ADVERTISEMENT

ಹೊಸ ಉಪಾಯ | ವಿಡಿಯೊ ಮೂಲಕ ಕೋವಿಡ್‌ ಆರೈಕೆ ಕೇಂದ್ರದ ಮಾಹಿತಿ

ಅಂತರ ಕಾಪಾಡಲು ಉಪಾಯ:

ಎಂ.ನವೀನ್ ಕುಮಾರ್
Published 29 ಜುಲೈ 2020, 9:39 IST
Last Updated 29 ಜುಲೈ 2020, 9:39 IST
ಹುಬ್ಬಳ್ಳಿ– ಧಾರವಾಡ ಅವಳಿ ನಗರದಲ್ಲಿರುವ ಇಲಾಖೆಯ ವಸತಿ ನಿಲಯಗಳಲ್ಲಿ ಲಕ್ಷಣರಹಿತ ಸೋಂಕಿತರ ಆರೈಕೆ ಕೇಂದ್ರಗಳನ್ನು ಆರಂಭಿಸಲಾಗಿದೆ.
ಹುಬ್ಬಳ್ಳಿ– ಧಾರವಾಡ ಅವಳಿ ನಗರದಲ್ಲಿರುವ ಇಲಾಖೆಯ ವಸತಿ ನಿಲಯಗಳಲ್ಲಿ ಲಕ್ಷಣರಹಿತ ಸೋಂಕಿತರ ಆರೈಕೆ ಕೇಂದ್ರಗಳನ್ನು ಆರಂಭಿಸಲಾಗಿದೆ.    

ಹುಬ್ಬಳ್ಳಿ: ಸೋಂಕಿತರಿಗೆ ಕೋವಿಡ್ ಆರೈಕೆ ಕೇಂದ್ರದ ಸಂಪೂರ್ಣ ಮಾಹಿತಿಯನ್ನು ವಿಡಿಯೊ ಮೂಲಕ ನೀಡುವ ವಿನೂತನ ಪ್ರಯತ್ನವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಧಾರವಾಡ ಜಿಲ್ಲಾ ಕಚೇರಿ ಮಾಡಿದೆ. ಸೋಂಕಿತರು ಹಾಗೂ ಸಿಬ್ಬಂದಿ ಅಂತರ ಕಾಪಾಡಿಕೊಳ್ಳಲು ಇದರಿಂದ ಸಾಧ್ಯವಾಗಿದೆ.

ಹುಬ್ಬಳ್ಳಿ– ಧಾರವಾಡ ಅವಳಿ ನಗರದಲ್ಲಿರುವ ಇಲಾಖೆಯ ವಸತಿ ನಿಲಯಗಳಲ್ಲಿ ಲಕ್ಷಣರಹಿತ ಸೋಂಕಿತರ ಆರೈಕೆ ಕೇಂದ್ರಗಳನ್ನು ಆರಂಭಿಸಲಾಗಿದೆ. ಇಂತಹ ಕೇಂದ್ರಗಳಲ್ಲಿ ಮಲಗುವ ಕೋಣೆ, ಸ್ನಾನಗೃಹ, ಶೌಚಾಲಯ, ಶುದ್ಧಕುಡಿಯುವ ನೀರಿನ ಘಟಕ, ಗೀಸರ್, ವಿದ್ಯುತ್ ದೀಪಗಳ ಸ್ವಿಚ್‌ಗಳು ಎಲ್ಲಿವೆ? ಬಳಕೆ ಹೇಗೆ ಎಂಬುದರ ಬಗ್ಗೆ ವಿಸ್ತೃತ ಮಾಹಿತಿಯನ್ನು ವಿಡಿಯೊ ನೀಡುತ್ತದೆ.

ಸೋಂಕಿತರು ಕೇಂದ್ರಕ್ಕೆ ದಾಖಲಾದ ತಕ್ಷಣ ಅವರ ಮೊಬೈಲ್‌ ಫೋನಿಗೆ ವಿಡಿಯೊ ಕಳುಹಿಸಲಾಗುತ್ತದೆ. ಅದರಲ್ಲೇ ಎಲ್ಲ ಮಾಹಿತಿ ಇರುವುದರಿಂದ ಸಿಬ್ಬಂದಿ ಖುದ್ದಾಗಿ ಹೋಗಿ ವಿವರ ನೀಡುವ ಅಗತ್ಯ ಇರುವುದಿಲ್ಲ. ಸಿಬ್ಬಂದಿ ಮೇಲಿನ ಹೊರೆ ತಗ್ಗಿದೆ, ಅಲ್ಲದೆ ವಿಡಿಯೊದಲ್ಲಿ ಪ್ರಾತ್ಯಕ್ಷಿಕೆ ಇರುವುದರಿಂದ ಸೌಲಭ್ಯಗಳನ್ನು ಸುಲಭವಾಗಿ ಬಳಕೆ ಮಾಡಿಕೊಳ್ಳಲು ಸೋಂಕಿತರಿಗೆ ಸಾಧ್ಯವಾಗಿದೆ.

ADVERTISEMENT

ಧಾರವಾಡ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3 ಸಾವಿರ ದಾಟಿದೆ. ಕೆಲ ದಿನಗಳಿಂದ ಪ್ರತಿ ದಿನ ನೂರಕ್ಕೂ ಅಧಿಕ ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಕೇಂದ್ರಕ್ಕೆ ದಾಖಲಾಗುವ ಪ್ರತಿಯೊಬ್ಬರಿಗೂ ಸಿಬ್ಬಂದಿಯೇ ಹೋಗಿ ಆರೈಕೆ ಕೇಂದ್ರದ ಮಾಹಿತಿ ನೀಡುವುದು ಕಷ್ಟಸಾಧ್ಯವಾಗುತ್ತದೆ. ಈ ಸಮಸ್ಯೆಗೆ ವಿಡಿಯೊ ಪರಿಹಾರವಾಗಿದೆ.

‘ಅಂತರ ಕಾಪಾಡಿಕೊಳ್ಳುವುದು ಕೊರೊನಾ ನಿಯಂತ್ರಣಕ್ಕೆ ಇರುವ ಪರಿಣಾಮಕಾರಿ ಸಾಧನ ಎಂದು ತಜ್ಞರು ಹೇಳಿದ್ದಾರೆ. ಇದು ಪ್ರತಿಯೊಂದು ಹಂತದಲ್ಲಿ ಜಾರಿಯಾದರೆ, ಕೋವಿಡ್ ಪ್ರಕರಣಗಳನ್ನು ಕಡಿಮೆ ಮಾಡಬಹುದು. ಅದೇ ಪರಿಕಲ್ಪನೆಯಲ್ಲಿ ನಮ್ಮ ಹಂತದಲ್ಲಿ ಏನು ಮಾಡಬಹುದು ಎಂದು ಯೋಚಿಸಿದಾಗ ವಿಡಿಯೊ ಮಾಡುವ ಉಪಾಯ ಹೊಳೆಯಿತು’ ಎನ್ನುತ್ತಾರೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅಜ್ಜಪ್ಪ ಸೊಗಲದ್.

ಎಲ್ಲ ಕೇಂದ್ರಗಳ ವಿಡಿಯೊ ಸಿದ್ಧ ಇದ್ದು, ನಿರ್ದಿಷ್ಟ ಕೇಂದ್ರಕ್ಕೆ ಹೋಗುವ ಸೋಂಕಿತರಿಗೆ ಆ ಕೇಂದ್ರದ ವಿಡಿಯೊ ಕಳುಹಿಸಲಾಗುತ್ತದೆ. ಇದರಿಂದ ಸಿಬ್ಬಂದಿ ಶ್ರಮವೂ ಉಳಿತಾಯವಾಗುತ್ತಿದ್ದು, ಅದನ್ನು ಬೇರೆಡೆ ವಿನಿಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.