ADVERTISEMENT

ಕೇಂದ್ರದ ನೀತಿಯಿಂದ ತೊಂದರೆಯಾಗಿದೆ ಎನ್ನುವ ಸಿಎಂ ಹೇಳಿಕೆ ದುರುದ್ದೇಶಪೂರಿತ: ಜೋಶಿ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 12:34 IST
Last Updated 8 ನವೆಂಬರ್ 2025, 12:34 IST
ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ   

ಧಾರವಾಡ: ‘ಕಳೆದ ವರ್ಷ 10 ಲಕ್ಷ ಮೆಟ್ರಿಕ್‌ ಟನ್‌ ಸಕ್ಕರೆ ರಫ್ತಿಗೆ ಅನುಮೋದನೆ ನೀಡಲಾಗಿತ್ತು. ರಫ್ತಿನ ನಂತರ ಸಕ್ಕರೆ ದರ ಸಮತೋಲನದಲ್ಲಿದೆ. ಕೇಂದ್ರ ಸರ್ಕಾರದ ನೀತಿಯಿಂದ ತೊಂದರೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದು ದುರುದ್ದೇಶಪೂರಿತ’ ಎಂದು ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಕುಟುಕಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಈ ವರ್ಷ 15 ಲಕ್ಷ ಮೆಟ್ರಿಕ್‌ ಟನ್‌ ಸಕ್ಕರೆ ರಫ್ತಿಗೆ ಅನುಮತಿ ನೀಡಲಾಗಿದೆ. ಸಕ್ಕರೆಗೆ ಎಂಎಸ್‌ಪಿಯನ್ನು ₹ 31ಕ್ಕೆ (ಕೆ.ಜಿ.ಗೆ) ಏರಿಸಲಾಗಿದೆ’ ಎಂದು ತಿಳಿಸಿದರು.

’ರಾಜ್ಯ ಸರ್ಕಾರವು ಪೆಟ್ರೊಲ್‌ ಮತ್ತು ಡೀಸೆಲ್‌ ಮೇಲೆ ವ್ಯಾಟ್‌ ಹೆಚ್ಚಳ ಮಾಡಿದೆ, ರಸ್ತೆ ತೆರಿಗೆ ಹೆಚ್ಚಿಸಿದ್ದರಿಂದ ಸಾಗಣೆ ವೆಚ್ಚ ಹೆಚ್ಚಾಗಿದೆ. ಮಹಾರಾಷ್ಟ್ರದಲ್ಲಿ ವಿದ್ಯುತ್‌ ಖರೀದಿ ಫಿಕ್ಸ್‌ಡ್‌ ಚಾರ್ಜ್‌ ₹ 4.88, ವೇರಿಯಬಲ್‌ ಚಾರ್ಜ್‌ ₹ 1.50 ಯುನಿಟ್‌ಗೆ ₹ 6 ನಿಗದಿಪಡಿಸಿ ರೈತರಿಗೆ ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಈವರೆಗೆ ವಿದ್ಯುತ್‌ ಖರೀದಿ ಒಪ್ಪಂದವನ್ನೇ (ಪಿಪಿಎ) ಮಾಡಿಕೊಂಡಿಲ್ಲ, ಕಳೆದ ತಿಂಗಳು ಎನರ್ಜಿ ಸುಂಕವನ್ನು ಯುನಿಟ್‌ಗೆ 60 ಪೈಸೆ ಹೆಚ್ಚಿಸಲಾಗಿದೆ’ ಎಂದು ದೂರಿದರು.

ADVERTISEMENT

‘2014ರಲ್ಲಿ ಕಬ್ಬು ಖರೀದಿ ಮೊತ್ತ ₹ 57,104 ಕೋಟಿ, 2025ರಲ್ಲಿ ಖರೀದಿ ಮೊತ್ತ 1.02 ಲಕ್ಷ ಕೋಟಿಯಾಗಿದೆ. ಎಥನಾಲ್‌ ಬ್ಲೆಂಡಿಂಗ್‌ 2014ರಲ್ಲಿ 38 ಕೋಟಿ ಲೀಟರ್‌ ಇತ್ತು, 2025ರಲ್ಲಿ 1001 ಕೋಟಿ ಲೀಟರ್‌ಗೆ ಹೆಚ್ಚಿದೆ. 2014ರಿಂದ ಈವರೆಗೆ ಕಬ್ಬು ಬ್ಲೆಂಡ್‌ ಡಿಸ್ಟಿಲರಿಸ್‌ಗಳಿಂದ ₹ 2.18 ಲಕ್ಷ ಕೋಟಿ ಆದಾಯ ಬಂದಿದೆ. ಕೇಂದ್ರ ಸರ್ಕಾರವು ಸಕ್ಕರೆ ಕಾರ್ಖಾನೆಗಳಿಗೆ 10 ವರ್ಷಗಳಲ್ಲಿ ವಿವಿಧ ಯೋಜನೆಗಳಡಿ ₹ 16,500 ಕೋಟಿ ನೆರವು ನೀಡಿದೆ. 2025–26ನೇ ಸಾಲಿನಲ್ಲಿ ಕರ್ನಾಟಕದ ಕಬ್ಬು ಬೆಳೆಗಾರರ ಬಾಕಿ ₹ 50 ಲಕ್ಷ ಮಾತ್ರ ಪಾವತಿಸಬೇಕಿದೆ’ ಎಂದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ನಡೆಸಿ ನಿರ್ಧಾರ ಕೈಗೊಂಡಿದ್ಧಾರೆ. ಕಬ್ಬಿಗೆ ನಿಗದಿಪಡಿಸಿರುವ ದರ ಪಾವತಿಗೆ ಕ್ರಮವಹಿಸಬೇಕು’ ಎಂದು ಒತ್ತಾಯಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.