ADVERTISEMENT

ಭವನಗಳು ಹೊಸ ಚಿಂತನೆಯ ಕಮ್ಮಟಗಳಾಗಬೇಕು: ಸಚಿವ ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2021, 13:19 IST
Last Updated 7 ಮಾರ್ಚ್ 2021, 13:19 IST
ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ಭವನ ಉದ್ಘಾಟಿನೆ
ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ಭವನ ಉದ್ಘಾಟಿನೆ   

ಹುಬ್ಬಳ್ಳಿ: ನಮ್ಮ ಇಲಾಖೆಯಿಂದ ನಿರ್ಮಿಸಿರುವ ಸಮುದಾಯ ಭವನಗಳಲ್ಲಿ ಮದುವೆ, ನಾಮಕರಣ ಮತ್ತಿತರ ಕಾರ್ಯಕ್ರಮಗಳ ಜೊತೆಗೆ ಸಮಾಜದ ಬಗೆಗಿನ ಚಿಂತನೆಗಳು ಹಾಗೂ ಗೋಷ್ಠಿಗಳನ್ನು ಆಯೋಜಿಸಬೇಕು. ಭವನಗಳು ಹೊಸ ಚಿಂತನೆಯ ಕಮ್ಮಟಗಳಾಗಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು ಹೇಳಿದರು.

ಇಲ್ಲಿನ ಈಶ್ವರ ಹಾಗೂ ಸಂಗೊಳ್ಳಿ ರಾಯಣ್ಣ ನಗರದಲ್ಲಿ ಸಮಾಜ ಕಲ್ಯಾಣ ಇಲಾಖೆಯ ₹ 3 ಕೋಟಿ ಹಾಗೂ ಮಹಾನಗರ ಪಾಲಿಕೆಯ ₹ 50 ಲಕ್ಷ ಅನುದಾನದಲ್ಲಿ ನಿರ್ಮಿಸಲಾದ ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ಭವನ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಾದ್ಯಂತ ಇಲಾಖೆಯಲ್ಲಿ ಪರಿವರ್ತನೆ ತರಲಾಗಿದೆ. ಇಲಾಖೆಯ ವಸತಿ ಶಾಲೆಗಳಲ್ಲಿ 1.68 ಲಕ್ಷ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಈ ಬಾರಿಯ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಯಲ್ಲಿ‌ ಉತ್ತಮ ಸಾಧನೆ ಮಾಡಿದ್ದಾರೆ.‌ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕಾದ ಜವಾಬ್ದಾರಿ ಎಲ್ಲರದ್ದು. ರಾಜ್ಯದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಮುಖಂಡರು ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಪರಿಶಿಷ್ಟ ಜಾತಿ ಮೀಸಲಾತಿ ಪ್ರಮಾಣವನ್ನು ಶೇ 15ರಿಂದ 17ಕ್ಕೆ ಏರಿಸಬೇಕಾಗಿದೆ. ಪರಿಶಿಷ್ಟ ಪಂಗಡ ಮೀಸಲಾತಿ ಪ್ರಮಾಣ ಶೇ 3ರಿಂದ ಶೇ 7.5 ರಷ್ಟು ಏರಿಸಬೇಕಾಗಿದೆ. ಇದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.

ADVERTISEMENT

ರಾಜ್ಯದಲ್ಲಿ ಕುರುಬರು ಎಸ್.ಟಿಗೆ ಸೇರಲು, ಪಂಚಮಸಾಲಿಗಳು 2ಎ ಸೇರಲು ಹಾಗೂ ಒಕ್ಕಲಿಗರು ಕೇಂದ್ರ ಓಬಿಸಿ ಪಟ್ಟಿಗೆ ಸೇರಲು ಹೋರಾಟ ನಡೆಸುತ್ತಿದ್ದಾರೆ. ಮುಖ್ಯಮಂತ್ರಿಗಳ ಮನವೊಲಿಸಿ ಮೀಸಲಾತಿ ಕೊಡಿಸಲು ಪ್ರಯತ್ನಿಸಲಾಗುವುದು ಎಂದರು.

ನೂತನ ಅಂಬೇಡ್ಕರ್ ಭವನದ ಸುತ್ತ ಕಾಂಪೌಂಡ್ ನಿರ್ಮಾಣ ಹಾಗೂ ಪೇವರ್ಸ್ ಅಳವಡಿಸಲು ₹ 2.5 ಕೋಟಿ ಅನುದಾನ ಕೇಳಲಾಗಿದೆ. ಈ ಕುರಿತು ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಬೆಂಗಳೂರಿಗೆ ತೆರಳಿದ ತಕ್ಷಣ ಅನುದಾನ ಮಂಜೂರು ಮಾಡುವುದಾಗಿ ರಾಮುಲು ಭರವಸೆ ನೀಡಿದರು.

ಅಂತರ್ಜಾತಿ ವಿವಾಹ ಹಾಗೂ ದೇವದಾಸಿ ಮಕ್ಕಳ ಮದುವೆ ಪ್ರೋತ್ಸಾಹ ಧನ ಯೋಜನೆಯಡಿ ಮದುವೆಯಾದ ಜೋಡಿಗೆ ಹಾಗೂ ವಿದ್ಯಾರ್ಥಿನಿಗೆ ಪ್ರೋತ್ಸಾಹ ಧನದ ಚೆಕ್ ವಿತರಣೆ ಮಾಡಲಾಯಿತು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ಪಾಲಿಕೆ ಮಾಜಿ ಸದಸ್ಯ ರಾಜಣ್ಣ ಕೊರವಿ‌, ಮಲ್ಲಿಕಾರ್ಜುನ ಗುಡೂರ , ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎನ್.ಆರ್.ಪುರುಷೋತಮ್‌ ಸೇರಿದಂತೆ ಜಿಲ್ಲಾ ಜಾಗೃತಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.