
ಹುಬ್ಬಳ್ಳಿಯ ಚಿನ್ಮಯ ಪದವಿ ಪೂರ್ವ ಮತ್ತು ಪದವಿ ಮಹಾವಿದ್ಯಾಲಯದಲ್ಲಿ ರಾಷ್ಟ್ರಿಯ ಸೇವಾ ಯೋಜನೆ ವತಿಯಿಂದ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ನಡೆಯುತು.
ಹುಬ್ಬಳ್ಳಿ: ಸಂವಿಧಾನ ದಿನದ ಅಂಗವಾಗಿ ನಗರದ ವಿವಿಧೆಡೆ ಹಲವು ಸಂಘಟನೆಗಳು ಬುಧವಾರ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದವು. ಕಾಲೇಜುಗಳಲ್ಲಿ ವಿಶೇಷ ಉಪನ್ಯಾಸ ಏರ್ಪಡಿಸಿ, ಸಂವಿಧಾನ ದಿನದ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸುವ ಜತೆಗೆ ಸಂವಿಧಾನ ಪೀಠಿಕೆಯ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
‘ಸಂವಿಧಾನ ಬದಲು: ಹೇಳಿಕೆ ತಪ್ಪು’
ನಗರದ ಕಾರವಾರ ರಸ್ತೆಯಲ್ಲಿರುವ ಮಹಾನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ನಡೆದ ಸಂವಿಧಾನ ಬಚಾವ್ ದಿವಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್, ‘ಭಾರತ ಸಂವಿಧಾನ ರಚನೆಯ ಸ್ವರೂಪವೇ ಎಲ್ಲರನ್ನೂ ಒಳ್ಳಗೊಳ್ಳುವ ಮೌಲ್ಯವನ್ನು ಆಧರಿಸಿದೆ. ಇದು ಜನರ ಆಚಾರ, ವಿಚಾರ, ಸಂಸ್ಕೃತಿ ಆಚರಣೆಗೆ ಅಡ್ಡಿಪಡಿಸುವುದಿಲ್ಲ’ ಎಂದು ಅಭಿಪ್ರಾಯಪಟ್ಟರು.
‘ದೇಶದ ಸಂವಿಧಾನ ಬದಲಿಸುವ ಕುರಿತು ಕೆಲವರು ಹೇಳಿಕೆ ನೀಡುತ್ತಿದ್ದಾರೆ. ಸಂವಿಧಾನದಲ್ಲಿ ಯಾವುದೇ ದೋಷ ಇಲ್ಲದ ಕಾರಣ ಬದಲಾವಣೆ ಮಾಡುವುದು ಸರಿಯಲ್ಲ. ದಲಿತ ಮಹಿಳೆ ರಾಷ್ಟ್ರಪತಿ ಹುದ್ದೆ ಅಲಂಕರಿಸಿದ್ದಾರೆ. ದಲಿತರು, ಮಹಿಳೆಯರು, ಅಲ್ಪಸಂಖ್ಯಾತರು ಎಲ್ಲ ಕ್ಷೇತ್ರಗಳನ್ನು ಪ್ರವೇಶಿಸಲು ಸಂವಿಧಾನವೇ ಕಾರಣ. ಸಂವಿಧಾನ ತೋರಿದ ಮಾರ್ಗದಲ್ಲಿ ನಾವು ಸಾಗಬೇಕು’ ಎಂದರು.
ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ವಿಧಾನ ಪರಿಷತ್ ಸದಸ್ಯ ಎಫ್.ಎಚ್. ಜಕ್ಕಪ್ಪನವರ, ಪಕ್ಷದ ಮಹಾನಗರ ಜಿಲ್ಲಾ ಅಧ್ಯಕ್ಷ ಅಲ್ತಾಪ್ ಹಳ್ಳೂರು, ಪದಾಧಿಕಾರಿಗಳು ಇದ್ದರು.
‘ನ್ಯಾಯ, ಸ್ವಾತಂತ್ರ್ಯ, ಸಮಾನತೆಯ ಪ್ರತಿಪಾದನೆ’
ಭೈರಿದೇವರಕೊಪ್ಪದ ಸನಾ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಮಾಜಿಕ ಚಿಂತಕ ಗಣೇಶ್ ದೇವಿ ಮಾತನಾಡಿ, ‘ಸಂವಿಧಾನವು ನೈತಿಕ ದಿಕ್ಕು ಸೂಚಕ. ಅದು ಸಮುದಾಯ, ಧರ್ಮ, ಜಾತಿ ಅಥವಾ ಲಿಂಗವನ್ನು ಮೀರಿ ಸರ್ವರಿಗೂ ನ್ಯಾಯ, ಸ್ವಾತಂತ್ರ್ಯ, ಸಮಾನತೆಯನ್ನು ಪ್ರತಿಪಾದಿಸುತ್ತದೆ’ ಎಂದರು.
‘ವಿದ್ಯಾರ್ಥಿಗಳು ಮತ್ತು ಯುವಜನರು ಸಂವಿಧಾನವನ್ನು ಪ್ರಾಯೋಗಿಕವಾಗಿ ಪಾಲಿಸಬೇಕು. ಎಲ್ಲ ಸಮುದಾಯಗಳನ್ನೂ ಗೌರವಿಸಬೇಕು’ ಎಂದು ಕರೆ ನಿಡಿದರು.
ಅಧ್ಯಕ್ಷ ಎಂ.ಎಂ. ಮಳಗಿ, ಟ್ರಸ್ಟಿಗಳಾದ ಅಶ್ರಫ್ ಅಲಿ, ಮೊಹಮ್ಮದ್ ಸವಣೂರು, ಸರ್ಫರಾಜ್ ಅತ್ತಾರ್, ನಿವೃತ್ತ ಐಎಎಸ್ ಅಧಿಕಾರಿ ನೂರ್ ಅಹ್ಮದ್ ಪಾನಲಿ ಮಾತನಾಡಿದರು. ಅಂಜುಂ ಖಾನ್, ರಾಘವೇಂದ್ರ ಪಟ್ಟಾಜೆ, ಶಾಜಿಯಾ ಇದ್ದರು.
ಎಸ್.ಜೆ.ಎಂ.ವಿ.ಎಸ್. ಕಲಾ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಅತಿಥಿಗಳಿಗೆ ಸಂವಿಧಾನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಕಾನೂನು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಸುನಿಲ್ ಬಗಾಡೆ, ಪ್ರಾಚಾರ್ಯ ಸಿಸಿಲಿಯಾ ಡಿ’ಕ್ರೂಜ್, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಮಹದೇವ ಹರಿಜನ, ಲಕ್ಷ್ಮಣ ಹೊಸಮನಿ, ಮಹೇಶ್ವರಿ ಉದಗಟ್ಟಿ, ಸುಪ್ರಿಯಾ ಮಲಶೆಟ್ಟಿ, ಶಿವಕುಮಾರ ಪ್ರಭಯ್ಯನವರಮಠ, ಗುರುರಾಜ ನವಲಗುಂದ, ತಾಯಣ್ಣ ಎಚ್. ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.