ADVERTISEMENT

ಹುಬ್ಬಳ್ಳಿ| ಷರಿಯತ್‌ ಬದಲು ಸಂವಿಧಾನ ಪಠಣ: ರಘುನಂದನ್‌

​ಪ್ರಜಾವಾಣಿ ವಾರ್ತೆ
Published 24 ಜನವರಿ 2020, 16:29 IST
Last Updated 24 ಜನವರಿ 2020, 16:29 IST
ಹುಬ್ಬಳ್ಳಿಯಲ್ಲಿ ‘ನಿರಾಮಯ ಫೌಂಡೇಷನ್‌’ ಶುಕ್ರವಾರ ಆಯೋಜಿಸಿದ್ದ ‘‌ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು’ ಕೃತಿಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್‌ ಪ್ರಚಾರಕ ರಘುನಂದನ್‌ ಮಾತನಾಡಿದರು
ಹುಬ್ಬಳ್ಳಿಯಲ್ಲಿ ‘ನಿರಾಮಯ ಫೌಂಡೇಷನ್‌’ ಶುಕ್ರವಾರ ಆಯೋಜಿಸಿದ್ದ ‘‌ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು’ ಕೃತಿಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್‌ ಪ್ರಚಾರಕ ರಘುನಂದನ್‌ ಮಾತನಾಡಿದರು   

ಹುಬ್ಬಳ್ಳಿ: ‘ದೇಶದ ಕಾನೂನಿಗಿಂತ ಷರಿಯತ್‌ ಶ್ರೇಷ್ಠ ಎಂದು ಪಠಿಸುತ್ತಿದ್ದವರು ಈಗ ಮಾತು ಮಾತಿಗೆ ಸಂವಿಧಾನದ ಬಗ್ಗೆ ಮಾತನಾಡುತ್ತಿದ್ದಾರೆ. ಹಸಿರು ಧ್ವಜ ಹಿಡಿದು ತಿರುಗಾಡುತ್ತಿದ್ದವರ ಕೈಗಳಲ್ಲಿ ತಿರಂಗಾ ಹಾರಾಡತೊಡಗಿದೆ. ಅಜಾನ್‌ ಬದಲು ಇದೀಗ ಜನಗಣಮನ ಮೊಳಗುತ್ತಿದೆ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕ ರಘುನಂದನ್‌ ಹೇಳಿದರು.

ಕರ್ನಾಟಕ ವಾಣಿಜ್ಯೋದ್ಯಮ ಸಂಘದಲ್ಲಿ ‘ನಿರಾಮಯ ಫೌಂಡೇಷನ್‌’ ಶುಕ್ರವಾರ ಆಯೋಜಿಸಿದ್ದ ‘‌ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು’ (ಬಾಂಗ್ಲಾ ಹಿಂದೂಗಳ ಮೇಲಾದ ಮತೀಯ ಕ್ರೌರ್ಯದ ಕಥೆಗಳು) ಕೃತಿಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕನ್ನಡ ಶಾಲೆಗೆ ಹೋಗದವರೂ ಸಂವಿಧಾನದ ಬಗ್ಗೆ ಮಾತನಾಡ ತೊಡಗಿರುವುದರಿಂದ ಸಿಎಎ ಬಗ್ಗೆ ಮಾಹಿತಿಗಿಂತ, ತಪ್ಪು ಮಾಹಿತಿ ಹೆಚ್ಚಾಗಿ ಹರಡತೊಡಗಿದೆ’ ಎಂದರು.

ADVERTISEMENT

‘ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ ವಿಷಯದಲ್ಲಿ ಅಂಬೇಡ್ಕರ್‌ವಾದಿಗಳು, ಜಿಹಾದಿಗಳು ಮತ್ತು ಕಮ್ಯುನಿಸ್ಟರು ಒಂದಾಗತೊಡಗಿದ್ದಾರೆ. ಇವರೆಲ್ಲರನ್ನು ಜೋಡಿಸುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ’ ಎಂದು ಹೇಳಿದರು.

‘ಪಾಕಿಸ್ತಾನ, ಬಾಂಗ್ಲಾದೇಶದ ಮುಸ್ಲಿಮರು ಭಾರತಕ್ಕೆ ಬರುವುದಾದರೆ ಮುಕ್ತ ಆಹ್ವಾನ ಇದೆ. ಆದರೆ, ಆ ಎರಡೂ ದೇಶಗಳೂ ಭಾರತದಲ್ಲಿ ವಿಲೀನವಾಗಬೇಕು’ ಎಂದು ಹೇಳಿದರು.

‘ಮುಸ್ಲಿಂ ದೇಶಗಳಲ್ಲೂ ಮುಸ್ಲಿಮರು ಶಾಂತಿಯಿಂದ ಬಾಳುತ್ತಿಲ್ಲ. ಹೊಡೆದಾಡಿಕೊಂಡು ಸಾಯುತ್ತಿದ್ದಾರೆ. ಜಗತ್ತಿನಲ್ಲಿ ಮುಸ್ಲಿಮರು ಎಲ್ಲಿಯಾದರೂ ಸುರಕ್ಷಿತವಾಗಿದ್ದಾರೆ ಎಂದಾದರೆ, ಅದು ಭಾರತದಲ್ಲಿ ಮಾತ್ರ’ ಎಂದರು.

ಸಿಂಧನೂರು ಬಾಂಗ್ಲಾ ಕ್ಯಾಂಪ್‌ನ ಪ್ರಸೇನ್‌ ರಫ್ತಾನ್‌ ಮಾತನಾಡಿ, ‘1947ರಲ್ಲಿ ಭಾರತ ಮತ್ತು 1973ರಲ್ಲಿ ಬ್ಲಾಂಗಾ ಸ್ವಾತಂತ್ರ್ಯಕ್ಕಾಗಿ ಬಾಂಗ್ಲಾ ಹಿಂದೂಗಳು ಹೋರಾಟದಲ್ಲಿ ಪಾಲ್ಗೊಂಡಿದ್ದೆವು. ಆದರೆ, ನಮಗೆ ರಾಷ್ಟ್ರ ಮತ್ತು ರಾಷ್ಟ್ರೀಯತೆ ಲಭಿಸಲಿಲ್ಲ. ಬದಲಿಗೆ ನಿರಾಶ್ರಿತರೆಂಬ ಹಣೆಪಟ್ಟಿ ಕಟ್ಟಿದರು’ ಎಂದು ಹೇಳಿದರು.

‘ಈಗ ಸಿಎಎ ಕಾಯ್ದೆ ಜಾರಿಯಾದ ಬಳಿಕ ನಮಗೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದೆ. ನಮಗೆ ರಾಷ್ಟ್ರ, ರಾಷ್ಟ್ರೀಯತೆ ನೀಡಿ ಬದುಕುವ ಹಕ್ಕು ಕಲ್ಪಿಸಿದ ಮೋದಿ, ಶಾ ಅವರನ್ನು ದೇವರೆಂದು ಪೂಜಿಸುತ್ತೇವೆ’ ಎಂದರು.

ನಿರಾಮಯ ಫೌಂಡೇಷನ್‌ ಸಂಸ್ಥಾಪಕ ಕಲ್ಲಪ್ಪ ಮೊರಬದ, ಸಿಂದನೂರು ಬಾಂಗ್ಲಾ ಕ್ಯಾಂಪ್‌ನ ಪರಿವಲ್‌ ಚಂದ್‌, ಪತ್ರಕರ್ತರಾದ ವಿನಾಯಕ ಭಟ್ಟ ಮೂರೂರು, ವೃಷಾಂಕ್ ಭಟ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.