ADVERTISEMENT

‘ಕೊರೊನಾ’ ಆತಂಕ ದೂರ ಮಾಡಲು ಜನಜಾಗೃತಿ: ಆರೋಗ್ಯ ಸಚಿವ ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2020, 12:46 IST
Last Updated 8 ಫೆಬ್ರುವರಿ 2020, 12:46 IST
   

ಹುಬ್ಬಳ್ಳಿ: ಕೊರೊನಾ ವೈರಸ್‌ನಿಂದ ರಾಜ್ಯದ ಜನರಲ್ಲಿ ಉಂಟಾಗಿರುವ ಆತಂಕವನ್ನು ದೂರ ಮಾಡಲು ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಲಾಗುವುದು. ಇದಕ್ಕಾಗಿ ಎಲ್‌ಇಡಿ ಪರದೆಯ ಮೇಲೆ ಸಂದೇಶ ಹೊತ್ತ ವಾಹನಗಳು ಹಳ್ಳಿಗಳಲ್ಲಿ ಸಂಚರಿಸಲಿವೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು ‘ಈಗಾಗಲೇ 15 ವಾಹನಗಳು ಹಳ್ಳಿಗಳಲ್ಲಿ ಸಂಚರಿಸುತ್ತಿವೆ. ಆದಷ್ಟು ಬೇಗನೆ ಇನ್ನೂ 15 ವಾಹನಗಳು ಬರಲಿವೆ. ಕೊರೊನಾ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 97 ಜನರ ರಕ್ತ ಮಾದರಿಯ ಪರೀಕ್ಷೆ ಮಾಡಲಾಗಿದೆ. ಅದರಲ್ಲಿ 70 ಜನರ ವರದಿ ಬಂದಿದ್ದು, ಸೋಂಕು ಇಲ್ಲ ಎಂಬುದು ಸ್ಪಷ್ಟವಾಗಿದೆ. ಉಳಿದವರ ರಕ್ಷಪರೀಕ್ಷೆಯ ವರದಿ ಬರಬೇಕಿದೆ’ ಎಂದು ತಿಳಿಸಿದರು.

‘ರಾಜ್ಯದ ಗಡಿ ಭಾಗಗಳಲ್ಲಿ ಕಟ್ಟೆಚ್ವರ ವಹಿಸಲಾಗಿದೆ. ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ಹತ್ತು ಬೆಡ್‌ಗಳು ಹಾಗೂ ವಿಶೇಷ ವಾರ್ಡ್‌ಗಳನ್ನು ಮೀಸಲಿಡಲಾಗಿದೆ. ಸಾಕಷ್ಟು ಮುನ್ನಚ್ಚೆರಿಕೆ ತೆಗೆದುಕೊಂಡಿರುವ ಕಾರಣ ಜನ ಆತಂಕ ಪಡುವ ಅಗತ್ಯವಿಲ್ಲ’ ಎಂದರು.

ADVERTISEMENT

ಅವಕಾಶಕ್ಕಾಗಿ ಕಾಯಬೇಕು

ನಾನು ಉಪಮುಖ್ಯಮಂತ್ರಿ ಆಗಬೇಕು ಎನ್ನುವುದು ಜನರ ಆಸೆ. ಆದರೆ, ಈ ಅವಕಾಶಕ್ಕಾಗಿ ಕಾಯಬೇಕು. ಅದಕ್ಕಿನ್ನು ಸಮಯ ಕೂಡಿಬಂದಿಲ್ಲ ಎಂದರು.

‘ಎಲ್ಲರಿಗೂ ಉತ್ತಮ ಸ್ಥಾನಮಾನ ಕೊಡಬೇಕು ಎಂಬುದು ಯಡಿಯೂರಪ್ಪ ಅವರ ಆಸೆ. ಆದರೆ, ಈಗಿನ ಪರಿಸ್ಥಿತಿ ಹೇಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಮುಂದೆ ಒಂದಲ್ಲ ಒಂದು ದಿನ ಅವಕಾಶ ಸಿಕ್ಕೇ ಸಿಗುತ್ತದೆ. ರಾಜ್ಯದ ಜನರ ಹಿತಕ್ಕಾಗಿ ಮುಖ್ಯಮಂತ್ರಿ ಬಹಳ ಒತ್ತಡದಿಂದ ಕೆಲಸ ಮಾಡುತ್ತಿದ್ದಾಗಲೂ, ನಾವೂ ಒತ್ತಡ ಹೇರಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸುವುದು ಸರಿಯಲ್ಲ’ ಎಂದರು. ನನ್ನ ಖಾತೆ ಬದಲಾವಣೆಯಾವುದಿಲ್ಲ ಎಂದೂ ಸ್ಪಷ್ಟಪಡಿಸಿದರು.

‘ಹತ್ತು ವರ್ಷ ಆಡಳಿತ ಮಾಡಿ ಕಾಂಗ್ರೆಸ್‌ನವರು ಸರ್ಕಾರದ ಖಜಾನೆ ಖಾಲಿ ಮಾಡಿದ್ದಾರೆ. ಮುಖ್ಯಮಂತ್ರಿ ಈಗ ಅದಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿರುವ ಕಾಂಗ್ರೆಸ್‌ನವರಿಗೆ ಮಾಡಲು ಕೆಲಸವಿಲ್ಲ. ಅವರಿಗೆ ಬಾಯಿಚಪಲ ಜಾಸ್ತಿಯಾಗಿದೆ. ನಮ್ಮಲ್ಲಿ ಯಾವುದೇ ಅಸಮಾಧಾನ, ಅತೃಪ್ತಿ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.