ADVERTISEMENT

ಸಂವಿಧಾನವೇ ಬೆಳಕು ಸಂವಾದ: ಮಹಿಳಾ ಹಕ್ಕಿಗೆ ಸಂವಿಧಾನವೇ ಬುನಾದಿ

‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್, ಸಮಾಜ ಕಲ್ಯಾಣ ಇಲಾಖೆಯಿಂದ ‘ಸಂವಿಧಾನವೇ ಬೆಳಕು’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 23:29 IST
Last Updated 14 ಜನವರಿ 2026, 23:29 IST
ಹುಬ್ಬಳ್ಳಿಯಲ್ಲಿ ನಡೆದ ‘ಸಂವಿಧಾನವೇ ಬೆಳಕು’ ಕಾರ್ಯಕ್ರಮದಲ್ಲಿ ಸುನಂದಾ ಕಡಮೆ, ವಿಶ್ವನಾಥ ಬಿಚಗತ್ತಿ,  ಇಸಾಬೆಲ್ಲಾ ಕ್ಸೇವಿಯರ್, ವಿನಯಾ ಒಕ್ಕುಂದ ಮತ್ತು ಜಿ.ಬಿ.ಗೌಡಪ್ಪಗೋಳ ಪಾಲ್ಗೊಂಡಿದ್ದರು
ಹುಬ್ಬಳ್ಳಿಯಲ್ಲಿ ನಡೆದ ‘ಸಂವಿಧಾನವೇ ಬೆಳಕು’ ಕಾರ್ಯಕ್ರಮದಲ್ಲಿ ಸುನಂದಾ ಕಡಮೆ, ವಿಶ್ವನಾಥ ಬಿಚಗತ್ತಿ,  ಇಸಾಬೆಲ್ಲಾ ಕ್ಸೇವಿಯರ್, ವಿನಯಾ ಒಕ್ಕುಂದ ಮತ್ತು ಜಿ.ಬಿ.ಗೌಡಪ್ಪಗೋಳ ಪಾಲ್ಗೊಂಡಿದ್ದರು   

ಹುಬ್ಬಳ್ಳಿ: ಮಹಿಳೆಯರ ಸುರಕ್ಷತೆ, ಸ್ವಾವಲಂಬಿ ಬುದುಕು, ಶಿಕ್ಷಣ, ಶುಚಿತ್ವದ ಬಗ್ಗೆ ಸರ್ಕಾರ ಗಮನ ಕೊಡುತ್ತಿದೆ.  ಮಹಿಳಾ ಪರ ಗ್ಯಾರಂಟಿ ಯೋಜನೆಗಳು ಜಾರಿಗೆ ಬಂದಿವೆ. ಉದ್ಯೋಗ, ವ್ಯಾಪಾರ, ನ್ಯಾಯಾಂಗ, ವಿಜ್ಞಾನ ಕ್ಷೇತ್ರದಲ್ಲೂ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ. ಇದೆಲ್ಲಕ್ಕೂ ಕಾರಣ ಸಂವಿಧಾನ.  

–‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್ ಮತ್ತು ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ಡೆನಿಸನ್ಸ್ ಹೋಟೆಲ್‌ನಲ್ಲಿ ನಡೆದ ‘ಸಂವಿಧಾನವೇ ಬೆಳಕು’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳು ಹೀಗೆ ಪ್ರತಿಪಾದಿಸಿದರು.

ಮಹಿಳಾ ಹಕ್ಕು, ಶಿಕ್ಷಣ ಮತ್ತು ಉದ್ಯೋಗದ ಹಕ್ಕುಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ವಿವಿಧ ಕ್ಷೇತ್ರಗಳ ಪರಿಣಿತರು, ‘ಮಹಿಳೆಯರಿಗೆ ನೀಡಲಾದ ಸಾಂವಿಧಾನಿಕ ಹಕ್ಕುಗಳಿಗೆ ಧಕ್ಕೆಯಾದಾಗ, ಕಾನೂನಿನ ರಕ್ಷಣೆ ಪಡೆಯಬಹುದು’ ಎಂದು ಹೇಳಿದರು. ಲಿಂಗ ಸಂವೇದನೆ ಸೇರಿ ವಿವಿಧ ವಿಷಯಗಳ ಕುರಿತು ಮಾಹಿತಿ ಒದಗಿಸಿದರು.  

ADVERTISEMENT

ಲೇಖಕಿಯರಾದ ವಿನಯಾ ಒಕ್ಕುಂದ, ಸುನಂದಾ ಕಡಮೆ, ಹೈಕೋರ್ಟ್ ಧಾರವಾಡ ಪೀಠದ ವಕೀಲ ವಿಶ್ವನಾಥ ಬಿಚಗತ್ತಿ, ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಉಪ ಆಯುಕ್ತ ಜಿ.ಬಿ.ಗೌಡಪ್ಪಗೋಳ ಅವರು ಸಂವಾದದಲ್ಲಿ ಪಾಲ್ಗೊಂಡಿದ್ದರು. ಸಾಮಾಜಿಕ ಕಾರ್ಯಕರ್ತೆ ಇಸಾಬೆಲ್ಲಾ ಕ್ಸೇವಿಯರ್ ಕಾರ್ಯಕ್ರಮ ನಿರ್ವಹಿಸಿದರು.

ಲೇಖಕಿ ಸುನಂದಾ ಕಡಮೆ ಮಾತನಾಡಿ, ‘ಸಂವಿಧಾನ ರಚನೆಗೂ ಮುನ್ನ ಮೂಢನಂಬಿಕೆ, ಧಾರ್ಮಿಕ ಸಂಪ್ರದಾಯಗಳು ಮಹಿಳೆಯರ ದೈನಂದಿನ ಚಟುವಟಿಕೆಗಳನ್ನು ರೂಪಿಸುತ್ತಿದ್ದವು. ಆ ನಂತರ ಮಹಿಳೆಯರು, ದಲಿತರಿಗೆ ಶಿಕ್ಷಣ ಇನ್ನಷ್ಟು ಹತ್ತಿರವಾಯಿತು. ಮಹಿಳೆಯರಿಗೂ ಸಮಾನ ಹಕ್ಕುಗಳನ್ನು ಸಂವಿಧಾನದಲ್ಲಿ ನೀಡಲಾಗಿದೆ’ ಎಂದರು.

ಲೇಖಕಿ ವಿನಯಾ ಒಕ್ಕುಂದ ಮಾತನಾಡಿ, ‘ದೇಶದ ಬಹುತ್ವದ ಬೇರುಗಳು ಸಡಿಲವಾಗುತ್ತಿವೆ. ಆದರೆ, ಸಂವಿಧಾನ ಎಂಬ ತಾಯಿ ಬೇರು ಅದನ್ನು ರಕ್ಷಿಸುತ್ತಿದೆ. ಸಂವಿಧಾನಲ್ಲೇನಿದೆ, ಅದು ನಮಗೆ ಏನು ಕೊಟ್ಟಿದೆ ಎಂಬುದನ್ನು ತಿಳಿಯಬೇಕಿರುವುದು ಎಲ್ಲರ ಜವಾಬ್ದಾರಿ’ ಎಂದು ಹೇಳಿದರು.

‘ಜಗತ್ತಿನ ಅನೇಕ ರಾಷ್ಟ್ರಗಳು ಮಹಿಳೆಯರಿಗೆ ಮತದಾನದ ಹಕ್ಕು ನೀಡಿಲ್ಲ. ಆದರೆ, ಭಾರತದಲ್ಲಿ ಮಹಿಳೆಯರನ್ನು ಬೇರೆಯಾಗಿ ನೋಡದೆ ಮತದಾನದ ಹಕ್ಕು ನೀಡಿದ್ದು ಬಹುದೊಡ್ಡ ಕಾಣಿಕೆ. ಕಲ್ಯಾಣ ರಾಜ್ಯದ ಮಾರ್ಗದರ್ಶಕ ಸೂತ್ರಗಳಲ್ಲಿ ಸಮಾನ ಕೆಲಸಕ್ಕೆ ಸಮಾನ ಸಂಬಳ ಎಂಬುದು ಉಲ್ಲೇಖವಾಗಿರುವುದು ಮಹಿಳೆಯರ ಘನತೆಯನ್ನು ಎತ್ತಿ ಹಿಡಿದಿರುವುದಕ್ಕೆ ಬಹುದೊಡ್ಡ ಉದಾಹರಣೆ’ ಎಂದು ಹೇಳಿದರು.

‘ಸರ್ಕಾರಿ ವಲಯದಲ್ಲಿ ಸಿಗುವ ಸೌಲಭ್ಯಗಳು ಖಾಸಗಿ ವಲಯದಲ್ಲಿ ಸಿಗುತ್ತಿಲ್ಲ. 14 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡಬೇಕು. ಆದರೆ, ಮಾಧ್ಯಮ, ಪಠ್ಯಕ್ರಮದ ಆಧಾರದಲ್ಲಿ ತಾರತಮ್ಯ ನಡೆಯುತ್ತಿದೆ. ಶಿಕ್ಷಣ ಎಂಬ ಹುಲಿಯ ಹಾಲನ್ನು ಎಲ್ಲರಿಗೂ ಸಮಾನವಾಗಿ ಹಂಚಲು ಆಗುತ್ತಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.

ಹೈಕೋರ್ಟ್ ಧಾರವಾಡ ಪೀಠದ ವಕೀಲ ವಿಶ್ವನಾಥ ಬಿಚಗತ್ತಿ ಮಾತನಾಡಿ, ‘ಸಂವಿಧಾನದ 14, 15, 16, 39, 42ನೇ ವಿಧಿಗಳು ಮಹಿಳೆಯರ ಹಕ್ಕುಗಳನ್ನು ಹೇಳುತ್ತವೆ. ಸಂವಿಧಾನದ 16ನೇ ವಿಧಿಯಲ್ಲಿ ಧರ್ಮ, ಜಾತಿಯ ಆಧಾರದಲ್ಲಿ ಯಾವುದೇ ತಾರತಮ್ಯ ಮಾಡುವಂತಿಲ್ಲ. ಮಹಿಳಾ ಸಬಲೀಕರಣಕ್ಕೆ ಪೂರಕ ಕಾನೂನು ಜಾರಿಗೆ ತರಲು ಸಂವಿಧಾನದಲ್ಲಿ ಅವಕಾಶ ಇದೆ. ರಾಷ್ಟ್ರೀಯ ಕಾನೂನು ಪ್ರಾಧಿಕಾರ ಅಧಿನಿಯಮದಲ್ಲಿ, ಮಹಿಳೆಯರು ನೊಂದಿದ್ದರೆ ಕಾನೂನು ಹೋರಾಡಲು ಉಚಿತ ಕಾನೂನು ನೆರವು ನೀಡಲಾಗುತ್ತದೆ. ಜಿಲ್ಲಾ, ತಾಲ್ಲೂಕು, ರಾಜ್ಯಮಟ್ಟದಲ್ಲಿ ನೊಂದ ಮಹಿಳೆಯರ ಪರ ವಾದ ಮಂಡಿಸಲು ವಕೀಲರನ್ನು ನೇಮಿಸಲಾಗುತ್ತದೆ’ ಎಂದರು.

ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಉಪ ಆಯುಕ್ತ ಜಿ.ಬಿ.ಗೌಡಪ್ಪಗೋಳ ಮಾತನಾಡಿ, ‘ಸಂವಿಧಾನ ನೀಡಿರುವ ಹಕ್ಕುಗಳನ್ನು ಮಹಿಳೆಯರಿಗೆ ತಿಳಿಸಿ, ಅವರಲ್ಲಿ ಜಾಗೃತಿ ಮೂಡಿಸುವುದು ಇಂದು ಹೆಚ್ಚು ಅಗತ್ಯವಿದೆ. ಕುಟುಂಬದಲ್ಲಿ ಸ್ತ್ರೀಗೆ ಗೌರವ, ತುಚ್ಚ ಭಾವನೆ ಇದ್ದರೆ ಅದು ಆದರ್ಶ ಕುಟುಂಬವಾಗಲು ಸಾಧ್ಯವಿಲ್ಲ. ಲಿಂಗಭೇದ, ಜಾತಿ ಭೇದ, ಮೇಲು ಕೀಳು, ಅಸ್ಪೃಶ್ಯತೆಯಿಂದ ಸಮಾಜ ಬಳಲುತ್ತಿದೆ. ಇದನ್ನು ಅರಿತು ಸರ್ವಸಮಾನತೆಗೆ ಸಂವಿಧಾನ ಜಾರಿಗೆ ತರಲಾಗಿದೆ’ ಎಂದರು.

‘ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಮಹಿಳೆಯರ ಸಾಕ್ಷರತೆ ಪ್ರಮಾಣ ಶೇ 8.86 ಮತ್ತು ಪುರುಷರ ಸಾಕ್ಷರತೆ ಶೇ 27ರಷ್ಟಿತ್ತು. ಈಗ ಮಹಿಳೆಯರ ಸಾಕ್ಷರತೆ ಶೇ 70ಕ್ಕೆ ಏರಿಕೆಯಾಗಿದೆ. ಇದು ಸಂವಿಧಾನದಿಂದ ಸಾಧ್ಯವಾಗಿದೆ’ ಎಂದು ಹೇಳಿದರು. 

ದೇಶದ ಜನಸಂಖ್ಯೆಯಲ್ಲಿ ಶೇ 50ಕ್ಕಿಂತ ಹೆಚ್ಚು ಮಹಿಳೆಯರು ಇದ್ದಾರೆ. ಮಹಿಳೆಯರ ಅಭಿವೃದ್ಧಿಯಾದರೆ ದೇಶದ ಪ್ರಗತಿ ಸಾಧ್ಯ. ಆರ್ಥಿಕ ಸಾಮಾಜಿಕ ಶೈಕ್ಷಣಿಕ ಔದ್ಯೋಗಿಕ ಕ್ಷೇತ್ರದಲ್ಲಿ ಮಹಿಳೆಯರಿಗೆ ಸಂವಿಧಾನ ಆಧಾರವಾಗಿದೆ 
ಇಸಾಬೆಲ್ಲಾ ಕ್ಸೇವಿಯರ್‌ ಸಾಮಾಜಿಕ ಕಾರ್ಯಕರ್ತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.