ADVERTISEMENT

ಹುಬ್ಬಳ್ಳಿ: ಹಿಂದೂ ಭಕ್ತನ ಮನೆಯಲ್ಲಿ ‘ದೂದಪೀರಾ’ ದರ್ಗಾ

ಏಳು ದಶಕಗಳಿಂದ ಆರಾಧನೆ l ಹನುಮವ್ವ ಗುಡಗುಂಟಿ ಕುಟುಂಬದಿಂದ ದರ್ಗಾ ನಿರ್ವಹಣೆ

​ಪ್ರಜಾವಾಣಿ ವಾರ್ತೆ
Published 13 ಮೇ 2022, 4:11 IST
Last Updated 13 ಮೇ 2022, 4:11 IST
ವಾಳ್ವೇಕರ ಪ್ಲಾಟ್‌ನಲ್ಲಿರುವ ದೂದಪೀರಾ ದರ್ಗಾದಲ್ಲಿ ಪೂಜೆ ನೆರವೇರಿಸುವ ಹನುಮವ್ವ ಗುಡಗುಂಟಿ  ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ವಾಳ್ವೇಕರ ಪ್ಲಾಟ್‌ನಲ್ಲಿರುವ ದೂದಪೀರಾ ದರ್ಗಾದಲ್ಲಿ ಪೂಜೆ ನೆರವೇರಿಸುವ ಹನುಮವ್ವ ಗುಡಗುಂಟಿ  ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ   

ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರಸಿದ್ಧ ದರ್ಗಾಗಗಳಲ್ಲಿ ಲಕ್ಷ್ಮೇಶ್ವರದ ದೂದಪೀರಾ(ಹಜರತ್‌ ಸಯ್ಯದ್ ಸುಲೇಮಾನ್‌ ಬಾದಶಾಹ ಖಾದ್ರಿ ಬಗ್ದಾದ್‌) ದರ್ಗಾ ಪ್ರಮುಖವಾದುದು. ದೂದಪೀರಾ ಅವರು ಹುಬ್ಬಳ್ಳಿಯ ಹಿಂದೂ ಕುಟುಂಬದ ಭಕ್ತಿಗೆ ಮೆಚ್ಚಿ, ಏಳು ದಶಕಗಳ ಹಿಂದೆ ಅವರ ಮನೆಯಲ್ಲಿ ಒಡಮೂಡಿದ್ದಾರೆ. ಅಂದಿನಿಂದ ಆ ಕುಟುಂಬದ ಸದಸ್ಯರು, ತಮ್ಮ ಮನೆಯನ್ನೇ ದರ್ಗಾವನ್ನಾಗಿ ಪರಿವರ್ತಿಸಿ ಪೂಜಿಸಿಕೊಂಡು ಬರುತ್ತಿದ್ದಾರೆ.

ನಗರದ ಕೇಶ್ವಾಪುರದ ವಾಳ್ವೇಕರ ಪ್ಲಾಟ್‌ನಲ್ಲಿರುವ ಹನುಮವ್ವ ಗುಡಗುಂಟಿ ಅವರ ಕುಟುಂಬ, ಧರ್ಮದ ಎಲ್ಲೆಗಳನ್ನು ಮೀರಿದ ಇಂತಹದ್ದೊಂದು ಸೌಹಾರ್ದ ಧಾರ್ಮಿಕ ಕಾಯಕದಲ್ಲಿ ತೊಡಗಿಸಿಕೊಂಡಿದೆ. ಮುಸ್ಲಿಮರು ದರ್ಗಾಗೆ ಬಂದು ಪ್ರಾರ್ಥನೆ ಸಲ್ಲಿಸಿದರೆ, ಹಿಂದೂ ಸೇರಿದಂತೆ ಇತರ ಸಮುದಾಯಗಳ ಜನ ತಮ್ಮ ಕಷ್ಟಗಳ ಪರಿಹಾರಕ್ಕಾಗಿ ಇಲ್ಲಿಗೆ ಬಂದು ಪೂಜೆ ಸಲ್ಲಿಸಿ ಬೇಡಿಕೊಳ್ಳುತ್ತಾರೆ.

ಮನೆಗೆ ಬಂದು ನೆಲೆಸಿದ: ‘ಗಂಭೀರವಾದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವ್ವನನ್ನು ಲಕ್ಷ್ಮೇಶ್ವರದಲ್ಲಿರುವ ದೂದಪೀರಾ ಅವರ ಮೂಲ ದರ್ಗಾಕ್ಕೆ ನನ್ನ ತಂದೆ ಕರೆದೊಯ್ದಿದ್ದರು. ಇಬ್ಬರೂ ಸತತ ಎರಡು ವರ್ಷ ಅಲ್ಲಿಗೆ ಹೋಗಿ ಪೂಜೆ ಮಾಡಿದಾಗ, ಅವ್ವನ ಆರೋಗ್ಯ ಸಮಸ್ಯೆ ಬಗೆಹರಿಯಿತು. ಒಮ್ಮೆ ತಂದೆಯ ಕನಸಿನಲ್ಲಿ ಕಾಣಿಸಿಕೊಂಡ ದೂದಪೀರಾ ಅವರು, ನಾನು ನಿಮ್ಮ ಮನೆಯಲ್ಲಿ ಬಂದು
ನೆಲೆಸುತ್ತೇನೆ ಎಂದು ಹೇಳಿ ಸಣ್ಣ ಗೋರಿಯ ರೂಪದಲ್ಲಿ ಒಡಮೂಡಿದರು’ ಎಂದು 35 ವರ್ಷಗಳಿಂದ ದರ್ಗಾ ಪೂಜೆ ಮಾಡುತ್ತಿರುವ ಹನುಮವ್ವ ಗುಡಗುಂಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಅಂದಿನ ಜೋಪಡಿ ಮನೆಯಲ್ಲೇ ಗೋರಿಗೆ ಪ್ರತ್ಯೇಕ ಕೊಠಡಿ ನಿರ್ಮಿಸಿ ಪೂಜಿಸತೊಡಗಿದರು. ವಿಷಯ ತಿಳಿದು ಮುಸ್ಲಿಮರು ಸೇರಿದಂತೆ ವಿವಿಧ ಸಮುದಾಯಗಳ ಜನರು ಬಂದು ಪೂಜೆ ಮಾಡತೊಡಗಿದರು. ಅವರ ಕಷ್ಟಗಳು ಪರಿಹಾರವಾದವು. ನಂತರ, ಪಕ್ಕದ ಜಾಗಕ್ಕೆ ತಮ್ಮ ವಾಸ್ತವ್ಯ ಬದಲಿಸಿ, ದರ್ಗಾ ಸಾರ್ವಜನಿಕರಿಗೂ ಮುಕ್ತಗೊಳಿಸಿದರು. ಅಂದಿನಿಂದಲೂ ನಮ್ಮ ಕುಟುಂಬವೇ ಇಡೀ ದರ್ಗಾದ ಪೂಜೆ ಮತ್ತು ನಿರ್ವಹಿಸುತ್ತಿದೆ ಬರುತ್ತಿದೆ’ ಎಂದರು.

ಕಾಯಕಲ್ಪ: ‘ದರ್ಗಾಗೆ ಕಾಯಕಲ್ಪ ನೀಡುವಂತೆ ಭಕ್ತರಿಂದ ಹೆಚ್ಚಿನ ಒತ್ತಾಯಗಳು ಕೇಳಿ ಬರುತ್ತಿವೆ. ವಿವಿಧ ಸಮುದಾಯಗಳ ದಾನಿಗಳು ಮುಂದೆ ಬಂದಿದ್ದು, ಮುಂದಿನ ವರ್ಷ ದರ್ಗಾಗೆ ಕಾಯಕಲ್ಪ ನೀಡಲು ನಿರ್ಧರಿಸಲಾಗಿದೆ’ ಎಂದು ಹನುಮವ್ವ ಅವರ ಪುತ್ರ ಗುರುಸಿದ್ಧಪ್ಪ ಗುಡಗುಂಟಿ ತಿಳಿಸಿದರು.

ಸೌಹಾರ್ದ ಸಂದಲ್, ಉರುಸ್‌ ಇಂದು

ದರ್ಗಾದ ಸೌಹಾರ್ದ ಸಂದಲ್ ಮತ್ತು ಉರುಸು ಮೇ 13ರಂದು ನಡೆಯಲಿದೆ. ಗುಡಗುಂಟಿ ಕುಟುಂಬ ಪ್ರತಿ ವರ್ಷ ನಡೆಸಿಕೊಂಡು ಬರುತ್ತಿರುವ ಈ ಕಾರ್ಯಕ್ರಮಕ್ಕೆ ಹಿಂದೂ, ಮುಸ್ಲಿಂ ಸೇರಿದಂತೆ ವಿವಿಧ ಸಮುದಾಯಗಳ ಭಕ್ತರು ಬೆನ್ನೆಲುಬಾಗಿ ನಿಂತಿದ್ದಾರೆ.

‘ಎಲ್ಲಾ ಸಮುದಾಯಗಳ ಭಕ್ತರ ಒತ್ತಾಸೆ ಮೇರೆಗೆ ಆರಂಭಗೊಂಡ ಸಂದಲ್ ಮತ್ತು ಉರುಸ್‌ ಇದೀಗ 62ನೇ ವರ್ಷಕ್ಕೆ ಕಾಲಿಟ್ಟಿದೆ. ಅಂದು ದೂದಪೀರಾ ಅವರ ಚಿತ್ರದ ಮೆರವಣಿಗೆ ಜೊತೆಗೆ, ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಗುವುದು’ ಎಂದು ಗುರುಸಿದ್ಧಪ್ಪ ಗುಡಗುಂಟಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.