ADVERTISEMENT

ಆರ್ಥಿಕ ಅಭಿವೃದ್ಧಿಗೆ ಪೂರಕ ಬಜೆಟ್‌: ಸಚಿವ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 11:10 IST
Last Updated 23 ಜನವರಿ 2020, 11:10 IST
ಹುಬ್ಬಳ್ಳಿ ವಾಣಿಜ್ಯೋದ್ಯಮ ಸಂಸ್ಥೆ ವತಿಯಿಂದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆ ಅಧ್ಯಕ್ಷ ಮಹೇಂದ್ರ ಲದ್ದಡ, ಶಂಕರಣ್ಣ ಮುನವಳ್ಳಿ ಇದ್ದಾರೆ
ಹುಬ್ಬಳ್ಳಿ ವಾಣಿಜ್ಯೋದ್ಯಮ ಸಂಸ್ಥೆ ವತಿಯಿಂದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆ ಅಧ್ಯಕ್ಷ ಮಹೇಂದ್ರ ಲದ್ದಡ, ಶಂಕರಣ್ಣ ಮುನವಳ್ಳಿ ಇದ್ದಾರೆ   

ಹುಬ್ಬಳ್ಳಿ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಆರ್ಥಿಕ ಅಭಿವೃದ್ಧಿಗೆ ಪೂರಕವಾಗುವ ಬಜೆಟ್‌ ಮಂಡಿಸಲಿವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸಭಾಂಗಣದಲ್ಲಿ ಬುಧವಾರ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಸಹ ಆರ್ಥಿಕ ಹಿಂಜರಿತದಿಂದ ಸಾಕಷ್ಟು ನಷ್ಟ ಅನುಭವಿಸಿವೆ. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾದ ಭಾರತ ಸಹ ಅದಕ್ಕೆ ಹೊರತಾಗಿಲ್ಲ. ದೇಶದ ಆರ್ಥಿಕ ಚಟುವಟಿಕೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಜೆಟ್‌ ಸಿದ್ಧ ಪಡಿಸಲಾಗುತ್ತಿದೆ’ ಎಂದರು.

ADVERTISEMENT

ವ್ಯಾಪಾರ ವಹಿವಾಟಿನಲ್ಲಿ ಅಡಚಣೆ ಉಂಟು ಮಾಡುವ ಕಾನೂನು ಇರಬಾರದು. 35ಎ ಕಾಯ್ದೆಯಲ್ಲಿ ವ್ಯಾಪಾರಸ್ಥರಿಗೆ ತೊಡಕಾಗುತ್ತಿರುವುದು ಕಂಡು ಬಂದಿದ್ದು, ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಎಪಿಎಂಸಿ ಸೆಸ್‌ ರದ್ದು ಪಡಿಸಲು ಹಣಕಾಸಿನ ಇಲಾಖೆ ಹಾಗೂ ಮುಖ್ಯಮಂತ್ರಿ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಭರವಸೆ ನೀಡಿದರು.

ಬ್ಯಾಡಗಿ ಮೆಣಸಿನ ತಳಿ ಅಭಿವೃದ್ಧಿ ಪಡಿಸಲು ಕೃಷಿ ವಿಶ್ವವಿದ್ಯಾಲಯದ ತಜ್ಞರೊಂದಿಗೆ ಚರ್ಚೆ ನಡೆಸಲಾಗುವುದು. ಬಜೆಟ್‌ನಲ್ಲಿ ಅದಕ್ಕಾಗಿಯೇ ವಿಶೇಷ ಅನುದಾನ ಮೀಸಲಿಡಲಾಗುವುದು ಎಂದರು.

ಅವಳಿ ನಗರದಲ್ಲಿ ಸಂಚಾರ ಸುವ್ಯವಸ್ಥೆಗಾಗಿ ಪ್ರಮುಖ ಪ್ರದೇಶಗಳಲ್ಲಿ 1,500 ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಪೊಲೀಸ್‌ ಕಮಿಷನರ್‌ ಅವರಿಗೆ ಸೂಚಿಸಿದ್ದೇನೆ. ಸಂಚಾರ ನಿಯಮ ಉಲ್ಲಂಘನೆಯಿಂದ ಸಂಗ್ರಹವಾಗುವ ಶೇ 50ರಷ್ಟು ಹಣವನ್ನು ಸಿಗ್ನಲ್‌ಗಳ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಲು ತಿಳಿಸಿದ್ದೇನೆ ಎಂದರು.

ಅಮರಗೋಳ ಎಪಿಎಂಸಿಯಲ್ಲಿ ನಡೆಯುತ್ತಿರುವ ಕಳ್ಳತನ ಪ್ರಕರಣ ನಿಯಂತ್ರಣಕ್ಕೆ, ಎಪಿಎಂಸಿ ಆಡಳಿತ ಮಂಡಳಿ ಸೂಕ್ತ ಭದ್ರತೆ ಒಗಿಸಿಕೊಳ್ಳಬೇಕು. ಅನಧಿಕೃತ ಪ್ರವೇಶ ದ್ವಾರಗಳನ್ನು ಬಂದ್‌ ಮಾಡಬೇಕು. ಪೊಲೀಸ್‌ ಇಲಾಖೆಯಿಂದಲೂ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ, ರಾತ್ರಿ ವೇಳೆ ಗಸ್ತು ತಿರುಗುವಂತೆ ಸೂಚಿಸಲಾಗುವುದು ಎಂದು ತಿಳಿಸಿದರು.

ವಿವಿಧ ಜಿಲ್ಲೆಗಳಿಂದ ಬಂದ ವ್ಯಾಪಾರಸ್ಥರು ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಸಚಿವರಿಗೆ ಮನವಿ ಸಲ್ಲಿಸಿದರು. ಸಂಸ್ಥೆ ಅಧ್ಯಕ್ಷ ಮಹೇಂದ್ರ ಲದ್ದಡ, ಗೌರವ ಕಾರ್ಯದರ್ಶಿ ಅಶೋಕ ಗಡಾದ, ಉಪಾಧ್ಯಕ್ಷ ವಿನಯ ಜವಳಿ, ಸಿದ್ಧೇಶ್ವರ ಕಮ್ಮಾರ, ಶಂಕರಣ್ಣ ಮುನವಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.