ADVERTISEMENT

ಗ್ರಾಮ ಸ್ವರಾಜ್ ಸಮಾವೇಶ ನಾಳೆಯಿಂದ: ಮಹೇಶ

ಗ್ರಾಮ ಪಂಚಾಯಿತಿ ಚುನಾವಣೆಗೆ ಬಿಜೆಪಿ ಅಣಿಗೊಳಿಸಲು ನಾಯಕರ ಪ್ರವಾಸ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2020, 8:35 IST
Last Updated 26 ನವೆಂಬರ್ 2020, 8:35 IST
 ಮಹೇಶ ಟೆಂಗಿನಕಾಯಿ
ಮಹೇಶ ಟೆಂಗಿನಕಾಯಿ   

ಹುಬ್ಬಳ್ಳಿ: ‘ಗ್ರಾಮ ಪಂಚಾಯಿತಿ ಚುನಾವಣೆಗೆ ಗೆಲುವಿನ ಕಾರ್ಯತಂತ್ರ ಹೆಣೆಯುವ ಸಲುವಾಗಿ, ನ. 27ರಿಂದ ಡಿ. 7ರವರೆಗೆ ಜಿಲ್ಲೆಗಳ ಮಟ್ಟದಲ್ಲಿ ಗ್ರಾಮ ಸ್ವರಾಜ್ ಸಮಾವೇಶ ಆಯೋಜಿಸಲಾಗಿದೆ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೇಳಿದರು.

‘ಪ್ರತಿ ಜಿಲ್ಲೆಯ ಎರಡು ಕಡೆ ಸಮಾವೇಶ ನಡೆಯಲಿದೆ. ಇದಕ್ಕಾಗಿ ಸಚಿವರು, ಸಂಸದರು, ಶಾಸಕರು ಹಾಗೂ ರಾಜ್ಯಮಟ್ಟದ ಪದಾಧಿಕಾರಿಗಳನ್ನೊಳಗೊಂಡ ಆರು ತಂಡ ರಚಿಸಲಾಗಿದೆ. ಈ ತಂಡಗಳು ರಾಜ್ಯದಾದ್ಯಮತ ಪ್ರವಾಸ ಮಾಡಿ, ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜಗೊಳಿಸಲಿವೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘27ರಂದು ಉಡುಪಿಯಲ್ಲಿ ನಡೆಯುವ ಮೊದಲ ಸಮಾವೇಶವನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ಕುಮಾರ್ ಕಟೀಲ್ ಉದ್ಘಾಟಿಸಲಿದ್ದಾರೆ. ಪ್ರಮುಖ ಕಾರ್ಯಕರ್ತರು ಮಾತ್ರ ಈ ಸಮಾವೇಶಗಳಲ್ಲಿ ಭಾಗವಹಿಸಲಿದ್ದಾರೆ’ ಎಂದರು.

ADVERTISEMENT

‘ಚುನಾವಣೆಗಾಗಿ ವಾರ್‌ ರೂಂಗಳ ರಚನೆ, ಕಾಲ್‌ ಸೆಂಟರ್‌ಗಳ ಕಾರ್ಯಾರಂಭ, ಪ್ರತಿ ಬೂತ್‌ನಲ್ಲಿ ಐವರು ಕಾರ್ಯಕರ್ತರನ್ನೊಳಗೊಂಡ ಪಂಚರತ್ನ ತಂಡದ ರಚನೆ, ಪೇಜ್‌ ಪ್ರಮುಖರ ನಿಯುಕ್ತಿ ಹಾಗೂ ಕುಟುಂಬ ಮಿಲನ ಎಂಬ ಪಂಚಸೂತ್ರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದರು.

‘ಬೆಳಗಾವಿಯಲ್ಲಿ ಡಿ. 5ರಂದು ಪಕ್ಷದ ವಿಶೇಷ ಕಾರ್ಯಕಾರಿಣಿ ಸಭೆ ನಡೆಯಲಿದೆ. ಆಗ ಮುಂದಿನ ಸಭೆಯನ್ನು ಎಲ್ಲಿ ನಡೆಸಬೇಕು ಎಂದು ನಿರ್ಧರಿಸಲಾಗುವುದು’ ಎಂದು ಹೇಳಿದರು.

ಪಕ್ಷದ ಮುಖಂಡರಾದ ಲಿಂಗರಾಜ ಪಾಟೀಲ, ಈರಣ್ಣ ಜಡಿ, ಬಸವರಾಜ ಕುಂದಗೋಳಮಠ, ವೀರೇಶ ಸಂಗಳದ, ದತ್ತಮೂರ್ತಿ ಕುಲಕರ್ಣಿ, ರವಿ ನಾಯಕ್ ಇದ್ದರು.

* ರೋಲ್‌ಕಾಲ್ ಹೆಸರಿನ ಕನ್ನಡ ಸಂಘಟನೆಯವರು ಯಾರು ಎಂಬುದು ಎಲ್ಲರಿಗೂ ಗೊತ್ತಿದೆ. ಅದಕ್ಕೆ, ಯಾವುದೇ ಸಾಕ್ಷ್ಯಾಧಾರ ಒದಗಿಸುವ ಅಗತ್ಯವಿಲ್ಲ.

– ಅರವಿಂದ ಬೆಲ್ಲದ, ಶಾಸಕ, ಧಾರವಾಡ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.