ADVERTISEMENT

ಧಾರವಾಡ: ಶಂಕಿತ ವ್ಯಕ್ತಿಗೆ ಕೋವಿಡ್–19 ದೃಢ

ಗೋವಾ, ಮಹಾರಾಷ್ಟ್ರ ಬಸ್ಸುಗಳಿಗೆ ಸಂಪೂರ್ಣ ನಿರ್ಬಂಧ; ನಗರ ಸಂಪರ್ಕಿಸುವ ರಸ್ತೆಯಲ್ಲಿ ಚೆಕ್‌ಪೋಸ್ಟ್

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2020, 10:51 IST
Last Updated 22 ಮಾರ್ಚ್ 2020, 10:51 IST
ಧಾರವಾಡದ ಗೋವಾ ಮಾರ್ಗದಲ್ಲಿ ಭಾನುವಾರ ನಗರ ಪ್ರವೇಶಿಸಿದವರನ್ನು ಥರ್ಮಲ್ ಸ್ಕ್ರೀನಿಂಗ್‌ಗೆ ಅಧಿಕಾರಿಗಳು ಒಳಪಡಿಸಿದರು
ಧಾರವಾಡದ ಗೋವಾ ಮಾರ್ಗದಲ್ಲಿ ಭಾನುವಾರ ನಗರ ಪ್ರವೇಶಿಸಿದವರನ್ನು ಥರ್ಮಲ್ ಸ್ಕ್ರೀನಿಂಗ್‌ಗೆ ಅಧಿಕಾರಿಗಳು ಒಳಪಡಿಸಿದರು   

ಧಾರವಾಡ: ನಗರದ ಹೊಸಯಲ್ಲಾಪುರದ ನಿವಾಸಿಯೊಬ್ಬರಿಗೆ ಕೋವಿಡ್–19 ಸೋಂಕು ತಗುಲಿರುವುದು ದೃಢಪಟ್ಟಿದ್ದು, ಈ ಪ್ರದೇಶದ ಮೂರು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಜಿಲ್ಲಾಡಳಿತ ತೀವ್ರ ನಿಗಾ ವಹಿಸಿ ಕ್ರಮ ಕೈಗೊಂಡಿದೆ.

33 ವರ್ಷದ ವ್ಯಕ್ತಿಮಾರ್ಚ್ 12ರಂದು ಆಸ್ಟ್ರೇಲಿಯಾದಿಂದ ದುಬೈ, ಮಸ್ಕತ್ ಹಾಗೂ ಗೋವಾ ಮೂಲಕ ಧಾರವಾಡಕ್ಕೆ ಬಂದಿದ್ದರು. ಶಂಕಿತ ಕೋವಿಡ್–19 ರೋಗಲಕ್ಷಣಗಳು ಇವರಲ್ಲಿ ಕಂಡುಬಂದಿದ್ದರಿಂದ ಮಾರ್ಚ್ 18ರಂದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಅದೇ ದಿನ ಇವರ ಗಂಟಲು ಹಾಗೂ ಮೂಗಿನ ದ್ರವದ ಮಾದರಿಯನ್ನು ಶಿವಮೊಗ್ಗದ ವೈರಾಲಜಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇವರಿಗೆ ಸೋಂಕು ಇರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೊಳಣ್ ತಿಳಿಸಿದ್ದಾರೆ.

ಹೀಗಾಗಿ ಹೊಸಯಲ್ಲಾಪುರ ಸುತ್ತಮುತ್ತಲಿನ 3 ಕಿ.ಮೀ. ವ್ಯಾಪ್ತಿಯಲ್ಲಿ ಸಾರ್ವಜನಿಕರು ಒಳಗೆ ಬರುವುದು ಹಾಗೂ ಹೊರಗೆ ಹೋಗುವುದನ್ನು ನಿರ್ಬಂಧಿಸಲಾಗಿದೆ. ಸೋಂಕು ತಗುಲಿದ ವ್ಯಕ್ತಿಗೆ ಹುಬ್ಬಳ್ಳಿ ಕಿಮ್ಸ್‌ನಲ್ಲಿ ಈಗಾಗಲೇ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ಕಂಡುಬಂದ ಸ್ಥಳದ ಸುತ್ತಮುತ್ತ ನಿಯಮಾನುಸಾರ ಸಮೀಕ್ಷೆ ಕಾರ್ಯವನ್ನು ಆರೋಗ್ಯ ಇಲಾಖೆ ಕೈಗೊಂಡಿದೆ. ಇವರ ಸಂಪರ್ಕಕ್ಕೆ ಬಂದ ವ್ಯಕ್ತಿಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ADVERTISEMENT

ಜಿಲ್ಲೆಯಾದ್ಯಂತ ಕೋವಿಡ್–19 ನಿಯಂತ್ರಣಕ್ಕೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜನರು ಭಯಗೊಳ್ಳದೆ, ಸಾಮಾಜಿಕ ಅಂತರ ಹಾಗೂ ಶುಚಿತ್ವಕ್ಕೆ ಹೆಚ್ಚು ಒತ್ತು ನೀಡಬೇಕು. ಸಾಧ್ಯವಾದಷ್ಟು ಮನೆಗಳಲ್ಲೇ ಇರುವ ಮೂಲಕ ವೈರಾಣು ಹರಡುವುದನ್ನು ತಡೆಯಲು ಸಹಕಾರ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ವಾಹನಗಳ ನಿರ್ಬಂಧ: ಜಿಲ್ಲೆಯಲ್ಲಿ ಕೋವಿಡ್–19 ಸೋಂಕು ತಗುಲಿದ ಮೊದಲ ಪ್ರಕರಣ ಪತ್ತೆಯಾದ ತಕ್ಷಣವೇ ಗೋವಾ, ಮಹಾರಾಷ್ಟ್ರದಿಂದ ಬರುವ ಮತ್ತು ಹೊರಹೋಗುವ ಎಲ್ಲಾ ವಾಹನಗಳಿಗೂ ಮಾರ್ಚ್ 31ರವರೆಗೆ ನಿರ್ಬಂಧ ಹೇರಲಾಗಿದೆ. ಜತೆಗೆ ಹುಬ್ಬಳ್ಳಿ ಧಾರವಾಡ ನಗರ ಸಂಚಾರಕ್ಕಿರುವ ಬಿಆರ್‌ಟಿಎಸ್ ಮತ್ತು ಬೇಂದ್ರೆ ಸಾರಿಗೆ ಬಸ್ಸುಗಳನ್ನು ರದ್ದುಗೊಳಿಸಲಾಗಿದೆ.

ನುಗ್ಗಿಕೇರಿ, ಕೆಲಗೇರಿ ಬಳಿ ಚೆಕ್‌ಪೋಸ್ಟ್‌ಗಳನ್ನು ಹಾಕಲಾಗಿದೆ. ಇಲ್ಲಿ ಥರ್ಮಲ್ ಸ್ಕ್ರೀನಿಂಗ್ ಅವಕಾಶ ಕಲ್ಪಿಸಲಾಗಿದೆ. ಚೆಕ್‌ಪೊಸ್ಟ್‌ ಬಳಿ ಬರುವ ವಾಹನಗಳಿಗೆ ಸೋಡಿಯಂ ಹೈಪ್ರೊಕ್ಲೋರೈಟ್ ದ್ರಾವಣವನ್ನು ಪಾಲಿಕೆ ಸಿಬ್ಬಂದಿ ಸಿಂಪಡಿಸುತ್ತಿದ್ದ ದೃಶ್ಯ ಕಂಡುಬಂತು. ಜತೆಗೆ ಮಾರುಕಟ್ಟೆ ಸೇರಿದಂತೆ ಜನರು ಹೆಚ್ಚು ಇರುವ ಸ್ಥಗಳಲ್ಲಿ ಸಿಂಪಡಿಸಲಾಗುತ್ತಿದೆ. ಹೊಸಯಲ್ಲಾಪುರದಲ್ಲಿ ಆಟೊ ಮೂಲಕ ಜಾಗೃತ ಸಂದೇಶಗಳನ್ನು ಸಾರಲಾಗುತ್ತಿದೆ.

ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರ ಚಿತ್ರವನ್ನು ಪ್ರಕಟಿಸಿ ಶಂಕಿತ ಕೋವಿಡ್–19 ಸೋಂಕಿತರು ಎಂಬ ಸಂದೇಶ ಹರಿದಾಡುತ್ತಿದೆ. ಕಾಲ್ಪನಿಕ ಹೆಸರಿನೊಂದಿಗೆ ಆರೋಗ್ಯವಂತ ವ್ಯಕ್ತಿಯ ಚಿತ್ರ ಪ್ರಕಟಿಸಿ ಹರಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.