ADVERTISEMENT

ಹುಬ್ಬಳ್ಳಿ: ಬಸ್‌ ಡಿಪೊ ಮುಂದಿನ ರಸ್ತೆ ತಡೆದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2020, 3:18 IST
Last Updated 8 ಡಿಸೆಂಬರ್ 2020, 3:18 IST
ಪ್ರತಿಭಟನಾಕಾರರು ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದ್ದರಿಂದ ಇದನ್ನು ತಡೆಯಲು ಪೊಲೀಸರು ಮುಂದಾದರು.
ಪ್ರತಿಭಟನಾಕಾರರು ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದ್ದರಿಂದ ಇದನ್ನು ತಡೆಯಲು ಪೊಲೀಸರು ಮುಂದಾದರು.   

ಹುಬ್ಬಳ್ಳಿ: ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದ ಭೂ ಸುಧಾರಣಾ ಕಾಯ್ದೆ, ಕೃಷಿ ಮಸೂದೆ ತಿದ್ದುಪಡಿ ಮತ್ತು ಎಪಿಎಂಸಿ ಕಾಯ್ದೆ ವಿರೋಧಿಸಿ ಕರೆ ನೀಡಿರುವ ಭಾರತ ಬಂದ್‌ ಹಿನ್ನೆಲೆಯಲ್ಲಿ ಇಲ್ಲಿ ಮಂಗಳವಾರ ರೈತ, ಕನ್ನಡಪರ ಸಂಘಟನೆಗಳು ಬಸ್ ಡಿಪೊ ಮುಂದಿನ ರಸ್ತೆ ತಡೆದು ಪ್ರತಿಭಟನೆ ನಡೆಸಿದವು.

ಹೊಸೂರು ಡಿಪೊದ ಮುಂದೆ ಪ್ರತಿಭಟನೆ ಮಾಡಿದ ರೈತ ಮುಖಂಡರು ನಮ್ಮ ಹೋರಾಟಕ್ಕೆ ಎಲ್ಲರೂ ಬೆಂಬಲ ನೀಡಬೇಕು ಎಂದು ಕೋರಿದರು. ಬಸ್‌ಗಳು ಸಂಚರಿಸಲು ಅವಕಾಶ ನೀಡುವುದಿಲ್ಲ ಎಂದರು. ಇದರಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದರು. ಹೊಸೂರು ವೃತ್ತದ ಬಳಿ ರಸ್ತೆಗೆ ಅಡ್ಡವಾಗಿ ನಿಂತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಹಳೇ ಬಸ್‌ ನಿಲ್ದಾಣದ ಪ್ರವೇಶ ಹಾಗೂ ನಿರ್ಗಮನ ದ್ವಾರಕ್ಕೆ ಅಡ್ಡ ಹಾಕಿದರು. ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಹುಲ್ಲಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು. ವಾಹನಗಳ ಸಂಚಾರಕ್ಕೆ ತಡೆಯೊಡ್ಡಿದ್ದರಿಂದ ಕೆಲಸದ ನಿಮಿತ್ಯ ನಗರಕ್ಕೆ ಬಂದಿದ್ದ ಜನ ನಡೆದುಕೊಂಡು ಹೋಗಬೇಕಾಯಿತು.

ಪ್ರತಿಭಟನಾಕಾರರು ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದ್ದರಿಂದ ಇದನ್ನು ತಡೆಯಲು ಪೊಲೀಸರು ಮುಂದಾದರು. ಕೆಲ ಹೊತ್ತು ಪೊಲೀಸರ ಜೊತೆ ಮಾತಿನ ಚಕಿಮಕಿ ಕೂಡ ನಡೆಯಿತು. ಬಳಿಕ ಪೊಲೀಸರು ಪ್ರತಿಭಟನಾ ನಿರತರನ್ನು ಮನವೊಲಿಸಲು ಪ್ರಯತ್ನಿಸಿದರು.

ADVERTISEMENT

ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ, ಮಹದಾಯಿ ಕಳಸಾ ಬಂಡೂರಿ ಹೋರಾಟ ಸಮನ್ವಯ ಸಮಿತಿ, ಹುಬ್ಬಳ್ಳಿ ನಾಗರಿಕ ಹೋರಾಟ ಸಮಿತಿ, ಸಿಐಟಿಯು, ಸಿಪಿಐ (ಎಂ), ಬೀದಿಬದಿ ವ್ಯಾಪಾರಿಗಳು, ದಲಿತ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.