
ಹುಬ್ಬಳ್ಳಿ: ‘ತಾಲ್ಲೂಕಿನ ಇನಾಂ ವೀರಾಪುರದಲ್ಲಿ ನಡೆದ ಘಟನೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರಲ್ಲಿ ರೇಣುಕಾ ದೊಡ್ಡಮನಿ ಅವರ ಸ್ಥಿತಿ ಗಂಭೀರವಾಗಿದ್ದು, ತಜ್ಞ ವೈದ್ಯರ ಮಾರ್ಗದರ್ಶನದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದರು.
ನಗರದ ವಿವೇಕಾನಂದ ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
‘ತೀವ್ರ ಗಾಯಗೊಂಡಿರುವ ರೇಣುಕಾ ಅವರು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 72 ಗಂಟೆಗಳ ನಂತರ ಅವರ ಪರಿಸ್ಥಿತಿ ಆಧರಿಸಿ ಮುಂದಿನ ಚಿಕಿತ್ಸೆ ನೀಡುವುದಾಗಿ ವೈದ್ಯರು ತಿಳಿಸಿದ್ದಾರೆ. ಎಲ್ಲ ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಜಿಲ್ಲಾಡಳಿತವೇ ಭರಿಸಲಿದೆ. ಚಿಕಿತ್ಸೆಯ ಉಸ್ತುವಾರಿ ನೋಡಿಕೊಳ್ಳಲು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ’ ಎಂದರು.
‘ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಆರು ಮಂದಿಯನ್ನು ಬಂಧಿಸಲಾಗಿದೆ. ಇನ್ನುಳಿದವರ ಬಂಧನಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಮಾನ್ಯಾ ಕುಟುಂಬದ ಕೆಲವು ಸದಸ್ಯರು ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲರೂ ಗುಣಮುಖರಾದ ನಂತರ, ಸಂಬಂಧಪಟ್ಟ ಇಲಾಖೆ ಜತೆ ಅವರ ಗ್ರಾಮಕ್ಕೆ ತೆರಳಿ ಎಲ್ಲರನ್ನೂ ಕರೆಸಿ ಸಂಧಾನ ಮಾಡುತ್ತೇವೆ. ಎಸ್‌ಸಿ/ಎಸ್‌ಟಿ ಜಾಗೃತ ಸಮಿತಿಯಿಂದಲೂ ಅರಿವು ಮೂಡಿಸುವ ಕೆಲಸ ಮಾಡಲಾಗುವುದು’ ಎಂದರು.
ಜಿಲ್ಲಾಡಳಿತಕ್ಕೆ ಧಿಕ್ಕಾರ: ಮರ್ಯಾದೆಗೇಡು ಹತ್ಯೆ ಹಾಗೂ ಹಲ್ಲೆ ಪ್ರಕರಣ ನಡೆದು ಮೂರು ದಿನದ ನಂತರ ಆಸ್ಪತ್ರೆಗೆ ಜಿಲ್ಲಾಧಿಕಾರಿ ಭೇಟಿ ನೀಡಿದ್ದಾರೆ ಎಂದು ದಲಿತ ವಿಮೋಚನಾ ಸಮಿತಿ ಸದಸ್ಯರು ವಿವೇಕಾನಂದ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಅವರ ಕಾರು ತಡೆದು, ಜಿಲ್ಲಾಡಳಿತಕ್ಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಧಿಕ್ಕಾರ ಕೂಗಿದರು.
ಆಕ್ರೋಶ, ಧರಣಿ: ನಗರ ಪ್ರದೇಶದಲ್ಲಿ ಇಂಥ ಕೃತ್ಯ ನಡೆದಿದ್ದರೆ ಆರೋಪಿಗಳ ಕಾಲಿಗೆ ಗುಂಡಿನ ಏಟು ಬೀಳುತ್ತಿತ್ತು. ಗ್ರಾಮೀಣ ಪ್ರದೇಶದಲ್ಲಿ ಯಾಕಿಲ್ಲ? ಇನಾಂ ವೀರಾಪುರ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ದಲಿತ ಕುಟುಂಬದವರೆಲ್ಲ ಮನೆಗಳನ್ನು ಖಾಲಿ ಮಾಡಿದ್ದಾರೆ. ಆರೋಪಿಗಳು ದೊಡ್ಡ ಮನೆತನದವರಾಗಿದ್ದು, ರಾಜಕೀಯ ಹಾಗೂ ಹಣದ ಪ್ರಾಬಲ್ಯ ಹೊಂದಿದ್ದಾರೆ. ಹಲ್ಲೆ ನಡೆಸಿದವರು ಗ್ರಾಮದಲ್ಲಿ ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಅವರನ್ನು ಬಂಧಿಸಲು ರಾಜಕೀಯದ ಒತ್ತಡವಿದೆಯೇ’ ಎಂದು ದಲಿತ ಸಂಘಟನೆಯ ಪ್ರಮುಖರು ಪೊಲೀಸರನ್ನು ಪ್ರಶ್ನಿಸಿದರು. ಈ ವೇಳೆ ಪೊಲೀಸರ ಜತೆ ಮಾತಿನ ಚಕಮಕಿ ನಡೆಯಿತು.
ಕ್ರಮಕ್ಕೆ ಆಗ್ರಹ: ‘ಗ್ರಾಮದಲ್ಲಿ ಇರುವುದು ಮೂರು ದಲಿತ ಕುಟುಂಬಗಳು ಮಾತ್ರ. ಎಲ್ಲರೂ ಜೀವಭಯದಲ್ಲಿಯೇ ಇದ್ದಾರೆ. ಪಿಡಿಒ ಅವರಿಂದಲೂ ಸ್ಪಂದನೆ ಸಿಗುತ್ತಿಲ್ಲ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಕಾಟಾಚಾರಕ್ಕೆ ಬಂದು ಹೋಗಿದ್ದು, ಅವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಹಲ್ಲೆಗೊಳಗಾದ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸಬೇಕು’ ಎಂದು ದಲಿತ ವಿಮೋಚನ ಸಮಿತಿಯ ರಾಜ್ಯಾಧ್ಯಕ್ಷ ಸುರೇಶ ಖಾನಾಪುರ ಆಗ್ರಹಿಸಿದರು.
ಸದ್ಯ ಆರು ಮಂದಿಯನ್ನಷ್ಟೇ ಬಂಧಿಸಲಾಗಿದೆ. ಇನ್ನೂ ಸಾಕಷ್ಟು ಮಂದಿಯಿದ್ದು ಪೊಲೀಸರು ಶೀಘ್ರ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕುಶ್ರೀಧರ ಕಂದಗಲ್ ಮುಖಂಡ ದಲಿತ ವಿಮೋಚನಾ ಸಮಿತಿ
‘ಕುಟುಂಬವನ್ನೇ ನರಕ ಮಾಡಿದ
’ ‘ಪ್ರಾಬಲ್ಯ ಹೊಂದಿರುವ ಪಾಟೀಲ ಕುಟುಂಬದ ಹುಡುಗಿ ನಮ್ಮ ಕುಟುಂಬಕ್ಕೆ ಸರಿ ಹೊಂದುವುದಿಲ್ಲ ಮದುವೆ ಆಗುವುದು ಬೇಡ ಎಂದು ವಿವೇಕಾನಂದನಿಗೆ ಹೇಳಿದ್ದೆವು. ನಮ್ಮನ್ನೆಲ್ಲ ಧಿಕ್ಕರಿಸಿ ಮದುವೆಯಾಗಿ ಈಗ ಇಡೀ ಕುಟುಂಬವನ್ನೇ ನರಕ ಮಾಡಿಬಿಟ್ಟ’ ಎಂದು ಮೃತ ಮಾನ್ಯಾಳ ಪತಿ ವಿವೇಕಾನಂದ ಅವರ ದೊಡ್ಡಮ್ಮ ಜಯಶೀಲವ್ವ ದೊಡ್ಡಮನಿ ಕಣ್ಣಿರು ಹಾಕಿದರು.
ಗ್ರಾಮದಲ್ಲಿ ಆತಂಕದ ಛಾಯೆ
ವಿವೇಕಾನಂದ ಅವರ ಕುಟುಂಬದ ಸದಸ್ಯರು ಗಾಯಗೊಂಡು ಹುಬ್ಬಳ್ಳಿ ಆಸ್ಪತ್ರೆಯಲ್ಲಿದ್ದರೆ ಮಾನ್ಯಾ ಅವರ ತಂದೆ ಪ್ರಕಾಶಗೌಡ ಪಾಟೀಲ ಕುಟುಂಬದವರೆಲ್ಲ ಊರು ತೊರೆದಿದ್ದಾರೆ. ಇನಾಂ ವೀರಾಪುರ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದ್ದು ಆತಂಕದ ವಾತಾವರಣ ನಿರ್ಮಾಣವಾಗಿದೆ. ಮುಂಜಾಗ್ರತಾ ಕ್ರಮವಾಗಿ ಎರಡೂ ಮನೆಗಳ ಎದುರು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ವಿಧಿ–ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಘಟನೆ ನಡೆದ ಸ್ಥಳದಲ್ಲಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.