ADVERTISEMENT

ಜನೌಷಧಿ ಕೇಂದ್ರ ರದ್ದುಪಡಿಸಿದ ರಾಜ್ಯ ಸರ್ಕಾರಕ್ಕೆ ಕೋರ್ಟ್‌ ಕಪಾಳಮೋಕ್ಷ:ಸಚಿವ ಜೋಶಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 10:08 IST
Last Updated 13 ಡಿಸೆಂಬರ್ 2025, 10:08 IST
ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ   

ಹುಬ್ಬಳ್ಳಿ: ‘ಜನೌಷಧಿ ಕೇಂದ್ರ ರದ್ದುಪಡಿಸಿದ ಆದೇಶದ ಕುರಿತು ರಾಜ್ಯ ಸರ್ಕಾರಕ್ಕೆ  ಹೈಕೋರ್ಟ್‌ ಕಪಾಳಮೋಕ್ಷ ಮಾಡಿದ್ದು, ಅಲ್ಲಿಯ ನ್ಯಾಯಮೂರ್ತಿಗಳನ್ನು ಸಹ ಕಾಂಗ್ರೆಸ್‌ ವಾಗ್ದಂಡನೆಗೆ ಗುರಿ ಮಾಡಿಸಬಹುದು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವ್ಯಂಗ್ಯವಾಡಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಹುಮತವಿದೆ ಎಂದು ಕಾಂಗ್ರೆಸ್‌ ಏನೂ ಬೇಕಾದರೂ ಮಾಡುತ್ತದೆ. ತಮಿಳುನಾಡಿನಲ್ಲಿ ನ್ಯಾಯಮೂರ್ತಿ ವಿರುದ್ಧ ವಾಗ್ದಂಡನೆ ನಿರ್ಣಯ ಕಯಗೊಂಡಂತೆ, ಇಲ್ಲಿಯೂ ಕಾಂಗ್ರೆಸ್‌ ಮುಖಂಡರು ಸೋನಿಯಾ ಗಾಂಧಿ ಅವರಿಗೆ ಹೇಳಿ ನಿರ್ಣಯ ಕೈಗೊಳ್ಳಬಹುದು’ ಎಂದರು.

‘ಕಾಂಗ್ರೆಸ್‌ ರಾಜ್ಯದಲ್ಲಿ ಆಡಳಿತಕ್ಕೆ ಬಂದು ಎರಡು ವರ್ಷ ಕಳೆದಿದ್ದು, ಸುಮಾರು 2.50 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಸರ್ಕಾರ ದಿವಾಳಿ ಎದ್ದಿರುವುದರಿಂದ ಖಜಾನೆ ಖಾಲಿಯಾಗಿದೆ. ಹೀಗಾಗಿ ಒಂದೇ ಒಂದು ಹುದ್ದೆ ಭರ್ತಿ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೇಂದ್ರ ಸರ್ಕಾರ ಪ್ರತಿ ತಿಂಗಳು 50 ಸಾವಿರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದೆ. ನಿವೃತ್ತಿ ಅಥವಾ ಇನ್ನಿತರ ಕಾರಣಗಳಿಂದ ತೆರವಾದ ಜಾಗವನ್ನು ಸಹ ತಕ್ಷಣ ಭರ್ತಿ ಮಾಡಿಕೊಳ್ಳುತ್ತಿದೆ. ಯಾವ ಇಲಾಖೆಯಲ್ಲೂ ಹುದ್ದೆ ಖಾಲಿಯಿಲ್ಲ. ಸಂಸತ್‌ ಅಧಿವೇಶನ ಮುಗಿತ ತಕ್ಷಣ ರೋಜಗಾರ ಮೇಳ ಆಯೋಜಿಸಿ, ಮತ್ತಷ್ಟು ಹುದ್ದೆ ಭರ್ತಿ ಮಾಡಿಕೊಳ್ಳಲಾಗುವುದು’ ಎಂದರು.

ADVERTISEMENT

‘ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಗಳವು ಆರೋಪದ ಪ್ರಕರಣದ ಕುರಿತು ಈಗಾಗಲೇ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ. ದೋಷಾರೋಪ ಪಟ್ಟಿಯಲ್ಲಿ ಏನಿದೆ ಎನ್ನುವುದು ತಿಳಿದಿಲ್ಲ. ಆ ಕುರಿತು ಕೋರ್ಟ್‌ ತೀರ್ಪು ಸಹ ನೀಡಿಲ್ಲ. ರಾಹುಲ್‌ ಗಾಂಧಿ ಅವರನ್ನು ಸಂತೃಪ್ತಿ ಪಡಿಸಲು ಕಾಂಗ್ರೆಸ್‌ ಮಾಡುತ್ತಿರುವ ಸಾಹಸ ಜನತೆಗೆ ಗೊತ್ತಿದೆ. ರಾಜಕೀಯದ ಗಂಭೀರತೆಯಿಲ್ಲದ ರಾಹುಲ್ಲ, ಅಧಿವೇಶನ ಮತ್ತು ಚುನಾವಣೆ ಸಂದರ್ಭದಲ್ಲಿ ವಿದೇಶ ಸುತ್ತುತ್ತ ಬೇಜವಾಬ್ದಾರಿಯಿಂದ ವರ್ತಿಸುತ್ತಾರೆ. ಉತ್ತಮ ಆಡಳಿತಕ್ಕೆ ಸಮರ್ಥ ವಿರೋಧ ಪಕ್ಷವೂ ಬೇಕಾಗುತ್ತದೆ. ಹೀಗಾಗಿ, ಮೊದಲು ಕಾಂಗ್ರೆಸ್‌ನಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್‌) ಆಗಬೇಕು’ ಎಂದು ಹೇಳಿದರು.

‘ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು’ ಎನ್ನುವ ಶಾಸಕ ರಾಜು ಕಾಗೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಜೋಶಿ, ‘ರಾಜ್ಯ ಇಬ್ಭಾಗವಾಗಬೇಕು ಎನ್ನುವುದು ಬಿಜೆಪಿಯ ನಿಲುವಲ್ಲ. ಆ ಕುರಿತು ನಮ್ಮಲ್ಲಿ ಯಾವ ಯೋಚನೆಯೂ ಇಲ್ಲ. ಆದರೆ, ಅಭಿವೃದ್ಧಿ ದೃಷ್ಟಿಯಲ್ಲಿ ಈ ಭಾಗಕ್ಕೆ ತೀರಾ ಅನ್ಯಾಯವಾಗಿದೆ’ ಎಂದರು.

‘ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಮತೋಷ ಲಾಡ್‌ ಅವರಿಗೆ ಟ್ರಂಪ್‌, ಮೋದಿ, ಪುಟಿನ್‌ ಬಿಟ್ಟು ಬೇರೆ ಏನೂ ಗೊತ್ತಿಲ್ಲ. ಸ್ಥಳೀಯ ಸಮಸ್ಯೆಗಳ ಬಗ್ಗೆ ಮಾಹಿತಿಯೇ ಇಲ್ಲವಾಗಿದೆ. ಹು–ಧಾ ಮಹಾನಗರ ಪಾಲಿಕೆಗೆ ಬರಬೇಕಾದ ಅನುದಾನ ಸಹ ಸರ್ಕಾರದಿಂದ ಬರುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.