ADVERTISEMENT

ಹುಬ್ಬಳ್ಳಿ| ಸಾಕ್ಷಿ ಹೇಳುವಾಗ ಹೃದಯಾಘಾತ; ಸಾವು

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 7:39 IST
Last Updated 4 ಜನವರಿ 2026, 7:39 IST
   

ಹುಬ್ಬಳ್ಳಿ: ಇಲ್ಲಿನ ಹೊಸೂರು ಕೋರ್ಟ್‌ನ ಕಟಕಟೆಯಲ್ಲಿ ನಿಂತು ಸಾಕ್ಷಿ ಹೇಳುತ್ತಿದ್ದಾಗ ಕೃಷ್ಣ ಲಕ್ಷ್ಮಣ ಪವಾರ್‌ (69) ಹೃದಯಾಘಾತದಿಂದ ಶನಿವಾರ ಮೃತಪಟ್ಟಿದ್ದಾರೆ.

ಕೃಷ್ಣ ಪವಾರ್ ಅವರು ಖಾಸಗಿ ಪ್ರಕರಣವೊಂದಕ್ಕೆ ಸಂಬಂಧಿಸಿ ಸಾಕ್ಷಿ ಹೇಳಲು ಹುಬ್ಬಳ್ಳಿಯ ಸಿವಿಲ್ ಕೋರ್ಟ್‌ಗೆ ಹಾಜರಾಗಿದ್ದರು. ನ್ಯಾಯಾಧೀಶರ ಎದುರು ಸಾಕ್ಷಿ ಹೇಳುತ್ತಿದ್ದ ಸಂದರ್ಭ ಎದೆನೋವು ಕಾಣಿಸಿಕೊಂಡು, ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ನಗರದ ವಿವೇಕಾನಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಷ್ಟರಲ್ಲಾಗಲೇ ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.

ಅವರು ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲ್ಲೂಕಿನ ಗೂಡೂರು ಗ್ರಾಮದವರಾಗಿದ್ದು, ಅವರ ಪುತ್ರ ಸಂತೋಷ ಪವಾರ್ ಹಾವೇರಿಯಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 

ADVERTISEMENT

ಪೊಲೀಸ್ ಕಮಿಷನರ್‌ ಎನ್. ಶಶಿಕುಮಾರ್‌, ಡಿಸಿಪಿ ಮಹಾನಿಂಗ ನಂದಗಾವಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಾಲ್ವರು ವಶಕ್ಕೆ: ಇಲ್ಲಿಯ ಖಾಸಗಿ ಶಾಲೆಯೊಂದರಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮುಗಿಸಿ ಮನೆಗೆ ಹೋಗುತ್ತಿದ್ದ 7ನೇ ತರಗತಿ ವಿದ್ಯಾರ್ಥಿನಿಯನ್ನು 9ನೇ ತರಗತಿಯ ವಿದ್ಯಾರ್ಥಿಗಳಿಬ್ಬರು ಅಡ್ಡಗಟ್ಟಿ ಚುಡಾಯಿಸಿದ ಕುರಿತು ಅಶೋಕ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಚುಡಾಯಿಸಿದ್ದಕ್ಕಾಗಿ ವಿದ್ಯಾರ್ಥಿನಿ, ಒಬ್ಬನ ಕಪಾಳಕ್ಕೆ ಹೊಡೆದು, ತನ್ನ ಪಾಲಕರಿಗೆ ತಿಳಿಸಿದ್ದಾಳೆ. ಇದರಿಂದ ಕುಪಿತಗೊಂಡ ಹುಡುಗರು, ಮತ್ತಿಬ್ಬರನ್ನು ಕರೆದುಕೊಂಡು ಬಂದು ಪಾಲಕರಿಗೆ ಬೈದು, ಹಲ್ಲೆ ನಡೆಸಿದ್ದಾರೆ. ವಿದ್ಯಾರ್ಥಿಗಳ ಸಹಿತ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಕಮಿಷನರ್‌ ಎನ್. ಶಶಿಕುಮಾರ್‌ ತಿಳಿಸಿದ್ದಾರೆ.‌

ಶಾರ್ಟ್‌ ಸರ್ಕಿಟ್‌: ಇಲ್ಲಿನ ಅಕ್ಷಯ ಪಾರ್ಕ್‌ನ ಆರ್‌.ಎನ್. ಶೆಟ್ಟಿ ರಸ್ತೆಯಲ್ಲಿನ ವಿದ್ಯುತ್‌ ಉಪಕರಣದ ಅಂಗಡಿಗೆ ಶುಕ್ರವಾರ ತಡರಾತ್ರಿ ಶಾರ್ಟ್‌ ಸರ್ಕಿಟ್‌ನಿಂದ ಬೆಂಕಿ ತಗುಲಿ, ಅಪಾರ ಪ್ರಮಾಣದ ವಿದ್ಯುತ್‌ ಉಪಕರಣ ಸುಟ್ಟು ಕರಕಲಾಗಿದೆ.

ರಾಜನ್‌ ಸಾಲುಂಕಿ ಅವರಿಗೆ ಸೇರಿದ್ದ ಅಂಗಡಿ ಇದಾಗಿದ್ದು,  ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳೀಯರ ಸಹಾಯದಿಂದ ಬೆಂಕಿ ನಂದಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.