗಿದೆ. ಆದಷ್ಟು ಬೇಗನೆ ಪೂರ್ಣಗೊಳ್ಳಲಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.