ADVERTISEMENT

ಸನಾತನ ಧರ್ಮ ಹತ್ತಿಕ್ಕಲು ಷಡ್ಯಂತ್ರ: ಸೂಲಿಬೆಲೆ

ಮೂರುದಿನಗಳ ಸರಣಿ ಉಪನ್ಯಾಸ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2023, 4:09 IST
Last Updated 9 ಡಿಸೆಂಬರ್ 2023, 4:09 IST
ಹುಬ್ಬಳ್ಳಿಯಲ್ಲಿ ಶುಕ್ರವಾರದಿಂದ ಆರಂಭವಾದ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಯುವ ಬ್ರಿಗೇಡ್‌ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲಿ ಮಾತನಾಡಿದರು
ಹುಬ್ಬಳ್ಳಿಯಲ್ಲಿ ಶುಕ್ರವಾರದಿಂದ ಆರಂಭವಾದ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಯುವ ಬ್ರಿಗೇಡ್‌ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲಿ ಮಾತನಾಡಿದರು   

ಹುಬ್ಬಳ್ಳಿ: ‘ಸನಾತನ ಧರ್ಮ, ಸಂಸ್ಕೃತಿ ಹತ್ತಿಕ್ಕಲು ಷಡ್ಯಂತ್ರಗಳು ನಡೆಯುತ್ತಿದ್ದು, ಭಾರತೀಯರಾದ ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ’ ಎಂದು ಯುವ ಬ್ರಿಗೇಡ್‌ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಇಲ್ಲಿನ ಸವಾಯಿ ಗಂಧರ್ವ ಸಭಾಭವನದಲ್ಲಿ ಶುಕ್ರವಾರದಿಂದ ಆರಂಭವಾದ ನಮೋ ಬ್ರಿಗೇಡ್ ಹಮ್ಮಿಕೊಂಡಿರುವ ‘ಇನ್ನೂ ಮಲಗಿದರೆ, ಏಳುವಾಗ ಭಾರತವಿರುವುದಿಲ್ಲ’ ಮೂರು ದಿನಗಳ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಗತ್ತಿನಲ್ಲಿಯೇ ಅತ್ಯಂತ ಉತ್ಕೃಷ್ಟ ಸಂಸ್ಕೃತಿ ಹೊಂದಿರುವ ದೇಶ ಭಾರತ. ಮುಸ್ಲಿಮ್‌ ದೊರೆಗಳು, ಕ್ರಿಶ್ಚಿಯನ್‌ ಮಿಷನರಿಗಳು ದೇಶದ ಮೇಲೆ ಸಾರ್ವಭೌಮತ್ವ ಸಾಧಿಸಲು ಎರಡು, ಮೂರು ಶತಮಾನಗಳಿಂದ ಯತ್ನಿಸುತ್ತಲೇ ಇದ್ದಾರೆ. ಈಗಲೂ ನಮ್ಮ ಪಕ್ಕದಲ್ಲಿಯೇ ಇರುವವರು, ಜೊತೆಗೇ ಓಡಾಡುವವರು ಸಂಸ್ಕೃತಿ ನಾಶಕ್ಕೆ ಯತ್ನಿಸುತ್ತಿದ್ದಾರೆ. ಅರಿವಿಲ್ಲದೆ ನಾವು ಅವರ ದಾಳಗಳಾಗುತ್ತಿದ್ದೇವೆ. ದೇಶದ ತುಂಬೆಲ್ಲ ವಿಷಸರ್ಪಗಳೇ ತುಂಬಿದರೆ, ಅಪಾಯ ಕಟ್ಟಿಟ್ಟ ಬುತ್ತಿ. ಭಾರತೀಯರೆಲ್ಲ ಎಚ್ಚೆತ್ತುಕೊಳ್ಳುವ ಅಗತ್ಯವಿದೆ’ ಎಂದರು.

ADVERTISEMENT

‘ತಾವು ಮೂಲದಲ್ಲಿ ಹಿಂದುಗಳು ಎಂದು ಪ್ರಜ್ಞಾವಂತ ಮುಸ್ಲಿಮರು ಒಪ್ಪಿಕೊಳ್ಳುತ್ತಿದ್ದಾರೆ. ಜಾವೆದ್‌ ಅಕ್ತರ್‌, ಗುಲಾಬಿನಬಿ ಆಜಾದ್‌ ಅವರು ಈ ಮಾತನ್ನು ಒಪ್ಪಿಕೊಂಡಿದ್ದಾರೆ. ನಮ್ಮ ಪೂರ್ವಜರು ಹಿಂದೂಗಳೇ ಆಗಿದ್ದರು ಎಂದು ಹೇಳಿದ್ದಾರೆ. ಇತ್ತೀಚೆಗೆ ಅವರ ಆಲೋಚನೆಗಳು ಬದಲಾಗುತ್ತಿವೆ. ವ್ಯಾಪಾರದ ಉದ್ದೇಶದಿಂದ ದೇಶಕ್ಕೆ ಬಂದ ಕ್ರಿಶ್ಚಿಯನ್‌ರು ಇಲ್ಲಿಯ ದೇವಾಲಯಗಳನ್ನು ಚರ್ಚ್‌ಗಳೆಂದು ತಿಳಿದರು. ಅರ್ಚಕರನ್ನು ಪೀಟರ್‌ ಎಂದರು. ದೇಶದ ಸಂಸ್ಕೃತಿ ದೂಷಿಸಲು ಆರಂಭಿಸಿದರು. ಅನಾಗರಿಕ ಭಾರತ, ಕ್ರೌರ್ಯದ ಧರ್ಮ, ಸ್ತ್ರೀ ವಿರೋಧಿ, ಜಾತಿ ವೈಷಮ್ಯ ಎಂದೆಲ್ಲ ಹೇಳಿದರು. ನಮ್ಮನ್ನ ಸಾಂಸ್ಕೃತಿಕವಾಗಿ ಹತ್ಯೆ ಮಾಡಿ, ಮತಾಂತರ ಮಾಡಲು ಯತ್ನಿಸಿದರು. ಆದರೂ, ಭಾರತ ಸನಾತನ ಸಂಸ್ಕೃತಿಯನ್ನು ಗಟ್ಟಿತನದಿಂದ ಕಾಪಿಟ್ಟುಕೊಂಡಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.