
ಧಾರವಾಡ: ಸಹಕಾರ ಸಂಸ್ಥೆಗಳು ಆರ್ಥಿಕ ಸ್ವಾವಲಂಬನೆ, ಸುಸ್ಥಿರ ಅಭಿವೃದ್ಧಿ, ಸ್ಥಳೀಯ ಸಂಸ್ಥೆಗಳ ಸಬಲೀಕರಣಕ್ಕೆ ಕೊಡುಗೆ ನೀಡುತ್ತಿವೆ ಎಂದು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಪ್ರತಾಪ ಅ.ಚವಾಣ ಹೇಳಿದರು.
ನಗರದ ಜಿಲ್ಲಾ ಸಹಕಾರ ಯೂನಿಯನ್ ಕಚೇರಿಯಲ್ಲಿ ಶುಕ್ರವಾರ ನಡೆದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕೃಷಿ ಪ್ರಗತಿ, ಸಣ್ಣ ಉದ್ಯಮ ಬೆಳವಣಿಗೆ, ಮಹಿಳಾ ಸಬಲೀಕರಣ ಮೊದಲಾದವುಗಳನ್ನು ಸಾಧಿಸಲು ಸಹಕಾರ ಸಂಸ್ಥೆಗಳು ವಾಹಕಗಳಾಗಿವೆ. ‘ಆತ್ಮನಿರ್ಭರ ಭಾರತ ಸಾಧನೆಗೆ ವಾಹಕಗಳಾಗಿ ಸಹಕಾರ ಸಂಸ್ಥೆಗಳು’ ಈ ಬಾರಿಯ ಸಪ್ತಾಹದ ಧ್ಯೇಯವಾಗಿದೆ. ಧ್ಯೇಯ ಸಾಕಾರ ನಿಟ್ಟಿನಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಪ್ರಮುಖವಾಗಿದೆ ಎಂದರು.
ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷೆ ಗೀತಾ ಎಸ್. ಕುಂಬಿ ಮಾತನಾಡಿ, ಬಹುಸೇವಾ ಸಹಕಾರ ಸಂಘಗಳ ಕಾಯ್ದೆಯಡಿ ನೋಂದಣಿಯಾಗಿರುವ ಸಹಕಾರ ಸಂಸ್ಥೆಗಳು ಕೊಡುಗೆ ನೀಡಲು ಸನ್ನದ್ಧವಾಗಿವೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಬಲೀಕರಣದ ಮೂಲಕ, ಸೇವಾ ಕೇಂದ್ರಗಳ ಸ್ಥಾಪನೆ ಮೂಲಕ ಸಹಕಾರ ಚಳವಳಿ ಬಲವರ್ಧನೆಗೆ ಯೋಜನೆಗಳು ರೂಪುಗೊಂಡಿವೆ ಎಂದರು.
ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಶಂಕರಪ್ಪ ಎನ್ ರಾಯನಾಳ, ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ ಸಹಾಯಕ ನಿರ್ದೇಶಕ ಸುಭಾಷ ತಳವಾರ ಮಾತನಾಡಿದರು. ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ವಿವಿಧ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕರನ್ನು ಸನ್ಮಾನಿಸಲಾಯಿತು. ಯೂನಿಯನ್ ನಿರ್ದೇಶಕರಾದ ಮಲ್ಲಿಕಾರ್ಜುನ ಅ.ಹೊರಕೇರಿ, ರಾಮಲಿಂಗಪ್ಪ ನವಲಗುಂದ, ಶ್ರೀನಿವಾಸ ಬೂದಿಹಾಳ, ಕೆಂಪೇಗೌಡ ಆರ್.ಪಾಟೀಲ, ಶರಣಗೌಡ ಬಿ.ಪಾಟೀಲ ಉಪಸ್ಥಿತರಿದ್ದರು.
ಭಾರತದ ಸಹಕಾರ ಚಳವಳಿ ಹಲವಾರು ಸವಾಲುಗಳನ್ನು ಎದುರಿಸಿ ಮುನ್ನಡೆಯುತ್ತಿದೆ. ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ. ಸಹಕಾರ ಸಂಸ್ಥೆಗಳಲ್ಲಿ ಡಿಜಿಟಲೀಕರಣಕ್ಕೆ ಒತ್ತು ನೀಡಲಾಗಿದೆಉಳವಪ್ಪ ದಾಸನೂರ ಉಪಾಧ್ಯಕ್ಷ ಕಾಸ್ಕಾರ್ಡ್ ಬ್ಯಾಂಕ್
ಡಿಜಿಟಲೀಕರಣ ಅಳವಡಿಕೆ ಅಗತ್ಯ ಅನಿವಾರ್ಯ
ಸಹಕಾರ ವಲಯ ಕಾರ್ಯಾಚರಣೆಯ ವಿಸ್ತರಣೆಗಾಗಿ ಡಿಜಿಟಲೀಕರಣವನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯ ಮತ್ತು ಅನಿವಾರ್ಯ ಇದೆ ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಉಮೇಶ ಆರ್.ಹೆಬಸೂರ ಹೇಳಿದರು. ‘ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯ ಆಯಾಮಗಳಲ್ಲಿ ಸಹಕಾರ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಈ ಸಂಸ್ಥೆಗಳು ವಿರಳ ಹಣಕಾಸಿನ ಸಂಪನ್ಮೂಲಗಳನ್ನು ಹೊಂದಿವೆ. ವ್ಯವಹಾರವನ್ನು ವಿಸ್ತರಿಸಲು ಗ್ರಾಹಕರಿಗೆ ಸುಗಮವಾಗಿ ಸೇವೆಗಳನ್ನು ಒದಗಿಸಲು ಮಾರುಕಟ್ಟೆಯ ವ್ಯಾಪ್ತಿಯನ್ನು ವಿಸ್ತರಿಸಲು ಬಲವಾದ ಸಂಪರ್ಕಜಾಲ ಮತ್ತು ಪರಿಣಾಮಕಾರಿ ಸಂವಹನಗಳನ್ನು ನಿರ್ಮಿಸಲು ಡಿಜಿಟಲೀಕರಣ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.