ADVERTISEMENT

ಹುಬ್ಬಳ್ಳಿ: 800 ಹಾಸಿಗೆಗಳ ಸಾಮರ್ಥ್ಯದ ಕೋವಿಡ್‌ ಕೇರ್‌ ಸೆಂಟರ್‌

ಉತ್ತರ ಕರ್ನಾಟಕದಲ್ಲಿಯೇ ಅತಿದೊಡ್ಡ ಕೋವಿಡ್‌ ಕೇರ್‌ ಸೆಂಟರ್‌

​ಪ್ರಜಾವಾಣಿ ವಾರ್ತೆ
Published 28 ಜುಲೈ 2020, 15:23 IST
Last Updated 28 ಜುಲೈ 2020, 15:23 IST
ಹುಬ್ಬಳ್ಳಿ ಗೋಕುಲ ರಸ್ತೆಯ ದೇಶಪಾಂಡೆ ಫೌಂಡೇಷನ್‌ನಲ್ಲಿ ಸ್ಥಾಪಿಸಿರುವ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿರುವ ಸೌಲಭ್ಯಗಳನ್ನು ಸಚಿವ ಜಗದೀಶ ಶೆಟ್ಟರ್‌ ಪರಿಶೀಲಿಸಿದರು. ಶಾಸಕ ಅರವಿಂದ ಬೆಲ್ಲದ, ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಇದ್ದಾರೆ
ಹುಬ್ಬಳ್ಳಿ ಗೋಕುಲ ರಸ್ತೆಯ ದೇಶಪಾಂಡೆ ಫೌಂಡೇಷನ್‌ನಲ್ಲಿ ಸ್ಥಾಪಿಸಿರುವ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿರುವ ಸೌಲಭ್ಯಗಳನ್ನು ಸಚಿವ ಜಗದೀಶ ಶೆಟ್ಟರ್‌ ಪರಿಶೀಲಿಸಿದರು. ಶಾಸಕ ಅರವಿಂದ ಬೆಲ್ಲದ, ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಇದ್ದಾರೆ   

ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿಯೇ ಅತಿದೊಡ್ಡ ಕೋವಿಡ್‌ ಕೇರ್‌ ಸೆಂಟರ್‌ನ್ನು ನಗರದ ಗೋಕುಲ ರಸ್ತೆಯ ದೇಶಪಾಂಡೆ ಫೌಂಡೇಷನ್‌ನಲ್ಲಿ ಸ್ಥಾಪಿಸಲಾಗಿದೆ. 800 ಹಾಸಿಗೆಗಳ ಸಾಮರ್ಥ್ಯವಿರುವ ಈ ಸೆಂಟರ್‌ನ್ನು ಫೌಂಡೇಷನ್‌ ಉಚಿತವಾಗಿ ನೀಡಿದೆ.

ಕೋವಿಡ್‌ ಸೆಂಟರ್‌ಗೆ ಎರಡು ಕಟ್ಟಡಗಳನ್ನು ಬಳಸಿಕೊಳ್ಳಲಾಗಿದ್ದು, ಒಂದೊಂದು ಕಟ್ಟಡಗಳಲ್ಲಿ 400 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಕೋವಿಡ್‌ ಲಕ್ಷಣ ರಹಿತರಿಗೆ ಇಲ್ಲಿ ಚಿಕಿತ್ಸೆ ನೀಡಲು ಜಿಲ್ಲಾಡಳಿತ ಎಲ್ಲ ವ್ಯವಸ್ಥೆಯನ್ನು ಮಾಡಿದೆ.

ಸೆಂಟರ್‌ ಉದ್ಘಾಟಿಸಿ ಮಾತನಾಡಿದ ಸಚಿವ ಜಗದೀಶ ಶೆಟ್ಟರ್‌, ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ದೇಶಪಾಂಡೆ ಫೌಂಡೇಷನ್‌ ಸಹಯೋಗದಲ್ಲಿ ಹೆಚ್ಚುವರಿಯಾಗಿ ಕೋವಿಡ್‌ ಕೇರ್‌ ಸೆಂಟರ್‌ ತೆರೆದಿದೆ. ಲಕ್ಷಣ ರಹಿತರಿಗೆ ವೈದ್ಯರು ಇಲ್ಲಿ ಚಿಕಿತ್ಸೆ ನೀಡಲಿದ್ದಾರೆ. ವಿದ್ಯಾನಗರದ ಬಾಲಾಜಿ ಆಸ್ಪತ್ರೆ ಸಹಯೋಗದಲ್ಲಿ ಅಶೋಕಾ ಆಸ್ಪತ್ರೆಯನ್ನು ಸಂಪೂರ್ಣ ಕೋವಿಡ್‌ ಖಾಸಗಿ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದೆ. ಅಲ್ಲಿ, 50 ಹಾಸಿಗೆಗಳಿದ್ದು, ಐಸಿಯುನಲ್ಲಿ ಆರು ಹಾಸಿಗೆಗಳಿವೆ ಎಂದರು.

ADVERTISEMENT

ಧಾರವಾಡ ಜಿಲ್ಲೆಯ ವಿವಿಧ ಆಸ್ಪತ್ರೆ, ವಸತಿ ಗೃಹಗಳಲ್ಲಿ 6,000ಕ್ಕೂ ಹೆಚ್ಚು ಹಾಸಿಗೆಗಳ ಸೌಲಭ್ಯಗಳಿವೆ. ಕಿಮ್ಸ್‌ನಲ್ಲಿ ಮತ್ತೆ ಹೆಚ್ಚುವರಿಯಾಗಿ 500 ಹಾಸಿಗೆಗಳ ವ್ಯವಸ್ಥೆ ಮಾಡಲಾಗುವುದು. ಆರಂಭದಲ್ಲಿ ಖಾಸಗಿ ಆಸ್ಪತ್ರೆಗಳು ಹಾಸಿಗೆ ನೀಡಲು ಹಿಂದೇಟು ಹಾಕುತ್ತಿದ್ದವು. ಈಗ ಸ್ವಯಂ ಪ್ರೇರಿತವಾಗಿ ಕೋವಿಡ್‌ ಚಿಕಿತ್ಸೆಗೆ ಹಾಸಿಗೆಗಳನ್ನು ನೀಡಲು ಮುಂದೆ ಬಂದಿವೆ. ಹುಬ್ಬಳ್ಳಿಯ ಸಿಟಿ ಕ್ಲಿನಿಕ್‌ ಆಸ್ಪತ್ರೆ ಹಾಗೂ ಇತರ ಮೂರು ಆಸ್ಪತ್ರೆಗಳು ಸೇರಿ ಒಂದು ಆಸ್ಪತ್ರೆಯನ್ನು ಕೋವಿಡ್‌ ಆಸ್ಪತ್ರೆಯನ್ನಾಗಿ ಪರಿವರ್ತಿಸಲು ಮುಂದೆ ಬಂದಿವೆ ಎಂದು ಶೆಟ್ಟರ್‌ ತಿಳಿಸಿದರು.

ಖಾಸಗಿ ಆಸ್ಪತ್ರೆಗಳು ಕೋವಿಡ್‌ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡುವಂತಿಲ್ಲ. ಕುಟುಂಬ ಸದಸ್ಯರಿಗೆ ಚಿಕಿತ್ಸೆ ನೀಡದಿರುವ ಕುರಿತು ಸುಚಿರಾಯಿ ಆಸ್ಪತ್ರೆ ಕುರಿತು ಶಾಸಕ ಪ್ರಸಾದ ಅಬ್ಬಯ್ಯ ದೂರಿದ್ದಾರೆ. ಆದರೆ, ಆ ಕುರಿತುಲಿಖಿತವಾಗಿ ಯಾವುದೇ ದೂರು ಸಲ್ಲಿಸಿಲ್ಲ ಎಂದರು.

ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾತನಾಡಿ, ಕೋವಿಡ್‌ ರೋಗಿಗಳನ್ನು ಕರೆತರಲು ಹುಬ್ಬಳ್ಳಿಯಲ್ಲಿ 11, ಧಾರವಾಡದಲ್ಲಿ ಎಂಟು ಆಂಬುಲೆನ್ಸ್‌ಗಳಿವೆ. ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ, ಅವರನ್ನು ಆಸ್ಪತ್ರೆಗೆ ಅಥವಾ ಸೆಂಟರ್‌ಗೆ ಸಾಗಿಸಲು ಕೆಲವು ಕಡೆ ವಿಳಂಬವಾಗುತ್ತಿವೆ. ಕಿಮ್ಸ್‌ನಲ್ಲಿ 40 ವೆಂಟಿಲೇಟರ್‌ಗಳಿದ್ದು, 17 ಬಳಕೆಯಾಗುತ್ತಿವೆ. ಮತ್ತೆ ಹೆಚ್ಚುವರಿಯಾಗಿ 30 ವೆಂಟಿಲೇಟರ್‌ಗಳು ಬಂದಿವೆ ಎಂದು ಮಾಹಿತಿ ನೀಡಿದರು.

ಶಾಸಕ ಅರವಿಂದ ಬೆಲ್ಲದ, ಉಪವಿಭಾಗಾಧಿಕಾರಿ ಮಹ್ಮದ್‌ ಜುಬೇರ್‌, ಶಹರ ತಹಶೀಲ್ದಾರ್‌ ಶಶಿಧರ ಮಾಡ್ಯಾಳ, ಗ್ರಾಮೀಣ ತಹಶೀಲ್ದಾರ್‌ ಪ್ರಕಾಶ ನಾಶಿ, ಡಿಸಿಪಿ ಕೃಷ್ಣಕಾಂತ, ವಿವೇಕ ಪವಾರ, ಡಾ. ಅಶೋಕ ಬಂಗಾರ ಶೆಟ್ಟರ್‌, ಡಾ. ಕ್ರಾಂತಿಕಿರಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.