ADVERTISEMENT

ಚಂದ್ರಮೌಳೇಶ್ವರ ದೇಗುಲಕ್ಕೆ ಅಭಿವೃದ್ಧಿ ಸ್ಪರ್ಶ: ₹25.50 ಕೋಟಿ ವೆಚ್ಚದ DPR ಸಿದ್ಧ

ಭೂಸ್ವಾಧೀನಕ್ಕೆ 68 ಆಸ್ತಿ ಗುರುತು

ಸತೀಶ ಬಿ.
Published 14 ಆಗಸ್ಟ್ 2025, 5:00 IST
Last Updated 14 ಆಗಸ್ಟ್ 2025, 5:00 IST
<div class="paragraphs"><p>ಹುಬ್ಬಳ್ಳಿಯ ಉಣಕಲ್‌ನಲ್ಲಿರುವ ಚಂದ್ರಮೌಳೇಶ್ವರ ದೇವಸ್ಥಾನ </p></div>

ಹುಬ್ಬಳ್ಳಿಯ ಉಣಕಲ್‌ನಲ್ಲಿರುವ ಚಂದ್ರಮೌಳೇಶ್ವರ ದೇವಸ್ಥಾನ

   

ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ

ಹುಬ್ಬಳ್ಳಿ: ನಗರದ ಉಣಕಲ್‌ನಲ್ಲಿರುವ 12ನೇ ಶತಮಾನದ ಕಲ್ಯಾಣ ಚಾಲುಕ್ಯರ ಕಾಲದ  ಚಂದ್ರಮೌಳೇಶ್ವರ ದೇವಸ್ಥಾನವು ಅಭಿವೃದ್ಧಿಯ ಪಥದಲ್ಲಿದೆ. ಇದಕ್ಕಾಗಿ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲಾಗಿದೆ.

ADVERTISEMENT

1271.24 ಚದರ ಮೀ. ಜಾಗದಲ್ಲಿ ಇರುವ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಭೂಸ್ವಾಧೀನ ಸೇರಿ ₹25.50 ಕೋಟಿ ವೆಚ್ಚವಾಗುತ್ತದೆ ಎಂದು ಪಾಲಿಕೆಯ ವಲಯ ಕಚೇರಿ–5 ಅಂದಾಜಿಸಿದೆ.

ದೇವಸ್ಥಾನದ ಸುತ್ತ ಮೂಲಸೌಕರ್ಯ ಕಲ್ಪಿಸಲು ಮೊದಲ ಹಂತದಲ್ಲಿ 7,656.89 ಚ.ಮೀ ಜಾಗ ಭೂಸ್ವಾಧೀನಕ್ಕೆ ಗುರುತಿಸಲಾಗಿದೆ. ಅದರಲ್ಲಿ 53 ಮನೆ, 15 ಖಾಲಿ ಜಾಗ ಸೇರಿ ಒಟ್ಟು 68 ಆಸ್ತಿಗಳಿವೆ. ಭೂಸ್ವಾಧೀನ ಮಾಡಿಕೊಳ್ಳಬೇಕಿರುವ ಜಾಗದ ಮೌಲ್ಯ ಉಪನೋಂದಣಾಧಿಕಾರಿಗಳ ಮಾರ್ಗಸೂಚಿ ದರಪಟ್ಟಿ–2019ರ ಅನ್ವಯ ₹18 ಕೋಟಿ ಆಗುತ್ತದೆ. ನಂತರ, ₹7.50 ಕೋಟಿ ವೆಚ್ಚದಲ್ಲಿ ಮೂಲಸೌಕರ್ಯ ಕಲ್ಪಿಸಲು ಯೋಜಿಸಲಾಗಿದೆ.

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಸುಪರ್ದಿಯಲ್ಲಿ ಈ ದೇವಸ್ಥಾನ ಇದೆ. ಹೀಗಾಗಿ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯದೆ ಅದರ ಸುತ್ತ 100 ಮೀ., ಪ್ರದೇಶ ಮಿತಿ ಮತ್ತು  300 ಒಳಗೆ ಯಾವುದೇ ಅಗೆಯುವಿಕೆ, ದುರಸ್ತಿ, ನವೀಕರಣ, ನಿರ್ಮಾಣ ಕಾಮಗಾರಿ ಕೈಗೊಳ್ಳುವುದು ಅಕ್ರಮ ಮತ್ತು ಅಪರಾಧ.

‘ದೇವಸ್ಥಾನ ಸಂರಕ್ಷಿತ ಸ್ಮಾರಕವಾಗಿದ್ದು, ಎಎಸ್‌ಐ ಮತ್ತು ಪ್ರವಾಸೋದ್ಯಮ ಇಲಾಖೆ ನಡುವೆ ಆದ ಒಡಂಬಡಿಕೆಯಂತೆ ಪ್ರವಾಸೋದ್ಯಮ ಇಲಾಖೆಯ ಅನುದಾನದಲ್ಲಿ ದೇವಸ್ಥಾನದ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬಹುದು ಎಂದು ಪಾಲಿಕೆ ಆಯುಕ್ತರು ನಗರಾಭಿವೃದ್ಧಿ ಇಲಾಖೆಗೆ ವರದಿ ನೀಡಿದ್ದಾರೆ. ಆದರೆ, ಎರಡೂ ಇಲಾಖೆಗಳು ಭೂಸ್ವಾಧೀನಕ್ಕೆ ಅನುದಾನ ಕೊಡಲು ಸಾಧ್ಯವಿಲ್ಲ ಎಂಬುದಾಗಿ ತಿಳಿಸಿವೆ’ ಎನ್ನುತ್ತವೆ ಮೂಲಗಳು.  

‘ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವ ಕಳಿಸಿ, ವಿಶೇಷ ಅನುದಾನ ಪಡೆದು ಅಭಿವೃದ್ಧಿ ಪಡಿಸಲು ನಿರ್ಧಾರಿಸಲಾಗಿದೆ. ಈ ಬಗ್ಗೆ ಪ್ರಾಥಮಿಕ ಡಿಪಿಆರ್‌ ಅನ್ನು ಜಿಲ್ಲಾಧಿಕಾರಿ ಮೂಲಕ ನಗರಾಭಿವೃಧಿ ಇಲಾಖೆಗೆ ಕಳಿಸಲಾಗುತ್ತದೆ. ಹಣಕಾಸು ಇಲಾಖೆಯಿಂದ ಎಷ್ಟು ಅನುದಾನ ಬಿಡುಗಡೆಯಾಗುತ್ತದೆ ಎಂಬುದರ ಆಧಾರದ ಮೇಲೆ, ಎಎಸ್‌ಐ ಮಾರ್ಗಸೂಚಿ ಅನ್ವಯ ಅಂತಿಮ ಡಿಪಿಆರ್ ರೂಪಿಸಲಾಗುತ್ತದೆ’ ಎನ್ನುತ್ತಾರೆ ಅಧಿಕಾರಿಗಳು. 

‘ಪಾಲಿಕೆಯಿಂದ ದೇವಸ್ಥಾನದ ಸುತ್ತಲಿನ ಜಾಗದ ಸರ್ವೆ ಮಾಡಿ, ಭೂಸ್ವಾಧೀನ ಪಡಿಸಿಕೊಳ್ಳಬೇಕಿರುವ ಜಾಗ ಗುರುತಿಸಲಾಗಿದೆ. ಭೂಸ್ವಾಧೀನವಾದ ಜಾಗದಲ್ಲಿರುವ ಕುಟುಂಬಗಳಿಗೆ ಪರಿಹಾರ ಒದಗಿಸಬೇಕು’ ಎಂದು ಪಾಲಿಕೆ ವಲಯ ಕಚೇರಿ 5ರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶರಣಬಸಪ್ಪ ಕೆಂಭಾವಿ ಹೇಳಿದರು.

‘ಕಾಶಿ ಕಾರಿಡಾರ್ ಮಾದರಿ ಅಭಿವೃದ್ಧಿ’

‘ಕಾಶಿ ವಿಶ್ವನಾಥ ಕಾರಿಡಾರ್ ಮಾದರಿಯಲ್ಲಿ ಚಂದ್ರಮೌಳೇಶ್ವರ ದೇವಸ್ಥಾನವನ್ನು ಮೂರು ಹಂತಗಳಲ್ಲಿ ಅಭಿವೃದ್ಧಿ ಆಗಲಿದೆ. ಪ್ರವಾಸೋದ್ಯಮ, ಎಎಸ್‌ಐ ಸೇರಿ ವಿವಿಧ ಇಲಾಖೆಗಳ ಜತೆ ಸಭೆ ನಡೆಸಿ, ಚರ್ಚಿಸಲಾಗಿದೆ’ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.  

‘ಪಾಲಿಕೆ ಈಗಾಗಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ದೇವಸ್ಥಾನದ ಅಭಿವೃದ್ಧಿ ಹೊಣೆಯನ್ನು ಪಾಲಿಕೆಗೆ ನೀಡಿದರೆ, ಕಾರ್ಯ ವಿಳಂಬವಾಗುತ್ತದೆ. ಹೀಗಾಗಿ ರಾಜ್ಯ ಸರ್ಕಾರ ಇದಕ್ಕೆ ವಿಶೇಷ ಅನುದಾನ ಬಿಡುಗಡೆ ಮಾಡಬೇಕು’ ಎಂದರು.

ದೇವಸ್ಥಾನದ ವಿಶೇಷ

ದೇಶದಲ್ಲಿ ಚತುರ್ಮುಖ ಶಿವಲಿಂಗ ಇರುವ ಎರಡು ದೇವಸ್ಥಾನಗಳಿದ್ದು, ಅದರಲ್ಲಿ ಇಲ್ಲಿನ ಚಂದ್ರಮೌಳೇಶ್ವರ ದೇಗುಲವೂ ಒಂದು. ಇದನ್ನು ಅಮರಶಿಲ್ಪಿ ಜಕಣಾಚಾರಿ ನೇತೃತ್ವದಲ್ಲಿ, ಕಪ್ಪು ಮತ್ತು ಕೆಂಪು ಮಿಶ್ರಿತ ಶಿಲೆ ಬಳಸಿ ನಿರ್ಮಿಸಲಾಗಿದೆ. ದೇಗುಲಕ್ಕೆ ನಾಲ್ಕು ದಿಕ್ಕುಗಳಲ್ಲೂ ಪ್ರವೇಶ ದ್ವಾರವಿದೆ. ಪೂರ್ವಾಭಿ
ಮುಖವಾಗಿ ನಿರ್ಮಾಣವಾದ ಈ ದೇವಸ್ಥಾನದಲ್ಲಿ ಪ್ರದಕ್ಷಿಣ ಪಥ, ಅಂತರಾಳ ಮತ್ತು ಮುಖಮಂಟಗಳಿವೆ.

ಹುಬ್ಬಳ್ಳಿ–ಧಾರವಾಡವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬೇಕು ಎಂಬ ಗುರಿ ಇದೆ. ‍‍‍‍‍ಪ್ರವಾಸೋದ್ಯಮ ಅಭಿವೃದ್ಧಿಯಾದರೆ ಸ್ಥಳೀಯ ಜನರಿಗೆ ಉದ್ಯೋಗಾವಕಾಶ ಸಿಗುತ್ತವೆ. ಆದಾಯವೂ ಹೆಚ್ಚುತ್ತದೆ.
–ಮಹೇಶ ಟೆಂಗಿನಕಾಯಿ, ಶಾಸಕ
ಚಾಲುಕ್ಯರ ವಾಸ್ತುಶಿಲ್ಪ ಇರುವ ದೇವಸ್ಥಾನವನ್ನು ಅಭಿವೃದ್ಧಿಪಡಿಸಿದರೆ ಸುಂದರ ಪ್ರವಾಸಿ ತಾಣವಾಗುತ್ತದೆ. ದೇವಸ್ಥಾನದ ಅಭಿವೃದ್ಧಿಗೆ ಇಲ್ಲಿನ ಜನರು ಸಹ ತಮ್ಮ ಆಸ್ತಿಯನ್ನು ಕೊಡಲು ಸಿದ್ಧರಿದ್ದಾರೆ.
–ರಾಜಣ್ಣ ಕೊರವಿ, ಮಹಾನಗರ ಪಾಲಿಕೆ ಸದಸ್ಯ
ಸ್ವಾಧೀನಪಡಿಸಿಕೊಂಡಿರುವ ಜಾಗಕ್ಕೆ ನ್ಯಾಯಯುತ ಪರಿಹಾರ ನೀಡಬೇಕು.ಆದರೆ, ಈವರೆಗೂ ಯಾವ ಇಲಾಖೆಯವರೂ ನಮ್ಮನ್ನು ಸಂಪರ್ಕಿಸಿಲ್ಲ.
-ಶೇಖನಗೌಡ, ಉಣಕಲ್‌ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.