ADVERTISEMENT

ಸೈಬರ್‌ ಕ್ರೈಂ ವಂಚಕರಿಗೆ ವಿದ್ಯಾವಂತರೇ ಆದಾಯ!

ಕಾಲ್‌ ಸೆಂಟರ್ ನಿರುದ್ಯೋಗಿಗಳೇ ಸೈಬರ್ ಕ್ರೈಂ ರೂವಾರಿಗಳು, ತನಿಖೆ ವೇಳೆ ಮಾಹಿತಿ ಲಭ್ಯ

ನಾಗರಾಜ್ ಬಿ.ಎನ್‌.
Published 6 ಜನವರಿ 2020, 10:01 IST
Last Updated 6 ಜನವರಿ 2020, 10:01 IST
   

ಹುಬ್ಬಳ್ಳಿ: ಅಪರಾಧ ಚಟುವಟಿಕೆಗಳ ತಡೆಗೆ ಪೊಲೀಸ್ ಇಲಾಖೆ ಎಷ್ಟೇ ಜಾಗೃತಿ, ಅಭಿಯಾನ ನಡೆಸಿದರೂ ಪ್ರಯೋಜನವಾಗುತ್ತಿಲ್ಲ. ಅದರಲ್ಲೂ, ಸೈಬರ್ ಅಪರಾಧ ಪ್ರಕರಣಗಳು ಮಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ವಿದ್ಯಾವಂತ ಸಮೂಹವೇ ವಂಚಕರ ಜಾಲಕ್ಕೆ ಸಿಲುಕುತ್ತಿರುವುದು ಅಚ್ಚರಿಯ ಸಂಗತಿ.

ಕಳೆದ ವರ್ಷ ಹುಬ್ಬಳ್ಳಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ 110 ಪ್ರಕರಣಗಳು ದಾಖಲಾಗಿದ್ದವು. ಪ್ರಸ್ತುತ, ವರ್ಷದ ಆರಂಭದ ನಾಲ್ಕು ದಿನಗಳಲ್ಲಿಯೇ ಮೂರು ಪ್ರಕರಣಗಳು ದಾಖಲಾಗಿವೆ.

ಅಪರಾಧ ತಡೆ ಮಾಸಚರಣೆ ನಡೆಸುವ ಪೊಲೀಸ್‌ ಇಲಾಖೆ, ಸೈಬರ್‌ ಕ್ರೈಂ ಕುರಿತು ಜಾಗೃತಿ ಅಭಿಯಾನ ನಡೆಸುತ್ತಿದೆ. ಈಗಾಗಲೇ ನಗರದ ಪ್ರಮುಖ ಮಾರುಕಟ್ಟೆ ಪ್ರದೇಶಗಳಲ್ಲಿ, ಮಾಲ್‌ಗಳಲ್ಲಿ ಜಾಗೃತಿ ನಡೆಸಿ, ಕೈಗೊಳ್ಳಬೇಕಾದ ಎಚ್ಚರಿಕೆ ಕ್ರಮಗಳ ಮಾಹಿತಿ ಇರುವ ಕರ ಪತ್ರಗಳನ್ನು ಹಂಚಿದ್ದಾರೆ.

ADVERTISEMENT

ಸೈಬರ್ ಮೂಲಕ ವಂಚಕರು ಬೀಸುವ ಜಾಲದಲ್ಲಿ ನಗರದ ಪ್ರತಿಷ್ಠಿತ ವೈದ್ಯರು, ಅವರ ಪತ್ನಿಯರು, ಉದ್ಯಮಿಗಳು, ಸರ್ಕಾರಿ ನೌಕರರು, ವಿದ್ಯಾರ್ಥಿಗಳು ಬೀಳುತ್ತಿದ್ದಾರೆ. ನಗರದ ಪ್ರತಿಷ್ಠಿತ ಆಸ್ಪತ್ರೆಯ ಮೂವರು ವೈದ್ಯರು ₹7ರಿಂದ 10 ಲಕ್ಷದವರೆಗೆ ಕಳೆದುಕೊಂಡಿದ್ದಾರೆ. ಧಾರವಾಡದ ಉದ್ಯಮಿಯೊಬ್ಬರು ಕ್ಯಾನ್ಸರ್ ಔಷಧಿ ಸರಬರಾಜು ಮಾಡಲು ಹೋಗಿ ಬರೋಬ್ಬರಿ ₹20 ಲಕ್ಷ ಆನ್‌ಲೈನ್‌ನಲ್ಲಿ ವರ್ಗಾವಣೆ ಮಾಡಿ ಮೋಸ ಹೋಗಿದ್ದಾರೆ.

ಕೆಲವು ಪತಿ, ಪತ್ನಿಯರ ಜಂಟಿ ಬ್ಯಾಂಕ್ ಖಾತೆಗಳಿದ್ದು, ವಂಚಕರು ಪತ್ನಿಯರ ಮೊಬೈಲ್‌ಗೆ ಕರೆ ಮಾಡಿ ಒಟಿಪಿ ಪಡೆದು ಹಣ ವರ್ಗಾಯಿಸಿಕೊಂಡಿದ್ದಾರೆ. ಉದ್ಯೋಗ ಬಯಸಿ ಶೈನ್ ಡಾಟ್.ಕಾಮ್ ವೆಬ್‌ಸೈಟ್‌ಗೆ ಅರ್ಜಿ ಹಾಕಿದ್ದ ಬಿವಿಬಿ ಕಾಲೇಜು ವಿದ್ಯಾರ್ಥಿನಿ ಯೊಬ್ಬರಿಂದ ₹45 ಸಾವಿರ ವರ್ಗಾಯಿಸಿಕೊಂಡಿದ್ದಾರೆ. ಓಎಲ್ಎಕ್ಸ್, ಕ್ಯೂಆರ್ ಕೋಡ್ ಸ್ಕ್ಯಾನ್, ವೆಬ್‌ಸೈಟ್‌ ಲಿಂಕ್ ಮೂಲಕವೂ ಅನೇಕರು ಹಣ ಕಳೆದುಕೊಂಡಿದ್ದಾರೆ.

ಕಾಲ್ ಸೆಂಟರ್‌ನಲ್ಲಿ ಉದ್ಯೋಗ ಮಾಡಿ ನಿರುದ್ಯೋಗಿಯಾಗಿರುವವರೇ ಹೆಚ್ಚಾಗಿ ಸೈಬರ್ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿರುತ್ತಾರೆ ಎನ್ನುವ ಮಾಹಿತಿ ಪ್ರಕರಣವೊಂದರ ಬೆನ್ನತ್ತಿ ಹೋದಾಗ ಹುಬ್ಬಳ್ಳಿ ಸೈಬರ್ ಕ್ರೈಂ ಪೊಲೀಸರಿಗೆ ಲಭ್ಯವಾಗಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಇನ್‌ಸ್ಪೆಕ್ಟರ್‌ ಪ್ರಭುಗೌಡ ಪಾಟೀಲ, ‘ಉತ್ತರ ಪ್ರದೇಶ, ಬೆಂಗಳೂರು, ಮಹಾರಾಷ್ಟ್ರ, ದೆಹಲಿಗಳಲ್ಲಿ ಕಾಲ್ ಸೆಂಟರ್‌ನಲ್ಲಿ ಉದ್ಯೋಗ ಮಾಡುತ್ತಿದ್ದವರು, ನೋಟು ಅಮಾನ್ಯೀಕರಣ ಹಾಗೂ ಆರ್ಥಿಕ ಹಿಂಜರಿತದಿಂದ ಕೆಲಸ ಕಳೆದುಕೊಂಡು ತಮ್ಮ ರಾಜ್ಯಗಳಿಗೆ ಹಿಂದಿರುಗಿದ್ದಾರೆ. ತಾಂತ್ರಿಕವಾಗಿ ಪರಿಣಿತರಿರುವ ಅವರು, ತಮ್ಮ ನಡುವೆ ನಿರಂತರ ಸಂಪರ್ಕ ಇಟ್ಟುಕೊಂಡು, ಅಂತರ್ಜಾಲದ ಮೂಲಕ ವಂಚನೆಯ ಜಾಲ ಬೀಸುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.