
ತಿಕೋಟಾ: ಹಿಂದೂ ಧರ್ಮ ಜಗತ್ತಿಗೆ ಸಂಸ್ಕೃತಿ, ಆಚಾರ–ವಿಚಾರ, ನಾಗರಿಕತೆಯ ಬದುಕು ಹೇಳಿಕೊಟ್ಟಿದೆ. ನಮ್ಮ ದೇಶದಲ್ಲಿ ಹಿಂದೂ ಧರ್ಮ ಉಳಿಯಬೇಕೆಂದರೆ ನಾವು ಸಂಘಟಿತರಾಗಬೇಕು ಎಂದು ಆರ್‌ಎಸ್‌ಎಸ್ ಉತ್ತರ ಕರ್ನಾಟಕದ ಸಹ ಪ್ರಾಂತ ಸಂಚಾಲಕ ಶ್ರೀನಿವಾಸ ನಾಯ್ಕ ಹೇಳಿದರು.
ಪಟ್ಟಣದ ಛತ್ರಪತಿ ಶಿವಾಜಿ ವೃತ್ತದಲ್ಲಿ ಆರ್.ಎಸ್.ಎಸ್. ನೂರು ವರ್ಷ ಆಚರಣೆ ನಿಮಿತ್ತ ತಿಕೋಟಾ ಮಂಡಲ ವತಿಯಿಂದ ಸೋಮವಾರ ನಡೆದ ಬೃಹತ್ ಹಿಂದೂ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.
‘ಸದ್ಯ ನಡೆಯುತ್ತಿರುವ ಹಿಂದೂ ಸಮಾವೇಶ ಯಾರ ವಿರುದ್ಧವೂ ಅಲ್ಲ. ಸಮಾಜದಲ್ಲಿ ಒಗ್ಗಟ್ಟಿನಿಂದ ಬಾಳಬೇಕಿದೆ. ದೇಶದಲ್ಲಿ ಆಯಾ ಧರ್ಮಕ್ಕೆ ಅನುಗುಣವಾಗಿ ತಮ್ಮ ಮನೆಗಳಲ್ಲಿ ಪೂಜೆ ಮಾಡುತ್ತಾರೆ. ಆದರೂ ನಾವೆಲ್ಲ ಹಿಂದೂ, ನಾವೆಲ್ಲ ಒಂದು ಎಂಬ ಮನೋಭಾವ ಎಲ್ಲರಲ್ಲಿ ಬರಬೇಕು’ ಎಂದರು.
‘ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸಂಗೋಳ್ಳಿ ರಾಯಣ್ಣ, ಕಿತ್ತೂರ ರಾಣಿ ಚನ್ನಮ್ಮ, ಸಿಂಧೂರ ಲಕ್ಷ್ಮಣ, ವೀರ ಸಾರ್ವಕರ್ ಇವರೆಲ್ಲ ದೇಶದ ಏಳ್ಗೆಗಾಗಿ ಪ್ರಾಣ ಕೊಟ್ಟರು. ಇವರಲ್ಲಿ ಜಾತಿ–ಭೇದ ಇರಲಿಲ್ಲ. ಈಗ ಎಲ್ಲ ಜಾತಿಯವರನ್ನು ಒಗ್ಗೂಡಿಸುವ ಕೆಲಸವಾಗಬೇಕು’ ಎಂದು ಹೇಳಿದರು.
ಮನಗೂಳಿಯ ಸಂಗನಬಸವ ಶಿವಾಚಾರ್ಯರು, ತಿಕೋಟಾ ಹಿರೇಮಠದ ಶಿವಬಸವ ಶಿವಾಚಾರ್ಯರು, ವಿರಕ್ತಮಠದ ಚನ್ನಮಲ್ಲಿಕಾರ್ಜುನ ಸ್ವಾಮಿಜಿ, ರಾಂಪುರ ಚಂದ್ರಗಿರಿಮಠದ ವಿದ್ಯಾನಂದ ಸ್ವಾಮೀಜಿ ಮಾತನಾಡಿದರು.
ಮಹಾನ್ ಸಂತರ ಹಾಗೂ ನಾಯಕರ ಭಾವಚಿತ್ರಗಳನ್ನು ಎತ್ತಿನ ಗಾಡಿಯಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಕಾರ್ಯಕ್ರಮದ ಅದ್ಯಕ್ಷ ರಾಜು ಚೌಧರಿ, ಉಪಾಧ್ಯಕ್ಷ ಮಾನಿಂಗ ಮಂಟೂರ, ಸುರೇಶ ಕೊಣ್ಣೂರ, ಸಿದ್ರಾಮ ಪೂಜಾರಿ, ರಾಜೇಂದ್ರ ಕುಲಕರ್ಣಿ, ಚಂದ್ರಕಾಂತ ತೊರವಿ, ಎಂ.ಎಸ್.ಜತ್ತಿ, ರಾವತ ಕಂಬಾರ, ಗೀತಾ ತಾಳಿಕೋಟಿ, ಮುತ್ತು ಲಂಗೂಟಿ, ಲೇಪೂ ಕೊಣ್ಣೂರ, ಶ್ರೀಕಾಂತ ಪರನಾಕರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.