ಹುಬ್ಬಳ್ಳಿ: ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯ, ಶೋಷಣೆ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟದ ಜಿಲ್ಲಾ ಘಟಕದ ಸದಸ್ಯರು ಇಲ್ಲಿನ ಕಾರ್ಮಿಕರ ಭವನದ ಎದುರು ಸೋಮವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.
ಇದಕ್ಕೂ ಮುನ್ನ ನಗರದ ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಕಾರ್ಮಿಕರು, ಅಲ್ಲಿಂದ ಗೋಕುಲ ರಸ್ತೆ ಪ್ರಿಯದರ್ಶಿನಿ ಕಾಲೊನಿಯಲ್ಲಿರುವ ಕಾರ್ಮಿಕರ ಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ವೇಳೆ ಪ್ರತಿಭಟನಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಸಂಘದ ಪ್ರಧಾನ ಕಾರ್ಯದರ್ಶಿ ದುರ್ಗಪ್ಪ ಚಿಕ್ಕತುಂಬಳ ಮಾತನಾಡಿ, ಕಾರ್ಮಿಕರ ಮಕ್ಕಳಿಗೆ ಕೂಡಲೇ ಶೈಕ್ಷಣಿಕ ಧನಸಹಾಯ ಮಂಜೂರು ಮಾಡಬೇಕು. ಧನಸಹಾಯದ ಮೊತ್ತ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಕಾರ್ಮಿಕರಿಗೆ ಟೂಲ್ ಕಿಟ್ ನೀಡುವುದು, ಅದಕ್ಕೆ ಟೆಂಡರ್ ಕರೆಯುವುದನ್ನು ಕೂಡಲೇ ಸ್ಥಗಿತಗೊಳಿಸಬೇಕು. 15–20 ವರ್ಷಗಳ ಹಿಂದೆ ಆಗಿರುವ ನೋಂದಣಿ ಆಧರಿಸಿ ಈಗ ಕಾರ್ಮಿಕರ ಕಾರ್ಡ್‌ಗಳನ್ನು ರದ್ದುಪಡಿಸುತ್ತಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ನಿಜವಾದ ಫಲಾನುಭವಿಗಳಿಗೆ ಸೌಲಭ್ಯಗಳನ್ನು ಒದಗಿಸಬೇಕು ಎಂದರು.
ಹಿರಿಯ ಕಾರ್ಮಿಕರ ಪಿಂಚಣಿ, ಹೆರಿಗೆ ಭತ್ಯೆ, ಅಂತ್ಯಕ್ರಿಯೆ ಅಪಘಾತ ಪರಿಹಾರವನ್ನು ಈವರೆಗೂ ಮಂಜೂರು ಮಾಡಿಲ್ಲ. ಕೂಡಲೇ ಅದನ್ನು ಬಿಡುಗಡೆ ಮಾಡಬೇಕು. ಅರ್ಜಿ ವಿಲೇವಾರಿಯಲ್ಲಿ ಆಗುತ್ತಿರುವ ವಿಳಂಬವನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು.
ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ಸ್ಥಳಕ್ಕೆ ಬಂದು ನಮ್ಮ ಬೇಡಿಕೆ ಈಡೇರಿಸುವ ಭರವಸೆ ನೀಡುವವರೆಗೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಗದಗ, ಹಾವೇರಿ, ಉತ್ತರ ಕನ್ನಡ, ಧಾರವಾಡ ಜಿಲ್ಲೆಗಳ ಕಾರ್ಮಿಕರ ಸಂಘಗಳ ಸದಸ್ಯರು ಪ್ರತಿಭಟನೆಯಲ್ಲಿ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಒಕ್ಕೂಟದ ಅಧ್ಯಕ್ಷ ಶಿವಕುಮಾರ ಬಂಡಿವಡ್ಡರ, ಪ್ರಮುಖರಾದ ವಾಸು ಲಮಾಣಿ, ಮುಸ್ತಾಕ್ ನದಾಫ್, ಅಶ್ವಥ್ ಮರಿಗೌಡ್ರ, ಎಸ್.ಪಿ. ಕರಿಸೋಮನಗೌಡ್ರ, ಶರಣಪ್ಪ ರೊಟ್ಟಿ, ಅಹಮದ್ ಅಲಿಖಾನ, ಶಿವಕುಮಾರ ಗೌಡ್ರ, ಕುಮಾರ ವೈ., ಕಾಸಿಂ ಕೂಡಲಗಿ, ಪ್ರಕಾಶ ಬೀರಲದಿನ್ನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.