
ಹುಬ್ಬಳ್ಳಿ: ಬಿಪಿಎಲ್ ಪಡಿತರ ಪಡೆಯಲು ಅನರ್ಹರಿದ್ದರೂ ಅನ್ಯ ಮಾರ್ಗದ ಮೂಲಕ ಬಡವರ ಪಡಿತರ ಪಡೆಯುತ್ತಿರುವ ಶ್ರೀಮಂತರಿಗೆ ಆಹಾರ ಇಲಾಖೆ ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ಬಿಪಿಎಲ್ ಕಾರ್ಡ್‌ಗಳ ಪತ್ತೆ ಕಾರ್ಯ ಚುರುಕುಗೊಳಿಸಿದೆ.
ಈಗಾಗಲೇ ಆಹಾರ ಮತ್ತು ನಾಗರಿಕ ಸರಬರಾಜು ಅಧಿಕಾರಿಗಳು, ಜಿಲ್ಲೆಯಲ್ಲಿ 3,514 ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ಪತ್ತೆ ಹಚ್ಚಿದ್ದಾರೆ. ಅಲ್ಲದೆ, ಅವುಗಳನ್ನು ಎಪಿಎಲ್ ಆಗಿ ಪರಿವರ್ತನೆ ಮಾಡಿದ್ದಾರೆ.
ಕೇಂದ್ರೀಯ ಆಹಾರ ಇಲಾಖೆ ಆದೇಶದನ್ವಯ ₹1.20 ಲಕ್ಷಗಿಂತ ಹೆಚ್ಚು ವಾರ್ಷಿಕ ಆದಾಯ ಹೊಂದಿರುವವರು, 7.5 ಎಕರೆಗಿಂತ ಹೆಚ್ಚು ಜಮೀನು ಹೊಂದಿರುವವರು, ಸರ್ಕಾರಿ ನೌಕರರು ಹಾಗೂ ಆದಾಯ ತೆರಿಗೆ ಪಾವತಿದಾರರು, ವಾರ್ಷಿಕ ₹25 ಲಕ್ಷ ವಹಿವಾಟು ಸೇರಿದಂತೆ ವಿವಿಧ ಕಾರಣಗಳಿಂದ ಜಿಲ್ಲೆಯ 3,514 ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಲಾಗಿದ್ದು, ಅವುಗಳನ್ನು ಎಪಿಎಲ್ ಆಗಿ ಪರಿವರ್ತನೆ ಮಾಡಲಾಗಿದೆ.
ಹುಬ್ಬಳ್ಳಿಯಲ್ಲಿ 1,404 ಬಿಪಿಎಲ್ ಕಾರ್ಡ್‌ಗಳು ರದ್ದಾಗಿದ್ದರೆ, ಅಣ್ಣಿಗೇರಿಯಲ್ಲಿ 48 ಬಿಪಿಎಲ್ ಕಾರ್ಡ್‌ಗಳು ರದ್ದಾಗಿವೆ. ಧಾರವಾಡದಲ್ಲಿ 1,171 ಕಾರ್ಡ್‌ಗಳನ್ನು ಅನರ್ಹಗೊಳಿಸಲಾಗಿದೆ.
‘ಅನ್ನಭಾಗ್ಯ’ ಸೇರಿದಂತೆ ರಾಜ್ಯ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಿದೆ. ಜಿಲ್ಲೆಯಲ್ಲಿ ಉಳ್ಳವರು ಬಡತನ ರೇಖೆಯಲ್ಲಿ ಇರುವವರ ಬಿಪಿಎಲ್ ಕಾರ್ಡ್ ಪಡೆದು ದುರುಪಯೋಗ ಪಡಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಬಿಪಿಎಲ್ ಕಾರ್ಡ್‌ಗಳ ಪರಿಶೀಲನೆ ಕಾರ್ಯ ನಡೆದಿದೆ.
ಧಾರವಾಡ ಜಿಲ್ಲೆಯಲ್ಲಿ ಒಟ್ಟು 3.86 ಲಕ್ಷ ಪಡಿತರ ಚೀಟಿಗಳಿವೆ. ಇದರಲ್ಲಿ ಅನರ್ಹರಾಗಿರುವ 3,514 ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಲಾಗಿದೆ. ಅಲ್ಲದೆ, ಜಿಲ್ಲೆಯಲ್ಲಿ ಅನರ್ಹರಾಗಿದ್ದು, ಬಿಪಿಎಲ್ ಕಾರ್ಡ್ ಬಳಸುತ್ತಿರುವವರನ್ನು ಪತ್ತೆ ಮಾಡುವ ಕಾರ್ಯ ಮುಂದುವರೆದಿದ್ದು, ಮತ್ತಷ್ಟು ಕಾರ್ಡ್‌ದಾರರಿಗೆ ಬಿಸಿ ಮುಟ್ಟಿಸಲು ಆಹಾರ ಇಲಾಖೆ ಮುಂದಾಗಿದೆ. ಇದರ ಜೊತೆಗೆ 6 ತಿಂಗಳಿನಿಂದ ಪಡಿತರ ಪಡೆಯದ ಪಡಿತರದಾರರ ಮೇಲೂ ಕಣ್ಣಿಟ್ಟಿದ್ದು, ಇಲಾಖೆಯಿಂದ ಪರಿಶೀಲನೆ ಕಾರ್ಯ ಚುರುಕು ನಡೆದಿದೆ.
ರದ್ದಾಗಿದ್ದರೇ ದೂರು ಸಲ್ಲಿಸಿ: ತಾವು ಅರ್ಹರಾಗಿದ್ದರೂ, ಅನರ್ಹ ಎಂದು ರದ್ದಾಗಿದ್ದರೆ ತಕ್ಷಣ ಸಮೀಪದ ಆಹಾರ ಇಲಾಖೆ ಕಚೇರಿ ಅಥವಾ ತಾಲ್ಲೂಕು ಕಚೇರಿಗೆ ದೂರು ಸಲ್ಲಿಸಬಹುದಾಗಿದೆ. ಆದಾಯ ಪ್ರಮಾಣಪತ್ರ, ಜಾತಿ, ಆದಾಯ ಪ್ರಮಾಣಪತ್ರ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಕುಟುಂಬದ ಎಲ್ಲ ಸದಸ್ಯರ ಆದಾಯ ಶಪಥಪತ್ರ, ಮನೆ, ಭೂಮಿ ದಾಖಲೆಗಳೊಂದಿಗೆ ದೂರು ಸಲ್ಲಿಸಬಹುದು. ಇಲಾಖೆ ಪುನರ್ ಪರಿಶೀಲಿಸಿ, ಅರ್ಹರಿದ್ದರೆ ಕಾರ್ಡ್ ಮತ್ತೆ ಸಕ್ರಿಯಗೊಳ್ಳುತ್ತದೆ.
ಜಿಲ್ಲೆಯಲ್ಲಿ ಅನರ್ಹ ಬಿಪಿಎಲ್ ಪಡಿತರ ಚೀಟಿದಾರರನ್ನು ಪತ್ತೆ ಮಾಡುವ ಕಾರ್ಯ ನಡೆದಿದೆ. ಈಗಾಗಲೇ 3514 ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಿ ಎಪಿಎಲ್ ಆಗಿ ಪರಿವರ್ತಿಸಲಾಗಿದೆವಿನೋದಕುಮಾರ ಹೆಗ್ಗಳಗಿ ಉಪ ನಿರ್ದೇಶಕರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಧಾರವಾಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.