
ಹುಬ್ಬಳ್ಳಿ: ತಾಲ್ಲೂಕಿನ ಇನಾಂ ವೀರಾಪುರ ಗ್ರಾಮಕ್ಕೆ ಶನಿವಾರ ಭೇಟಿ ನೀಡಿದ ಸಂಸದ ಗೋವಿಂದ ಕಾರಜೊಳ ಮತ್ತು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಅವರು, ದೌರ್ಜನ್ಯಕ್ಕೆ ಒಳಗಾದ ದೊಡಮನಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಮರ್ಯಾದೆಗೇಡು ಹತ್ಯೆಯಾದ ಮಾನ್ಯಾ ಅವರ ಪತಿ ವಿವೇಕಾನಂದ ಅವರಿಂದ ಪ್ರಕರಣದ ಹಿನ್ನೆಲೆ ಹಾಗೂ ಕೃತ್ಯದ ಕುರಿತು ಮಾಹಿತಿ ನೀಡಿದರು.
‘ಗ್ರಾಮಕ್ಕೆ ಮರಳಿ ಒಂದು ವಾರವಾದರೂ, ಯಾರೊಬ್ಬರೂ ಬಂದು ಮಾತನಾಡಿಸಿಲ್ಲ. ಇದೇ ಪರಿಸ್ಥಿತಿಯಿದ್ದರೆ ಗ್ರಾಮದಲ್ಲಿ ವಾಸ ಮಾಡುವುದು ಕಷ್ಟವಾಗುತ್ತದೆ’ ಎಂದು ಅಳಲು ತೋಡಿಕೊಂಡರು. ಧೈರ್ಯ ತುಂಬಿದ ಸಂಸದರು, ವೈಯಕ್ತಿಕವಾಗಿ ಆರ್ಥಿಕ ಸಹಾಯ ಮಾಡಿದರು.
‘ಜಾತಿ ಮೇಲೆ ವೈಷಮ್ಯ ಇರಬಹುದು. ಆದರೆ, ಆರು ತಿಂಗಳ ಗರ್ಭಿಣಿಯನ್ನು ಅಪ್ಪನೇ ಕೊಲೆ ಮಾಡುತ್ತಾನೆ ಎಂದರೆ ಇದಕ್ಕಿಂತ ರಾಕ್ಷಸೀ ಕೃತ್ಯ ಮತ್ತೊಂದು ಇಲ್ಲ. ಮನುಷ್ಯರಾದವರು ಇಂತಹ ಕೆಲಸ ಮಾಡಲು ಸಾಧ್ಯವಿಲ್ಲ. ಮಾನವೀಯತೆ ಇಲ್ಲದಿದ್ದರೆ, ಸಮಾಜಕ್ಕೆ ಕಂಟಕರಾಗಿದ್ದೇವೆ ಎನಿಸಿದರೆ ತಾವೇ ದೇಹತ್ಯಾಗ ಮಾಡಬೇಕಿತ್ತು’ ಎಂದು ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಹೇಳಿದರು.
‘ಸ್ವಾತಂತ್ರ್ಯಾ ನಂತರ ಕಾನೂನು ಕ್ರಮದಿಂದ ಜಾತಿ ವ್ಯವಸ್ಥೆ ಕಡಿಮೆಯಾಗಿತ್ತು. ಇದೀಗ ಮತ್ತೆ ಹೆಚ್ಚುತ್ತಿರುವುದು ಮಾನವ ಕುಲಕ್ಕೆ ಅಪಮಾನ. ಇನಾಂ ವೀರಾಪುರದಲ್ಲಿ ನಡೆದ ಘಟನೆಯನ್ನು ಅನೇಕ ಸಂಘಟನೆಗಳು ಖಂಡಿಸಿವೆ. ಆದರೆ, ಸಮಾಜಕ್ಕೆ ಕೆಟ್ಟ ಹೆಸರು ತರಲು ಒಬ್ಬ ವ್ಯಕ್ತಿ ಸಾಕು. ಕೃತ್ಯ ನಡೆದು ಇಷ್ಟು ದಿನವಾದರೂ ಊರಿನ ಯಾರೊಬ್ಬರೂ ಅವರನ್ನು ಮಾತನಾಡಿಸಿಲ್ಲ ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ. ಅವರ ಕುಟುಂಬಕ್ಕೆ ಪುನರ್ವಸತಿ ಆಗಬೇಕು’ ಎಂದು ಆಗ್ರಹಿಸಿದರು.
ಸಂಸದ ಗೋವಿಂದ ಕಾರಜೋಳ ಮಾತನಾಡಿ, ‘ಇದು ಮನುಕುಲವೇ ತಲೆತಗ್ಗಿಸುವ ಘಟನೆ. ತಲೆ ಎತ್ತಿ ಓಡಾಡಲಾಗದ ಸ್ಥಿತಿ ನಮ್ಮದಾಗಿದೆ. ಪ್ರಕರಣ ನಡೆದು ಇಪ್ಪತ್ನಾಲ್ಕು ಗಂಟೆ ಒಳಗೆ ಗೃಹ ಸಚಿವರು ಭೇಟಿ ನೀಡಿ ಮಾಹಿತಿ ಪಡೆಯಬೇಕಿತ್ತು. ಆದರೆ, ನಿರ್ಲಕ್ಷ್ಯ ವಹಿಸಿ ವಾರದ ಬಳಿಕ ಬಂದಿದ್ದು, ದಲಿತ ವಿರೋಧಿ ನಡೆ. ನೊಂದ ಕುಟುಂಬಗಳಿಗೆ ಶಹರದಲ್ಲಿ ತಕ್ಷಣ ಐದು ಮನೆಗಳನ್ನು ನೀಡಿ, ವಿವೇಕ ದೊಡಮನಿ ಅವರಿಗೆ ಸರ್ಕಾರಿ ಉದ್ಯೋಗ ನೀಡಬೇಕು’ ಎಂದು ಆಗ್ರಹಿಸಿದರು.
ಮುಖಂಡರಾದ ಲಿಂಗರಾಜ ಪಾಟೀಲ, ಮಹೇಂದ್ರ ಕೌತಾಳ, ವಸಂತ ನಾಡಜೋಶಿ, ಅನೂಪ ಬಿಜವಾಡ, ಶ್ರೀಧರ ಕಂದಗಲ್, ಸುರೇಶ ಖಾನಾಪುರ ಇದ್ದರು.
‘ಗೃಹ ಸಚಿವರ ಬದಲಾವಣೆಯಾಗಲಿ’
‘ಮಹಾರಾಷ್ಟ್ರದ ಪೊಲೀಸರು ಮಾಹಿತಿ ಪಡೆದು ರಾಜ್ಯದಲ್ಲಿ ನಡೆಯುತ್ತಿರುವ ಡ್ರಗ್ಸ್ ದಂಧೆಯನ್ನು ಪತ್ತೆ ಹಚ್ಚುತ್ತಾರೆ ಎಂದರೆ ಗೃಹ ಇಲಾಖೆ ಏನು ಮಾಡುತ್ತಿದೆ? ಸಚಿವ ಜಿ. ಪರಮೇಶ್ವರ ಅವರು ಸೌಮ್ಯ ಸ್ವಭಾವದವರಾಗಿದ್ದು ಅವರಿಗೆ ಆ ಇಲಾಖೆ ಹೊಂದುವುದಿಲ್ಲ. ಅವರನ್ನು ಬದಲಾಯಿಸಬೇಕು’ ಎಂದು ಚಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು. ‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಗೃಹ ಸಚಿವರ ಹಿಡಿತದಲ್ಲಿ ಯಾವುದೂ ಇಲ್ಲ. ಅವರದ್ದೇ ಪಕ್ಷದ ಶಾಸಕರು ನಾಯಕರು ದ್ವೇಷ ಭಾಷಣ ಮಾಡುತ್ತಾರೆ. ಯವುದೇ ಕ್ರಮಗಳು ಆಗುವುದಿಲ್ಲ. ಇದನ್ನೆಲ್ಲ ನಿಭಾಯಿಸಲು ಆಗುವುದಿಲ್ಲ ಎಂದಾದರೆ ಅಧಿಕಾರ ತ್ಯಾಗ ಮಾಡಲಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.