ADVERTISEMENT

ಲಿಂಗಾಯತ ಧರ್ಮ; ಎಂ.ಬಿ.ಪಾಟೀಲ ಪತ್ರ: ಶ್ರುತಿ ಬಂಧನ ವಿರೋಧಿಸಿ ಬಿಜೆಪಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2019, 12:57 IST
Last Updated 26 ಏಪ್ರಿಲ್ 2019, 12:57 IST
ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಬಿಜೆಪಿ ಮುಖಂಡರು ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಲ ಅವರಿಗೆ ಮನವಿ ಸಲ್ಲಿಸಿದರು. ಶ್ರುತಿ ಬೆಳ್ಳಕ್ಕಿ, ಅರವಿಂದ ಬೆಲ್ಲದ, ಪ್ರಹ್ಲಾದ ಜೋಶಿ, ಅಮೃತ ದೇಸಾಯಿ ಇದ್ದಾರೆ.
ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಬಿಜೆಪಿ ಮುಖಂಡರು ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಲ ಅವರಿಗೆ ಮನವಿ ಸಲ್ಲಿಸಿದರು. ಶ್ರುತಿ ಬೆಳ್ಳಕ್ಕಿ, ಅರವಿಂದ ಬೆಲ್ಲದ, ಪ್ರಹ್ಲಾದ ಜೋಶಿ, ಅಮೃತ ದೇಸಾಯಿ ಇದ್ದಾರೆ.   

ಧಾರವಾಡ: ಲಿಂಗಾಯತ ಪ್ರತ್ಯೇಕ ಧರ್ಮ ಕುರಿತಂತೆ ಸೋನಿಯಾಗಾಂಧಿಗೆ ಗೃಹ ಸಚಿವ ಎಂ.ಬಿ.ಪಾಟೀಲ ಅವರು ಬರೆದಿದ್ದಾರೆ ಎನ್ನಲಾದ ಪತ್ರ ಕುರಿತು ಮಾತನಾಡಿದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪದ ಮೇಲೆ ಬಂಧಿತರಾಗಿ ಜಾಮೀನು ಮೇಲೆ ಬಿಡುಗಡೆಯಾಗಿರುವ ಶ್ರುತಿ ಬೆಳ್ಳಕ್ಕಿ ಅವರ ಮೇಲಿನ ಪ್ರಕರಣ ರದ್ದುಗೊಳಿಸುವಂತೆ ಆಗ್ರಹಿಸಿ ಬಿಜೆಪಿ ಮುಖಂಡರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪ್ರಹ್ಲಾದ ಜೋಶಿ, ‘ಇಂಥ ಘಟನೆಗಳಿಂದ ಯಾರೂ ಹೆದರುವ ಅವಶ್ಯಕತೆ ಇಲ್ಲ. ಈ ಹಿಂದೆ ಪೊಲೀಸರು ಕಾಂಗ್ರೆಸ್ ಮುಖಂಡ ವೀರಪ್ಪ ಮೊಯ್ಲಿ ಮಾತುಕೇಳಿ ನನ್ನನ್ನು 15 ದಿನ ಜೈಲಿಗೆ ಹಾಕಿದ್ದರು. ಈ ಹಿಂದೆ ಎರಡು ಬಾರಿ ನಾನು ಜೈಲಿಗೆ ಹೋಗಿದ್ದೇನೆ. ಆದರೆ ಅದು ಯಾವುದೋ ಕೊಲೆ ಪ್ರಕರಣದ ರಾಜಿ ಮಾಡಿಸಲು ಅಲ್ಲ.ಬದಲಿಗೆ ರಾಷ್ಟ್ರಧ್ವಜದ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದೇನೆ’ ಎಂದರು.

‘ಇದನ್ನು ಗಮನಿಸಿ ಜನರು ಮೂರು ಬಾರಿ ಆಯ್ಕೆ ಮಾಡಿದ್ದಾರೆ. ಈ ಬಾರಿಯೂ ಸಂಸದನಾಗಿ ಆಯ್ಕೆ ಆಗುವುದು ನಿಶ್ಚಿತ. ಇಂಥ ಬಹಳಷ್ಟು ಜನ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಕಂಡಿದ್ದೇನೆ. ಇವರು ನಮ್ಮನ್ನು ಹತ್ತಿಕಿದಾಗಲೆಲ್ಲಾ, ನಾವು ಬಲಿಷ್ಠರಾಗುತ್ತಾ ಹೊರಹೊಮ್ಮುತ್ತಿದ್ದೇವೆ’ ಎಂದರು.

ADVERTISEMENT

‘ಹೈಕೋರ್ಟ್‌ ನಿರ್ದೇಶನದಂತೆ ಜೆಎಂಎಫ್‌ಸಿ ನ್ಯಾಯಾಲಯದ ಸೂಚನೆ ಮೇಲೆ ಪ್ರಕರಣ ದಾಖಲಾಗಿದ್ದರೂ ವಿನಯ ಕುಲಕರ್ಣಿ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ’ ಎಂದು ಜೋಶಿ ಆಕ್ರೋಶ ವ್ಯಕ್ತಪಡಿಸಿದರು.

‘ಈ ವಿಷಯ ಕುರಿತಂತೆ ರಾಜ್ಯಪಾಲರ ಮೊರೆಹೋಗಲಾಗುವುದು. ಪೊಲೀಸ್ ಮಹಾನಿರ್ದೇಶಕರಿಗೂ ದೂರು ನೀಡಲಾಗುವುದು. ದಾದಾಗಿರಿ, ಗೂಂಡಾಗಿರಿ ಇಲ್ಲಿ ನಡೆಯಲು ಬಿಡುವುದಿಲ್ಲ. ಹಾಗೆಯೇ ಕುಂದಗೋಳ ವಿಧಾನಸಭಾ ಚುನಾವಣೆಯನ್ನು ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ನಡೆಯಲು ಬಿಡುವುದಿಲ್ಲ. ಇವರನ್ನು ವರ್ಗಾವಣೆ ಮಾಡಲು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಾಗುವುದು’ ಎಂದು ಜೋಶಿ ಹೇಳಿದರು.

ಶಾಸಕ ಅರವಿಂದ ಬೆಲ್ಲದ ಮಾತನಾಡಿ, ‘ವಿನಯ ಕುಲಕರ್ಣಿ ಅವರು ತಮ್ಮ ರಾಜಕೀಯ ವಿರೋಧಿಗಳನ್ನು ಹಾಗೂ ವೈಚಾರಿಕವಾಗಿ ತಮ್ಮನ್ನು ವಿರೋಧಿಸುತ್ತಿರುವವರಿಗೆ ಹೊಡಿ, ಬಡಿ, ಕಡಿ ಕೆಲಸ ಮಾಡಿಕೊಂಡೇ ಬಂದಿದ್ದಾರೆ. ಇವರಿಗೆ ಕ್ಷಮಿಸುವ ದೊಡ್ಡ ಮನಸ್ಸು ಮತ್ತು ಸಹಿಷ್ಣುತೆ ಇಲ್ಲ’ ಎಂದರು.

‘ಮಹಿಳೆಯೊಬ್ಬರನ್ನು ಹೀನಾಯವಾಗಿ ನಡೆಸಿಕೊಳ್ಳುವ ವಿನಯ ಕುಲಕರ್ಣಿ ಅವರ ಹೇಡಿತನ ಅರ್ಥವಾಗತ್ತದೆ. ಎಂ.ಬಿ. ಪಾಟೀಲ ಅವರ ಜತೆ ಹೋಗಿ ನೀವು ಹಾಳಾಗಬೇಡಿ’ ಎಂದು ಸಲಹೆ ನೀಡಿದ ಅವರು, ಪೊಲೀಸರು ವಿನಯ ಮತ್ತು ಎಂ.ಬಿ.ಪಾಟೀಲ ಅವರ ಗುಲಾಮರೇ ಎಂದು ಖಾರವಾಗಿ ಪ್ರಶ್ನಿಸಿದರು.

‘ಕೂಡಲೇ ಶ್ರುತಿ ಬೆಳ್ಳಕ್ಕಿ ಅವರ ಮೇಲೆ ದಾಖಲಾಗಿರುವ ಪ್ರಕರಣ ರದ್ದುಗೊಳಿಸಿ ಬಿ–ವರದಿ ಹಾಕಬೇಕು. ಇಲ್ಲದಿದ್ದರೆ ಪೊಲೀಸರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು’ ಎಂದು ಬೆಲ್ಲದ ಎಚ್ಚರಿಸಿದರು.

ಶಾಸಕ ಅಮೃತ ದೇಸಾಯಿ, ಸವಿತಾ ಅಮರಶೆಟ್ಟಿ, ಶ್ರುತಿ ಬೆಳ್ಳಕ್ಕಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.