ADVERTISEMENT

ಮೇಲ್ಸೇತುವೆ ನಿರ್ಮಾಣಕ್ಕೆ ಕೇಂದ್ರದಿಂದ ₹784 ಕೋಟಿ ಅನುದಾನ : ಪ್ರಲ್ಲಾದ್ ಜೋಶಿ

​ಪ್ರಜಾವಾಣಿ ವಾರ್ತೆ
Published 24 ಜುಲೈ 2023, 15:48 IST
Last Updated 24 ಜುಲೈ 2023, 15:48 IST
ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ   

ಹುಬ್ಬಳ್ಳಿ: ಕೇಂದ್ರ ರಸ್ತೆ ಮೂಲ ಸೌಕರ್ಯ ನಿಧಿಯ ಸೇತುಬಂಧನ್ ಯೋಜನೆ ಅಡಿಯಲ್ಲಿ ರಾಜ್ಯದಲ್ಲಿ ₹ 784 ಕೋಟಿ ವೆಚ್ಚದಲ್ಲಿ 22 ಮೇಲ್ಸೇತುವೆ ನಿರ್ಮಾಣಕ್ಕೆ ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಅನುಮೋದನೆ ನೀಡಿದೆ. ಈ ಅನುಮೋದನೆಯಲ್ಲಿ ನನ್ನ ಲೋಕಸಭಾ ಕ್ಷೇತ್ರದ ಎರಡು ಕಾಮಗಾರಿಗಳೂ ಸೇರಿವೆ ಎಂದು ಕೇಂದ್ರ ಸಚಿವ  ಪ್ರಲ್ಹಾದ ಜೋಶಿ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರೈಲ್ವೆ ಲೆವೆಲ್ ಕ್ರಾಸಿಂಗ್ ಬಳಿ ಸಂಭವಿಸುತ್ತಿರುವ ಅಪಘಾತ ತಡೆ ಹಾಗೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ಮೇಲ್ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ. ಹಿಂದೆ ನಾನು ಕೇಂದ್ರ ರಸ್ತೆ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರಿಗೆ ಅಣ್ಣಿಗೇರಿ ಪಟ್ಟಣದ ರೈಲ್ವೆ ಗೇಟ್ ನಂ. 19ಕ್ಕೆ ಮೇಲ್ಸೇತುವೆ ಹಾಗೂ ಅಳ್ನಾವರ ಪಟ್ಟಣದ ರೈಲ್ವೆ ಅಂಡರ ಬ್ರಿಡ್ಜ್ ತುಂಬಾ ಕಿರಿದಾಗಿದ್ದು, ಅದರ ಅಗಲೀಕರಣಕ್ಕೆ ವಿನಂತಿಸಿದ್ದೆ. ನನ್ನ ವಿನಂತಿಯ ಮೇರೆಗೆ ಈ ಎರಡೂ ಕಾಮಗಾರಿಗಳಿಗೆ ತಲಾ ₹ 30 ಕೋಟಿಯಂತೆ ಒಟ್ಟು ₹ 60 ಕೋಟಿ ಅನುದಾನ ಒದಗಿಸಿದ್ದಾರೆ ಎಂದು ಅವರು ವಿವರಿಸಿದರು.

ಇದರಿಂದ ಖಾನಾಪೂರ- ಅಳ್ನಾವರ- ಹಳಿಯಾಳ ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಸಂಪರ್ಕ ವ್ಯವಸ್ಥೆ ಸುಗಮಗೊಳ್ಳಲಿದೆ. ಇದರ ಜೊತೆಗೆ ಅಳ್ನಾವರ ಪಟ್ಟಣದ ನಾಗರಿಕರಿಗೆ ದಿನನಿತ್ಯದ ಸಂಚಾರದಲ್ಲಿ ಆಗುತ್ತಿದ್ದ ಅಡೆತಡೆ ನಿವಾರಣೆಯಾಗಲಿದೆ. ಹಾಗೆಯೇ ಅಣ್ಣಿಗೇರಿ ಪಟ್ಟಣದ ಓವರ್ ಬ್ರಿಡ್ಜ್ ನಿರ್ಮಾಣದಿಂದ ಅಣ್ಣಿಗೇರಿ-ಹಳ್ಳಕೇರಿ-ಇಬ್ರಾಹಿಂಪೂರ ಮುಖ್ಯ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ರೈಲ್ವೆ ಗೇಟ್ ರಹಿತವಾಗಿ ಯಾವುದೇ ಅಡೆತಡೆ ಇಲ್ಲದೇ ಸಂಚರಿಸಬಹುದು. ಈ ಎರಡು ಬೇಡಿಕೆಗಳು ಬಹುದಿನಗಳಿಂದ ಇದ್ದು, ಅದೀಗ ಸಾಕಾರಗೊಂಡಂತಾಗಿದೆ ಎಂದು ಹೇಳಿದ್ದಾರೆ.

ADVERTISEMENT

24 ತಿಂಗಳಲ್ಲಿ ಈ ಕಾರ್ಯ ಪೂರ್ಣಗೊಳಿಸುವಂತೆ ರಾಜ್ಯದ ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗಕ್ಕೆ ಸೂಚಿಸಲಾಗಿದೆ. ಈ ಕಾಮಗಾರಿಯನ್ನು ಕೈಗೊಳ್ಳಲು ಕೂಡಲೇ ಟೆಂಡರ್ ಪ್ರಕ್ರಿಯೆ ಕೈಗೊಳ್ಳುವಂತೆ ರಾಜ್ಯ ಸರ್ಕಾರ ಹಾಗೂ ಲೋಕೋಪಯೋಗಿ ಸಚಿವರಿಗೆ ಕೋರುತ್ತೇನೆ ಎಂದು ಸಚಿವ ಜೋಶಿಯವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.