ADVERTISEMENT

ಕ್ರಿಕೆಟ್‌: ಅಗ್ರಸ್ಥಾನಕ್ಕೇರಿದ ಸಿಸಿಕೆ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2021, 2:29 IST
Last Updated 25 ಮಾರ್ಚ್ 2021, 2:29 IST

ಹುಬ್ಬಳ್ಳಿ: ತನ್ನ ಮೂರನೇ ಲೀಗ್‌ ಪಂದ್ಯದಲ್ಲಿ ಮೂರು ವಿಕೆಟ್‌ಗಳ ಗೆಲುವು ದಾಖಲಿಸಿದ ಧಾರವಾಡದ ಕ್ರಿಕೆಟ್‌ ಕ್ಲಬ್‌ ಆಫ್‌ ಕರ್ನಾಟಕ (ಸಿಸಿಕೆ) ‘ಎ’ ತಂಡ, ಕೆಎಸ್‌ಸಿಎ ಧಾರವಾಡ ವಲಯ ಆಯೋಜಿಸಿರುವ ಮೊದಲ ಡಿವಿಷನ್‌ ಕ್ರಿಕೆಟ್‌ ಟೂರ್ನಿಯ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನ ಸಂಪಾದಿಸಿದೆ.

ಇಲ್ಲಿನ ಕರ್ನಾಟಕ ಜಿಮ್ಖಾನಾ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಧಾರವಾಡದ ಎಸ್‌ಡಿಎಂ ‘ಎ’ ತಂಡ 44.5 ಓವರ್‌ಗಳಲ್ಲಿ 228 ರನ್‌ ಗಳಿಸಿತು. ನಿತಿನ್‌ ಭಿಲ್ಲೆ (65) ಉತ್ತಮ ಬ್ಯಾಟಿಂಗ್‌ ಇದಕ್ಕೆ ಕಾರಣವಾಯಿತು. ಈ ಗುರಿಯನ್ನು ಸಿಸಿಕೆ 35.2 ಓವರ್‌ಗಳಲ್ಲಿ ಏಳು ವಿಕೆಟ್‌ ಕಳೆದುಕೊಂಡು ತಲುಪಿತು. ನಿನಾದ್‌ ಬಿ.ಎನ್‌. (52) ಮತ್ತು ಸಚಿನ್‌ ರಜಪೂತ್‌ (42) ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಸಿಸಿಕೆ ತಂಡದ ಖಾತೆಯಲ್ಲಿ ಒಟ್ಟು 12 ಅಂಕಗಳಿವೆ. ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್‌ (ಎಚ್‌ಎಸ್‌ಸಿ) ಹಾಗೂ ಎಸ್‌ಡಿಎಂ ತಂಡಗಳು ತಲಾ ಎಂಟು ಅಂಕಗಳನ್ನು ಹೊಂದಿವೆ.

ದಿನದ ಇನ್ನೊಂದು ಪಂದ್ಯದಲ್ಲಿ ಎಚ್‌ಎಸ್‌ಸಿ ‘ಎ’ ತಂಡ ಮೊದಲು ಬ್ಯಾಟ್‌ ಮಾಡಿ 48.5 ಓವರ್‌ಗಳಲ್ಲಿ 204 ರನ್‌ ಗಳಿಸಿತು. ಈ ಗುರಿ ಎದುರು ಪರದಾಡಿದ ಹುಬ್ಬಳ್ಳಿ ಕ್ರಿಕೆಟ್‌ ಅಕಾಡೆಮಿ ‘ಎ’ ತಂಡ 40.4 ಓವರ್‌ಗಳಲ್ಲಿ 150 ರನ್‌ ಕಲೆಹಾಕಿ ತನ್ನ ಹೋರಾಟ ಮುಗಿಸಿತು.

ADVERTISEMENT

ಮತ್ತೊಂದು ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಬೆಳಗಾವಿ ಸ್ಪೋರ್ಟ್ಸ್‌ ಕ್ಲಬ್‌ ‘ಬಿ’ ತಂಡ 50 ಓವರ್‌ಗಳಲ್ಲಿ 265 ರನ್‌ ಗಳಿಸಿತ್ತು. ಎದುರಾಳಿ ಬೆಳಗಾವಿಯ ಆನಂದ ಕ್ರಿಕೆಟ್‌ ಅಕಾಡೆಮಿ 41.1 ಓವರ್‌ಗಳಲ್ಲಿ 223 ರನ್‌ ಗಳಿಸಿ ಆಲೌಟ್‌ ಆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.