ADVERTISEMENT

ಬೆಣ್ಣೆಹಳ್ಳ: ಕಾಮಗಾರಿ ಶೀಘ್ರ- ಶಾಸಕ ಎನ್.ಎಚ್. ಕೋನರಡ್ಡಿ

ಪ್ರವಾಹ ನಿಯಂತ್ರಣಕ್ಕೆ ಕಾಂಕ್ರೀಟ್ ತಡೆಗೋಡೆ: ಶಾಸಕ ಕೋನರಡ್ಡಿ ಮಾಹಿತಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 2:58 IST
Last Updated 6 ಡಿಸೆಂಬರ್ 2025, 2:58 IST
ಎನ್‌.ಎಚ್‌. ಕೋನರಡ್ಡಿ
ಎನ್‌.ಎಚ್‌. ಕೋನರಡ್ಡಿ   

ಹುಬ್ಬಳ್ಳಿ: ‘ಉತ್ತರ ಕರ್ನಾಟಕದ ಪ್ರಮುಖ ಬೇಡಿಕೆಯಾದ ಬೆಣ್ಣೆಹಳ್ಳದ ಪ್ರವಾಹ ತಡೆಗೋಡೆ ಮತ್ತು ವಿಸ್ತರಣೆ ಕಾಮಗಾರಿಗೆ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಅನುಮತಿ ಸಿಕ್ಕ ತಕ್ಷಣ ಆರಂಭಿಸಲಾಗುವುದು’ ಎಂದು ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ತಿಳಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘₹200 ಕೋಟಿ ವೆಚ್ಚದ ಕಾಮಗಾರಿ ಇದಾಗಿದ್ದು, ತಾಂತ್ರಿಕ ಕಾರಣದಿಂದಾಗಿ ವಿಳಂಬವಾಗಿತ್ತು. ಆದರೆ ಪ್ರಕ್ರಿಯೆಗೆ ಚುರುಕು ನೀಡಿದ್ದು, 15 ದಿನಗಳಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಭೂಮಿಪೂಜೆ ನೆರವೇರಿಸುವರು’ ಎಂದರು.

‘ಮೊದಲ ಹಂತದಲ್ಲಿ ಊರುಗಳಿಗೆ ಪ್ರವಾಹದ ನೀರು ನುಗ್ಗುವ ಕಡೆಗಳಲ್ಲಿ ಕಾಂಕ್ರೀಟ್ ತಡೆಗೋಡೆ ನಿರ್ಮಿಸುವುದಲ್ಲದೇ, ಕುಂದಗೋಳ, ನಾಗರಳ್ಳಿ, ಬಂಡ್ಯಾರ, ಮಂಟೂರು, ನವಲಗುಂದ, ಇಂಗಳಳ್ಳಿ, ಶಿರಗುಪ್ಪಿ, ನರಗುಂದದ ಹಲವು ಕಡೆಗಳಲ್ಲಿ ಸಾಧ್ಯವಿರುವಲ್ಲೆಲ್ಲ ಹಳ್ಳದ ವ್ಯಾಪ್ತಿಯನ್ನು ವಿಸ್ತರಿಸಲಾಗುವುದು’ ಎಂದು ಮಾಹಿತಿ ನೀಡಿದರು.

ADVERTISEMENT

‘ಎರಡನೇ ಹಂತದಲ್ಲಿ ₹1,600 ಕೋಟಿಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಅದು ತಾಂತ್ರಿಕ ಕಾರಣಕ್ಕೆ ತಿರಸ್ಕೃತವಾಗಿದೆ. ಮತ್ತೆ ಸೂಕ್ತ ದಾಖಲೆಗಳೊಂದಿಗೆ ಕೇಂದ್ರಕ್ಕೆ ಪ್ರಸ್ತಾವ ಕಳುಹಿಸಲಾಗುವುದು’ ಎಂದರು.

ಮಹದಾಯಿ ಯಾವಾಗ?: ‘ಮಹದಾಯಿ ಕಾಮಗಾರಿ ಯಾವಾಗ ಆರಂಭವಾಗುತ್ತದೆ ಎಂದು ಹೇಳುವುದೇ ಕಷ್ಟವಾಗಿದೆ. ಎಲ್ಲ ತೀರ್ಪುಗಳು ನಮ್ಮ ಪರವಾಗಿದ್ದರೂ ವನ್ಯಜೀವಿ ಮಂಡಳಿ ಅನುಮತಿ ಸಿಗುವುದು ಬಾಕಿ ಇದೆ. ರಾಜ್ಯ ಸರ್ಕಾರ ಗುತ್ತಿಗೆದಾರರಿಗೆ ಕಾಮಗಾರಿ ಆದೇಶವನ್ನು ನೀಡಿದೆ’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

‘ಮಹದಾಯಿ, ಕಳಸಾ–ಬಂಡೂರಿ ಯೋಜನೆ ಆರಂಭಿಸುವ ಕುರಿತು ಸರ್ಕಾರ ತೀರ್ಮಾನಿಸುವಂತೆ ಚಳಿಗಾಲದ ಅಧಿವೇಶನದಲ್ಲಿ ಒತ್ತಾಯಿಸಲಾಗುವುದು. ಈ ವಿಚಾರವಾಗಿ ಎಲ್ಲ ಶಾಸಕರಿಗೂ ಮನವರಿಕೆ ಮಾಡುವ ಪ್ರಯತ್ನ ಮಾಡುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಬಂಡೂರಿ ಯೋಜನೆಗೆ ಯಾವುದೇ ಪರಿಸ್ಥಿತಿಯಲ್ಲೂ ಅನುಮತಿ ನೀಡುವುದಿಲ್ಲ, ಇದಕ್ಕೆ ಕೇಂದ್ರ ಸಚಿವರೂ ತಮಗೆ ಒಪ್ಪಿಗೆ ನೀಡಿದ್ದಾರೆ ಎಂದು ಗೋವಾ ರಾಜ್ಯದ ಮುಖ್ಯಮಂತ್ರಿ ಸದನದಲ್ಲಿ ಹೇಳುತ್ತಾರೆ. ಸದನದಲ್ಲಿ ಹೇಳಿದರೆ ಅದು ಅಧಿಕೃತ. ಹೀಗೆ ಹೇಳಲು ಅವರಿಗೆ ಅಧಿಕಾರವೇ ಇಲ್ಲ’ ಎಂದ ಕೋನರಡ್ಡಿ ಆಕ್ಷೇಪ ವ್ಯಕ್ತಪಡಿಸಿದರು.

‘ಇದು ಅವರ ವೈಯಕ್ತಿಕ ಅಭಿಪ್ರಾಯವಾಗಿದ್ದು, ಕೇಂದ್ರ ಸರ್ಕಾರದ ಅಧಿಕೃತ ಅಭಿಪ್ರಾಯವಲ್ಲ ಎಂದು ಪ್ರಲ್ಹಾದ ಜೋಶಿ ಅವರೇ ಸ್ಪಷ್ಟನೆ ನೀಡಿದ್ದಾರೆ. ನಾನು ಜೋಶಿ ಅವರನ್ನು ಕೈ ಮುಗಿದು ಕೇಳುತ್ತೇನೆ, ಅವರು ಈ ಯೋಜನೆಗೆ ಅನುಮತಿ ಕೊಡಿಸಬೇಕು. ಅದು ಅವರಿಗೆ ಸಾಧ್ಯವಿದೆ’ ಎಂದರು.

ಮಹದಾಯಿ ವಿಚಾರವಾಗಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಕಾನೂನಾತ್ಮಕವಾಗಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಭರವಸೆ ನೀಡಿದ್ದಾರೆ

-ಎನ್.ಎಚ್. ಕೋನರಡ್ಡಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.