ನವಲಗುಂದ: ‘ರೈತರ ಹೊಲಗಳಿಗೆ ಹೋಗಲು ರಸ್ತೆ ನಿರ್ಮಿಸಲಾಗಿದೆ ಎಂದು ಹೇಳುವ ಸ್ಥಳೀಯ ಶಾಸಕರು, ಸ್ಮಶಾನಕ್ಕೆ ಹೋಗುವ ರಸ್ತೆಯನ್ನು ಏಕೆ ನಿರ್ಮಿಸಿಲ್ಲ’ ಎಂದು ರೈತ ಮುಖಂಡ ವೀರನಗೌಡ ಹಿರೇಗೌಡರ ಪ್ರಶ್ನಿಸಿದರು.
ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ತಾಲ್ಲೂಕಿನ ಸೊಟಕನಾಳ ಗ್ರಾಮದಲ್ಲಿ ಶವಸಂಸ್ಕಾರಕ್ಕೆ ತೆರಳಲು ಸೂಕ್ತ ರಸ್ತೆ ಇಲ್ಲ ಎಂದು ಗ್ರಾಮಸ್ಥರು ಈಚೆಗೆ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಸಭೆ ನಡೆಯಿತು.
‘ಸೊಟಕನಾಳ ಗ್ರಾಮದಲ್ಲಿ ಸರ್ಕಾರ 20 ಗುಂಟೆ ಜಾಗವನ್ನು ಸ್ಮಶಾನಕ್ಕೆ ನೀಡಿದೆ. ಆದರೆ, ಅಂತ್ಯಕ್ರಿಯೆ ನಡೆಸಲು ಸ್ಮಶಾನಕ್ಕೆ ತೆರಳಲು ಸೂಕ್ತ ರಸ್ತೆ ಇಲ್ಲ. ಸಂಬಂಧಿಸಿದ ಅಧಿಕಾರಿಗಳು ಹಾಗೂ ಶಾಸಕರು ಕೂಡಲೆ ಸ್ಮಶಾನ ರಸ್ತೆ ನಿರ್ಮಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಶವ ಇಟ್ಟು ಪ್ರತಿಭಟನೆ ಮಾಡಲಾಡಗುವುದು’ ಎಂದು ಎಚ್ಚರಿಸಿದರು.
ಶಿವು ಗುಡಸಲಮನಿ ಮಾತನಾಡಿ, ಇಂದಿನ ಸಭೆಗೆ ತಹಶೀಲ್ದಾರ್ ಸುಧೀರ ಸಾಹುಕಾರ ಬಾರದೆ ನಿರ್ಲಕ್ಷ್ಯ ವಹಿಸಿದ್ದಾರೆ. ಸ್ಮಶಾನ ರಸ್ತೆ ನಿರ್ಮಿಸದಿದ್ದಲ್ಲಿ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದರು.
ತಾಲ್ಲೂಕು ಪಂಚಾಯಿತಿ ಯೋಜನಾಧಿಕಾರಿ ಬಿ.ಎಸ್.ಪಾಟೀಲ ಮಾತನಾಡಿ, ಗ್ರಾಮಸ್ಥರ ಮನವಿಯನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಅಧಿಕಾರಿಗಳಾದ ಎಸ್.ಬಿ.ತೋಟದ, ಕೆ.ಎಂ.ಕೋಳಿ, ವಾಸುದೇವ ಮುಕ್ಕಣ್ಣವರ, ಎಂ.ಎಸ್.ಹೂಗಾರ, ಗ್ರಾಮಸ್ಥರಾದ ಚನ್ನಪ್ಪಗೌಡ ಹಿರೇಗೌಡರ, ನಾಗರಾಜ ತಳವಾರ, ಸಂಕ್ರಪ್ಪ ಚಲವಾದಿ, ಅಶೋಕ ಕೊಣ್ಣೂರ, ಶಿವಾನಂದ ಚಿಕ್ಕನರಗುಂದ, ಬಸವರಡ್ಡಿ ಕಿರೇಸೂರ, ಸಿದ್ದಪ್ಪ ಹಾಲವರ, ಬಸಪ್ಪ ಆನಂದಿ, ರವಿರಡ್ಡಿ ರೂಗಿ, ಮಹೇಶ ಆನಂದಿ, ಅಶೋಕರಡ್ಡಿ ವೆಂಕರಡ್ಡಿಯವರ, ಹನಮರಡ್ಡಿ ದೇವರಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.