
ಹುಬ್ಬಳ್ಳಿ: ವಿದ್ಯೆ ನೀಡುವ ಶಾಲೆ ‘ಗುಡಿ’ಗೆ ಸಮಾನ ಎಂಬುದು ಎಲ್ಲರ ನಂಬಿಕೆ. ‘ಸಾಲಿಗುಡಿ’ ಎಂಬ ದ್ವೈಮಾಸಿಕ, ದ್ವಿಭಾಷಾ ಪತ್ರಿಕೆ ಮಕ್ಕಳ ಸೃಜನಶೀಲ ಬರವಣಿಗೆಗೆ ವೇದಿಕೆಯಾಗುವ ಕೆಲಸವನ್ನು ಸದ್ದಿಲ್ಲದೇ ಮಾಡುತ್ತಿದೆ.
ತಾಲ್ಲೂಕಿನ ಕಿರೇಸೂರು ಸರ್ಕಾರಿ ಪ್ರೌಢಶಾಲೆಯ 8, 9, 10ನೇ ತರಗತಿಯ ಮಕ್ಕಳು ತಾವು ಹಾಗೂ ಸಹಪಾಠಿಗಳು ಬರೆದ ಕಥೆ, ಕವನ, ಪ್ರಬಂಧ, ಚಿತ್ರ, ನಾಟಕ, ಶಾಲೆಯಲ್ಲಿ ನಡೆದ ಕಾರ್ಯಕ್ರಮಗಳ ವರದಿ, ಕ್ರೀಡಾ ಸಾಧನೆ, ಹಾಸ್ಯ, ಸಾಮಾನ್ಯ ಜ್ಞಾನ ಮಾಹಿತಿ... ಹೀಗೆ ವಿವಿಧ ಬರವಣಿಗೆಗಳನ್ನು ಸಂಗ್ರಹಿಸಿ ಪ್ರತಿ ಎರಡು ತಿಂಗಳಿಗೊಮ್ಮೆ ‘ಸಾಲಿಗುಡಿ’ ಎಂಬ 8 ಪುಟಗಳ ಪತ್ರಿಕೆಯನ್ನು ತರುತ್ತಿದ್ದಾರೆ. ಇದರಲ್ಲಿ ಇಂಗ್ಲಿಷ್ ಒಗಟುಗಳು, ಮೋಜಿನ ಆಟಗಳು, ಗಾದೆಗಳೂ ಇವೆ. ಜಿಲ್ಲೆಯಲ್ಲಿಯೇ ಇದು ಏಕೈಕ ಮಕ್ಕಳ ಪತ್ರಿಕೆ ಎನಿಸಿದೆ.
ಶಾಲೆಯ ಇಂಗ್ಲಿಷ್ ಶಿಕ್ಷಕ ಲಿಂಗರಾಜ ರಾಮಾಪುರ ಅವರ ಆಲೋಚನೆಯಿಂದ 2022ರಲ್ಲಿ ಆರಂಭವಾದ ಈ ಪತ್ರಿಕೆಯು ಪೂರ್ಣ ರೂಪದಲ್ಲಿ ಪೋಷಕರು ಹಾಗೂ ದಾನಿಗಳ ಸಹಕಾರದಿಂದ ಮೂಡಿ ಬರುತ್ತಿದೆ. ಶಾಲೆಯಲ್ಲಿ 130 ವಿದ್ಯಾರ್ಥಿಗಳಿದ್ದು, ಪತ್ರಿಕೆಯ ಸಂಪಾದನಾ ಕೆಲಸಕ್ಕೆ 8 ವಿದ್ಯಾರ್ಥಿಗಳ ಗುಂಪನ್ನು ರಚಿಸಲಾಗಿದೆ. ಇವರೇ ಮಕ್ಕಳು ಬರೆದ ಲೇಖನಗಳನ್ನು ಸಂಗ್ರಹಿಸಿ ತರುತ್ತಾರೆ.
ಅಂತಿಮವಾಗಿ ಲಿಂಗರಾಜ ಅವರು ಲೇಖನಗಳನ್ನು ತಿದ್ದಿ–ತೀಡಿ, ಟೈಪ್ ಮಾಡಿ, ವಿನ್ಯಾಸವನ್ನೂ ಮಾಡುತ್ತಾರೆ. 500 ಪ್ರತಿಗಳನ್ನು ಮುದ್ರಿಸಲಾಗುತ್ತಿದೆ. ಒಂದು ಬಾರಿಯ ಪತ್ರಿಕೆ ಹೊರತರಲು ₹ 4,500 ಖರ್ಚಾಗುತ್ತದೆ. ಇದನ್ನು ಗ್ರಾಮಸ್ಥರು, ಗ್ರಾಮ ಪಂಚಾಯಿತಿ ಸದಸ್ಯರು, ಎಸ್‌ಡಿಎಂಸಿ ಸದಸ್ಯರು, ಶಿಕ್ಷಕರು ಹಾಗೂ ಶಿಕ್ಷಣಪ್ರೇಮಿಗಳು ಪಾಳಿಯಂತೆ ಭರಿಸುತ್ತಿದ್ದಾರೆ. 300 ಪತ್ರಿಕೆಗಳನ್ನು ಗ್ರಾಮದಲ್ಲೇ ಹಂಚಲಾಗುತ್ತಿದ್ದು. 200 ಪ್ರತಿಗಳನ್ನು ಸುತ್ತಮುತ್ತ ಹಳ್ಳಿಗಳು, ಬ್ಯಾಹಟ್ಟಿ ಕ್ಲಸ್ಟರ್‌ನ ವಿವಿಧ ಶಾಲೆಗಳಿಗೆ ಕಳುಹಿಸಿಕೊಡಲಾಗುತ್ತಿದೆ.
‘ಪೋಷಕರು, ಸಮಾಜ ಎಲ್ಲರೂ ಅಂಕಗಳ ಬೆನ್ನು ಹತ್ತಿರುವಾಗ ಪಠ್ಯಕ್ಕೆ ಹೊರತು ಪಡಿಸಿ ಮಕ್ಕಳಿಂದ ಬರಹಗಳನ್ನು ಸೃಷ್ಟಿಸುವುದು ಸವಾಲಿನ ಕೆಲಸ. ಆದರೂ ಇಲ್ಲಿಯ ಪೋಷಕರು ಹಾಗೂ ಗ್ರಾಮಸ್ಥರಿಂದ ಉತ್ತಮ ಸ್ಪಂದನೆ, ಬೆಂಬಲ ದೊರಕಿದೆ. ಓದು–ಬರವಣಿಗೆಗಳು ಮಕ್ಕಳಲ್ಲಿ ವಿಶ್ಲೇಷಣಾ ಸಾಮರ್ಥ್ಯ, ಆತ್ಮವಿಶ್ವಾಸ, ಸಾಮಾನ್ಯ ಜ್ಞಾನ ಬೆಳೆಸುತ್ತವೆ. ಪಠ್ಯದ ಓದಿಗೂ ಪರೋಕ್ಷವಾಗಿ ಸಹಾಯಕವಾಗುತ್ತದೆ’ ಎಂದು ಲಿಂಗರಾಜ ರಾಮಾಪುರ ತಿಳಿಸಿದರು.
‘ಗ್ರಾಮೀಣ ಮಕ್ಕಳಲ್ಲಿ ಭಾಷಾ ಕೌಶಲ ಬೆಳೆಸುವುದು ಪ್ರಮುಖ ಉದ್ದೇಶವಾಗಿದೆ. ಇಂಗ್ಲಿಷ್ ಭಾಷೆಯ ಭಯ ಹೋಗಲಾಡಿಸಲೂ ಇದರಿಂದ ಸಹಕಾರಿ. ಹೀಗಾಗಿ ಕನ್ನಡ–ಇಂಗ್ಲಿಷ್ ಎರಡೂ ಭಾಷೆಗಳ ಬರವಣಿಗೆಗೆ ಈ ಪತ್ರಿಕೆಯಲ್ಲಿ ಅವಕಾಶ ಇಡಲಾಗಿದೆ. ಮಕ್ಕಳು ಬರೆಯುತ್ತಿದ್ದಾರೆ ಎನ್ನುವುದೇ ಖುಷಿ’ ಎನ್ನುತ್ತಾರೆ ಅವರು.
ಸರ್ಕಾರಿ ಶಾಲೆಯ ಮಕ್ಕಳು ಒಂದು ಪತ್ರಿಕೆ ತರುತ್ತಿರುವುದೇ ಹೆಮ್ಮೆಯ ಸಂಗತಿ. ಲಿಂಗರಾಜ ರಾಮಾಪುರ ಅವರ ಮಾರ್ಗದರ್ಶನದಲ್ಲಿ ಮಕ್ಕಳು ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದಾರೆಉಮೇಶ ಬೊಮ್ಮಕ್ಕನವರ ಬಿಇಒ ಹುಬ್ಬಳ್ಳಿ ಗ್ರಾಮೀಣ
ಪತ್ರಿಕೆಯಿಂದಾಗಿ ಮಕ್ಕಳು ಬರೆಯುವ ಉತ್ಸಾಹ ತೋರುತ್ತಿದ್ದಾರೆ. ಪೋಷಕರು ಗಣ್ಯರ ಪ್ರೋತ್ಸಾಹ ಇರುವುದರಿಂದಲೇ ಇಂಥ ಸೃಜನಾತ್ಮಕ ಚಟುವಟಿಕೆ ಯಶಸ್ವಿಯಾಗಿ ನಡೆಯುತ್ತಿದೆಸುಮನ್ ತೇಲಂಗ ಮುಖ್ಯ ಶಿಕ್ಷಕಿ ಸರ್ಕಾರಿ ಪ್ರೌಢಶಾಲೆ ಕಿರೇಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.