ADVERTISEMENT

ಕೊರೊನಾ ಮಾಹಿತಿ ಕೇಂದ್ರ ಉದ್ಘಾಟನೆ

‘ಸೇವಾ ಭಾರತಿ ಟ್ರಸ್ಟ್’– ‘ನೆರವು’ ಸಹಯೋಗದಲ್ಲಿ ಕಿಮ್ಸ್‌ ಆವರಣದಲ್ಲಿ ಆರಂಭ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2021, 7:18 IST
Last Updated 29 ಏಪ್ರಿಲ್ 2021, 7:18 IST
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಆವರಣದಲ್ಲಿ ಸೇವಾ ಭಾರತಿ ಟ್ರಸ್ಟ್ ಮತ್ತು ನೆರವು ಸಂಸ್ಥೆಯ ಸಹಯೋಗದಲ್ಲಿ ಗುರುವಾರ ಕೊರೊನಾ ಮಾಹಿತಿ ಕೇಂದ್ರ ಆರಂಭಿಸಲಾಯಿತು
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಆವರಣದಲ್ಲಿ ಸೇವಾ ಭಾರತಿ ಟ್ರಸ್ಟ್ ಮತ್ತು ನೆರವು ಸಂಸ್ಥೆಯ ಸಹಯೋಗದಲ್ಲಿ ಗುರುವಾರ ಕೊರೊನಾ ಮಾಹಿತಿ ಕೇಂದ್ರ ಆರಂಭಿಸಲಾಯಿತು   

ಹುಬ್ಬಳ್ಳಿ: ಕೊರೊನಾ ಸೋಂಕಿತರಿಗೆ ಅಗತ್ಯ ಮಾಹಿತಿ ಹಾಗೂ ವಿವಿಧ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಸೇವಾ ಭಾರತಿ ಟ್ರಸ್ಟ್ ಮತ್ತು ನೆರವು ಸಂಸ್ಥೆಯ ಸಹಯೋಗದಲ್ಲಿ, ಕಿಮ್ಸ್‌ ಆಸ್ಪತ್ರೆ ಆವರಣದಲ್ಲಿ ಗುರುವಾರ ಕೊರೊನಾ ಮಾಹಿತಿ ಕೇಂದ್ರ ಆರಂಭಿಸಲಾಗಿದೆ.

ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಆರ್‌ಎಸ್‌ಎಸ್‌ನ ಅಖಿಲ ಭಾರತ ವ್ಯವಸ್ಥಾ ಪ್ರಮುಖ್ ಮಂಗೇಶ್ ಬೆಂಡೆ, ‘ಕೋವಿಡ್‌–19 ಕುರಿತು ಜನರಲ್ಲಿ ಆತಂಕ ಉಂಟುಮಾಡುವ ಬದಲು, ವಹಿಸಬೇಕಾದ ಮುನ್ನೆಚ್ಚರಿಕೆ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕಾಗಿದೆ. ಟೀಕೆಗಿಂತ ಹೆಚ್ಚಾಗಿ ಎಲ್ಲಾ ಕಡೆಯಿಂದಲೂ ಸಲಹೆ ಹಾಗೂ ನೆರವಿನ ಕಾರ್ಯಗಳು ನಡೆಯಬೇಕಿದೆ’ ಎಂದರು.

‘ಬೇರೆ ದೇಶಗಳಿಗೆ ಹೋಲಿಸಿದರೆ, ಭಾರತದಲ್ಲಿ ಕೊರೊನಾ ಸೋಂಕಿತರ ಹಾಗೂ ಅದರಿಂದ ಜೀವ ಕಳೆದುಕೊಂಡವರ ಸಂಖ್ಯೆ ಕಡಿಮೆ. ಸರ್ಕಾರ ಕೈಗೊಂಡ ಹಲವು ಕ್ರಮಗಳು ಹಾಗೂ ಭಾರತೀಯ ಸಮಾಜದಲ್ಲಿರುವ ಪರಸ್ಪರ ಸಹಾಯದ ಮನೋಭಾವ ಇದಕ್ಕೆ ಕಾರಣ. ಅನೇಕ ಸಂಘ–ಸಂಸ್ಥೆಗಳು ಸಂಕಷ್ಟದಲ್ಲಿರುವವರಿಗೆ ನೆರವಿನ ಹಸ್ತ ಚಾಚಿ ಜೀವ ಉಳಿಸಲು ನೆರವಾಗಿವೆ’ ಎಂದು ಹೇಳಿದರು.

ADVERTISEMENT

‘ಪ್ರಕೃತಿ ವಿಕೋಪ ಸೇರಿದಂತೆ ಹಲವು ಸಂದರ್ಭಗಳಲ್ಲಿ ಆರೆಸ್ಸೆಸ್ಸ್ ದೇಶದಾದ್ಯಂತ ಸೇವಾ ಚಟುವಟಿಕೆಗಳನ್ನು ಮಾಡುತ್ತಾ ಬಂದಿದೆ. ಕೋವಿಡ್ ಸಂದರ್ಭದಲ್ಲೂ ಅದು ಮುಂದುವರಿದಿದೆ. ಕಿಮ್ಸ್ ಆವರಣದಲ್ಲಿ ಆರಂಭಿಸಿರುವ ಮಾಹಿತಿ ಕೇಂದ್ರದಲ್ಲಿ ಸೋಂಕಿತರ ಚಿಕಿತ್ಸೆ ಮತ್ತು ಆರೈಕೆಗೆ ಬೇಕಿರುವ ಮಾಹಿತಿಯ ನೆರವು ಸಿಗಲಿದೆ’ ಎಂದು ತಿಳಿಸಿದರು.

ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಮಾತನಾಡಿ, ‘ಕೋವಿಡ್ ಎರಡನೇ ಅಲೆ ಎದುರಿಸಲು ಸರ್ಕಾರದ ಪ್ರಯತ್ನದ ಜತೆಗೆ, ಸಂಘ–ಸಂಸ್ಥೆಗಳು ಕೈ ಜೋಡಿಸಬೇಕು. ಈ ನಿಟ್ಟಿನಲ್ಲಿ ಸೇವಾಭಾರತಿ ಟ್ರಸ್ಟ್ ಮತ್ತು ನೆರವು ವತಿಯಿಂದ ಮಾಹಿತಿ ಕೇಂದ್ರ ಆರಂಭಿಸಿರುವುದು ಶ್ಲಾಘನೀಯ. ಇದರಿಂದ, ಸರ್ಕಾರಿ ಸಂಸ್ಥೆಗಳ ಮೇಲಿನ ಅತಿಯಾದ ಒತ್ತಡ ತಗ್ಗಲಿದೆ. ಕೋವಿಡ್ ನಿರ್ವಹಣೆ ಮತ್ತಷ್ಟು ಸರಾಗವಾಗಲಿದೆ’ ಎಂದು ಅಭಿಪ್ರಾಯಪಟ್ಟರು.

ಆರೆಸ್ಸೆಸ್ ವಿಭಾಗ ಕಾರ್ಯನಿರ್ವಾಹಕ ಕಿರಣ ಗುಡ್ಡದಕೇರಿ, ‘ಮಾಹಿತಿ ಕೇಂದ್ರವು ಕೋವಿಡ್‌ನಿಂದ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು, ಚಿಕಿತ್ಸೆ ನೀಡುವ ಆಸ್ಪತ್ರೆಗಳು, ಅಲ್ಲಿರುವ ಚಿಕಿತ್ಸೆ ವ್ಯವಸ್ಥೆ, ಪ್ಲಾಸ್ಮ ಚಿಕಿತ್ಸೆ, ಆಂಬುಲೆನ್ಸ್ ಮಾಹಿತಿ, ರೋಗಿಗಳಿಗೆ ರಕ್ತ ಒದಗಿಸುವಂತಹ ಸೇವೆಗಳನ್ನು ನೀಡಲಿದೆ’ ಎಂದು ಹೇಳಿದರು.

‘ಕೇಂದ್ರದ ಸ್ವಯಂಸೇವಕರು ಮನೆಯಿಂದ ಹೊರಬರಲಾಗದ ಅಸಹಾಯಕರು ಹಾಗೂ ವಯಸ್ಕರಿಗೆ ಔಷಧ ಮತ್ತು ಆಹಾರವನ್ನು ತಲುಪಿಸಲಿದ್ದಾರೆ. ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯುವ ಜತೆಗೆ, ಶವ ಸಂಸ್ಕಾರಕ್ಕೂ ನೆರವಾಗಲಿದ್ದಾರೆ. ನೆರವಿನ ಅಗತ್ಯ ಇರುವವರು ಸಹಾಯವಾಣಿಗೆ ಕರೆ ಮಾಡಬೇಕು’ ಎಂದು ಮಾಹಿತಿ ನೀಡಿದರು.

ಸೇವಾ ಭಾರತಿ ಕಾರ್ಯದರ್ಶಿ ಗೋವರ್ಧನ ರಾವ್, ನೆರವು ಕೇಂದ್ರದ ಮುಖ್ಯಸ್ಥ ಜಿತೇಂದ್ರ ನಾಯಕ್, ಕಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ, ತಜ್ಞ ವೈದ್ಯ ಡಾ. ಮುಲ್ಕಿ ಪಾಟೀಲ, ಮಾಧ್ಯಮಿಕ ಶಿಕ್ಷಕ ಸಮಿತಿ ಅಧ್ಯಕ್ಷ ಸಂದೀಪ ಬೂದಿಹಾಳ, ಬಿಜೆಪಿ ಮುಖಂಡರಾದ ಸಂತೋಷ ಚವ್ಹಾಣ, ತಿಪ್ಪಣ್ಣ ಮಜ್ಜಗಿ, ಬಸವರಾಜ ಕುಂದಗೋಳಮಠ, ಸುಭಾಸಸಿಂಗ್ ಜಮಾದಾರ ಇದ್ದರು.

ಸಹಾಯವಾಣಿ ಸಂಖ್ಯೆ

* 74117 34247

* 74117 44247

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.