ಹುಬ್ಬಳ್ಳಿ: ಸಂಸತ್ ಚಳಿಗಾಲದ ಅಧಿವೇಶನದಲ್ಲಿ 146 ಸಂಸದರನ್ನು ಅಮಾನತು ಮಾಡಿದ್ದನ್ನು ಖಂಡಿಸಿ, ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ನಗರದ ಮಿನಿ ವಿಧಾನಸೌಧದ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಸಮಿತಿ ಅಧ್ಯಕ್ಷ ಅನಿಲಕುಮಾರ ಪಾಟೀಲ ಮಾತನಾಡಿ, ‘ಸಂಸತ್ತಿನೊಳಗೆ ಯುವಕರು ನುಗ್ಗಿದ ಘಟನೆಗೆ ಸಂಬಂಧಿಸಿದಂತೆ ಭದ್ರತೆ ಬಗ್ಗೆ ಪ್ರಶ್ನಿಸಿದ 146 ಸಂಸದರನ್ನು ಅಧಿವೇಶನ ಮುಗಿಯುವವರೆಗೆ ಅಮಾನತು ಮಾಡಲಾಗಿತ್ತು. ಇದು ಅಸಾಂವಿಧಾನಿಕ ನಡೆ. ಸಂಸತ್ ಭವನದ ಭದ್ರತೆ ಬಗ್ಗೆ ಪ್ರಧಾನ ಮಂತ್ರಿ, ಗೃಹ ಸಚಿವರು ಉತ್ತರಿಸದೆ, ತಮ್ಮನ್ನು ಯಾರೂ ಪ್ರಶ್ನಿಸಬಾರದೆಂಬ ದುರುದ್ದೇಶದಿಂದ ಸಂಸದರ ಅಮಾನತು ಮಾಡಿದ್ದು ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳನ್ನು ಬೆದರಿಸುವುದು, ಕಡೆಗಣಿಸುವುದು ಸರಿಯಲ್ಲ. ಮಹತ್ವದ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುವ ಹಕ್ಕು ಅವರಿಗಿದೆ. ವಿರೋಧ ಪಕ್ಷಗಳ ಅನುಪಸ್ಥಿತಿಯಲ್ಲಿ ಪ್ರಮುಖ ಮಸೂದೆಗಳನ್ನು ಅಂಗೀಕರಿಸಿರುವುದು ಸಂವಿಧಾನ ವಿರೋಧಿ ಧೋರಣೆಯಾಗಿದೆ’ ಎಂದು ಆರೋಪಿಸಿದರು.
ಪಕ್ಷದ ಮುಖಂಡರಾದ ವರ್ಧಮಾನ ಹಿರೇಗೌಡ, ಸುರೇಶ್ ಗೌಡ, ಮಂಜು ಮಾಯಣ್ಣವರ, ಚಂದ್ರಶೇಖರ ಜುಟ್ಟಲ, ಎಫ್.ಎಚ್. ಜಕ್ಕಪ್ಪನವರ, ಸತೀಶ ಮೆಹರವಾಡೆ, ಇಕ್ಬಾಲ್ ನವಲೂರು, ಸಂತೋಷ ಚಲವಾದಿ, ಮೋಹನ ಹಿರೇಮನಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.