ADVERTISEMENT

ಸಚಿವ ಸ್ಥಾನಕ್ಕಾಗಿ ಲಕ್ಷ್ಮಣ ಸವದಿ, ನಾನು ಕಾಯುತ್ತೇವೆ: ಜಗದೀಶ ಶೆಟ್ಟರ್‌

​ಪ್ರಜಾವಾಣಿ ವಾರ್ತೆ
Published 28 ಮೇ 2023, 19:55 IST
Last Updated 28 ಮೇ 2023, 19:55 IST
ಜಗದೀಶ ಶೆಟ್ಟರ್‌
ಜಗದೀಶ ಶೆಟ್ಟರ್‌   

ಹುಬ್ಬಳ್ಳಿ: ‘ಲಕ್ಷ್ಮಣ ಸವದಿ ಹಾಗೂ ನನಗೆ ಸಚಿವ ಸ್ಥಾನ ನೀಡಬೇಕೆನ್ನುವುದು ಜನರ ಅಭಿಲಾಷೆ. ಸಚಿವ ಸ್ಥಾನ ನೀಡುವ ಬಗ್ಗೆ ಯಾರೂ ಭರವಸೆ ನೀಡಿಲ್ಲ. ಮುಂದೆ ಒಳ್ಳೆಯ ಸ್ಥಾನಮಾನ ಸಿಗುವ ಭರವಸೆಯಿದೆ. ಅಲ್ಲಿಯವರೆಗೆ ನಾವು ಕಾಯುತ್ತೇವೆ’ ಎಂದು ಕಾಂಗ್ರೆಸ್‌ ಮುಖಂಡ ಜಗದೀಶ ಶೆಟ್ಟರ್‌ ಹೇಳಿದರು.

ಭಾನುವಾರ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಸಚಿವ ಸಂಪುಟದಲ್ಲಿ ಇರುವುದು 34 ಸ್ಥಾನ ಮಾತ್ರ. ಎಲ್ಲರಿಗೂ ಸ್ಥಾನ ಸಿಗುವುದಿಲ್ಲ. ಆದರೆ, ಸವದಿ ಮತ್ತು ನನಗೆ ಸಚಿವ ಸ್ಥಾನ ದೊರೆಯಬೇಕು ಎನ್ನುವುದು ಜನರ ಒತ್ತಾಯವಾಗಿದೆ’ ಎಂದರು.

‘ಬಿಜೆಪಿಯಲ್ಲಿ ಪಕ್ಷ ಕಟ್ಟಿದ ಮುಖಂಡರೆಲ್ಲ ಈಗ ಹೊರಗೆ ಹೋಗಿದ್ದಾರೆ. ಕಾರ್ಯಕರ್ತರೇ ಮೂಲಾಧಾರವಾಗಿರುವ ಪಕ್ಷಕ್ಕೆ ಸಮರ್ಥ ನಾಯಕನೇ ಇಲ್ಲದಂತಾಗಿದೆ. ಕಾಂಗ್ರೆಸ್‌ ಬಹುಮತ ಪಡೆದು ಸರ್ಕಾರ ರಚಿಸಿ, ಸಚಿವ ಸ್ಥಾನ ಹಂಚಿಕೆಯಾದರೂ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸುವ ಬಿಜೆಪಿಗೆ ಯಾರನ್ನು ನಾಯಕನನ್ನಾಗಿ ಮಾಡಬೇಕು ಎಂದು ತಿಳಿಯುತ್ತಿಲ್ಲ. ಫಲಿತಾಂಶ ಪ್ರಕಟವಾದ ತಕ್ಷಣ ಶಾಸಕಾಂಗ ಸಭೆ ಕರೆದು ವಿರೋಧ ಪಕ್ಷದ ನಾಯಕನ ಹೆಸರು ಘೋಷಿಸಬೇಕು. ಯಾಕಾಗಿ ವಿಳಂಬ ಮಾಡುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ. ರಾಷ್ಟ್ರೀಯ ಪಕ್ಷಕ್ಕೆ ಈ ಪರಿಸ್ಥಿತಿ ಬರಬಾರದಿತ್ತು’ ಎಂದು ವ್ಯಂಗ್ಯವಾಡಿದರು.

ADVERTISEMENT

ಕೈಗಾರಿಕೆ ಅಭಿವೃದ್ಧಿಗೆ ಒತ್ತಾಯ: ‘ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಸಾಕಷ್ಟು ಕಂಪನಿಗಳು ಮುಂದೆ ಬಂದಿವೆ. ಆದರೆ, ಹಿಂದಿನ ಸರ್ಕಾರದ ಮುಖ್ಯಮಂತ್ರಿ ಮತ್ತು ಕೈಗಾರಿಕಾ ಸಚಿವರು ಅವರಿಗೆ ಜಾಗ ಹಂಚಿಕೆ ಮಾಡಿಲ್ಲ. ತಕ್ಷಣ ಜಾಗ ನೀಡಿ ಕೈಗಾರಿಕೆ ಅಭಿವೃದ್ಧಿಗೆ ಮುಂದಾಗಬೇಕೆಂದು ಸರ್ಕಾರವನ್ನು ಸಹ ನಾನು ಒತ್ತಾಯಿಸುತ್ತೇನೆ’ ಎಂದು ಶೆಟ್ಟರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.