
ಹುಬ್ಬಳ್ಳಿ: ದಕ್ಷಿಣ ಕನ್ನಡ ಬ್ರಾಹ್ಮಣ ಸಮಾಜವು ಪ್ಯಾಟಿ ಬಂಧುಗಳ ಸಹಯೋಗದಲ್ಲಿ ಇಲ್ಲಿನ ದೇಶಪಾಂಡೆನಗರದ ಶ್ರೀಕೃಷ್ಣ ಕಲ್ಯಾಣ ಮಂಟಪದಲ್ಲಿ ಬುಧವಾರ ನಾಲ್ಕನೇ ದಿನದ ಭಾಗವತ ಸಪ್ತಾಹ ನಡೆಯಿತು.
ಉಡುಪಿಯ ಪಾಲಿಮಾರು ಮಠದ ಹಿರಿಯ ಸ್ವಾಮೀಜಿ ವಿದ್ಯಾಧೀಶ ತೀರ್ಥ ಹಾಗೂ ಕಿರಿಯ ಸ್ವಾಮೀಜಿ ವಿದ್ಯಾರಾಜೇಶ್ವರ ತೀರ್ಥರು ಪ್ರವಚನ ನೀಡಿದರು. ಮಹಾಭಾರತ ಹಾಗೂ ಭಾಗವತದ ವಿವಿಧ ದೃಷ್ಟಾಂತಗಳನ್ನು ವಿವರಿಸಿದರು. ಕೃಷ್ಣನ ಜನ್ಮ, ಬದುಕು ಹಾಗೂ ಅವನು ನೀಡಿದ ಗೀತೋಪದೇಶಗಳ ಅರ್ಥವನ್ನು ವಿವರಿಸಿದರು.
‘ಪ್ರತಿಫಲಾಪೇಕ್ಷೆಯಿಲ್ಲದೆ ಕೆಲಸಗಳನ್ನು ಮಾಡಬೇಕು. ಪ್ರತಿಯೊಂದು ಕಾಯಕಕ್ಕೂ ಭಗವಂತ ಆಶೀರ್ವಾದ ಇರುತ್ತದೆ. ಶುದ್ಧ ಮನಸ್ಸಿನಲ್ಲಿ ಮಾಡುವ ಕೆಲಸದಲ್ಲಿ ಸದಾ ಭಗವಂತ ನೆಲೆಸಿರುತ್ತಾನೆ ಎನ್ನುವ ರಹಸ್ಯ ಅರಿಯಬೇಕು’ ಎಂದು ಸ್ವಾಮೀಜಿಗಳು ಆಶೀರ್ವಚನ ನೀಡಿದರು.
ಡಿ.14ರಿಂದ ಭಾಗವತ ಸಪ್ತಾಹ ಆರಂಭವಾಗಿದ್ದು, ಪ್ರತಿದಿನ ಸಂಜೆ 6.30ರಿಂದ ರಾತ್ರಿ 8ರವರೆಗೆ ನಡೆಯುತ್ತದೆ. ಇದೇ ಶುಕ್ರವಾರ ಸಪ್ತಾಹದ ಮಂಗಲೋತ್ಸವ ನಡೆಯಲಿದ್ದು, ಅಂದು ಭಕ್ತರಿಗೆ ಉಭಯ ಶ್ರೀಗಳು ಮಂತ್ರಾಕ್ಷತೆ ನೀಡಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.