ADVERTISEMENT

ಮಹದಾಯಿ, ಮೇಕೆದಾಟು ನೀರಾವರಿ ಯೋಜನೆ ಜಾರಿಗೆ ಧೈರ್ಯ ತೋರಿ: ಎಚ್.ಡಿ.ಕುಮಾರಸ್ವಾಮಿ

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2021, 8:13 IST
Last Updated 23 ಆಗಸ್ಟ್ 2021, 8:13 IST
ಎಚ್.ಡಿ. ಕುಮಾರಸ್ವಾಮಿ
ಎಚ್.ಡಿ. ಕುಮಾರಸ್ವಾಮಿ   

ಹುಬ್ಬಳ್ಳಿ: ‘ರಾಜ್ಯದ ಕೃಷ್ಣಾ ಮೇಲ್ಡಂಡೆ ಯೋಜನೆ (ಯುಕೆಪಿ), ಮಹದಾಯಿ ಹಾಗೂ ಮೇಕೆದಾಟು ನೀರಾವರಿ ಯೋಜನೆಗಳ ಜಾರಿಗೆ ಕೇಂದ್ರ ಸರ್ಕಾರ ಧೈರ್ಯ ಪ್ರದರ್ಶಿಸಬೇಕು. ಯಾವುದೇ ರಾಜ್ಯಗಳ ಒತ್ತಡಕ್ಕೆ ಮಣಿಯದೆ ಸಮಸ್ಯೆ ಬಗೆಹರಿಸುವ ಬದ್ಧತೆಯನ್ನು ತೋರಿಸಬೇಕು’ ಎಂದುಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಒತ್ತಾಯಿಸಿದರು.

ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದರೂ, ತಮಿಳುನಾಡಿನ ಒತ್ತಡಕ್ಕೆ ಮಣಿದಿದ್ದ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿತ್ತು. ಆದರೆ, ಮಹದಾಯಿ ಮತ್ತು ಕೃಷ್ಣಾ ವಿಷಯದಲ್ಲಿ ಮೌನವಾಯಿತು. ಇದು ಕೇಂದ್ರದ ಇಬ್ಬಗೆಯ ನೀತಿಗೆ ಸಾಕ್ಷಿ’ ಎಂದರು.

ತುಟಿ ಬಿಚ್ಚದ ಸಂಸದರು

ADVERTISEMENT

‘ಮಹದಾಯಿ ವಿಷಯದಲ್ಲಿ ಗೆಜೆಟ್ ಅಧಿಸೂಚನೆಯಾಗಿದ್ದರೂ, ಕೆಲ ಷರತ್ತುಗಳನ್ನು ಹಾಕಿಕೊಂಡರು. ಅದಕ್ಕಾಗಿ ಪರಿಸರ, ಅರಣ್ಯ ಇಲಾಖೆ ಸಮ್ಮತಿ ಕಾರಣ ಕೊಟ್ಟರು. ನೀರಿನ ಬಳಕೆಯಲ್ಲಿ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಗೋವಾ ದೂರು ಸಲ್ಲಿಸಿತ್ತು. ಆ ಕುರಿತು ವರದಿ ನೀಡಲು ನೇಮಿಸಿದ್ದ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾದ ಅಧೀಕ್ಷಕ ಎಂಜಿನಿಯರ್‌ಗಳ ನೇತೃತ್ವದ ಸಮಿತಿ ಇಂದಿಗೂ ವರದಿ ನೀಡಿಲ್ಲ. ಗೋವಾ ಒತ್ತಡಕ್ಕೆ ಮಣಿದು ಮಹದಾಯಿ ಯೋಜನೆ ಜಾರಿ ವಿಷಯದಲ್ಲೂ ರಾಜ್ಯಕ್ಕೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ. ಈ ಬಗ್ಗೆ ಬಿಜೆಪಿ ಸಂಸದರು ತುಟಿ ಬಿಚ್ಚುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕೃಷ್ಣಾ ನೀರಿಗಾಗಿ ಆಂಧ್ರಪ್ರದೇಶ ಮತ್ತು ತೆಲಂಗಾಣದ ನಡುವೆ ಉದ್ಭವಿಸಿರುವ ವಿವಾದಕ್ಕೂ ಕರ್ನಾಟಕಕ್ಕೂ ಸಂಬಂಧವಿಲ್ಲ. ಇದೇ ವಿಷಯ ಆಧಾರವಾಗಿಟ್ಟುಕೊಂಡು, ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ಗೆಜೆಟ್ ಅಧಿಸೂಚನೆ ಹೊರಡಿಸದೆ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಲಾಗುತ್ತಿದೆ’ ಎಂದು ಹೇಳಿದರು.

ಪಾದಯಾತ್ರೆ

‘ನೀರಾವರಿ ಯೋಜನೆಗಳ ವಿಷಯದಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ಪಕ್ಷ ರಾಜ್ಯದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಿದೆ. ಮಹದಾಯಿಗೆ ಸಂಬಂಧಿಸಿದಂತೆ ಬೆಳಗಾವಿಯಿಂದ, ಕೃಷ್ಣಾ ಯೋಜನೆ ಕುರಿತು ಆಲಮಟ್ಟಿ, ಮೇಕೆದಾಟುಗಾಗಿ ತಲಕಾವೇರಿ ಹಾಗೂ ಸಕಲೇಶಪುರದಿಂದ ಎತ್ತಿನ ಹೊಳೆ ಯೋಜನೆಗೆ ಸಂಬಂಧಿಸಿದಂತೆ ಪಾದಯಾತ್ರೆ ನಡೆಸಿ ಜನರಲ್ಲಿ ಜಾಗೃತಿ ಮೂಡಿಲಾಗುವುದು. ಬಳಿಕ, ಬೆಂಗಳೂರಿನಲ್ಲಿ ದೊಡ್ಡ ಸಮಾವೇಶ ಹಮ್ಮಿಕೊಳ್ಳಲಾಗುವುದು. ಕೋವಿಡ್ ಸ್ಥಿತಿಯನ್ನು ನೋಡಿಕೊಂಡು, ವಿಜಯದಶಮಿ ದಿನಂದು ಪಾದಯಾತ್ರೆ ಆರಂಭಿಸುವ ಚಿಂತನೆ ಇದೆ’ ಎಂದರು.

.ಕ ವಿರೋಧಿಯಲ್ಲ

‘ಪಕ್ಷ ಉತ್ತರ ಕರ್ನಾಟಕ ವಿರೋಧಿಯಲ್ಲ. ಎಚ್‌.ಡಿ. ದೇವೇಗೌಡ ಅವರು ಪ್ರಧಾನಿಯಾಗಿದ್ದಾಗ ಯುಕೆಪಿ ಯೋಜನೆಗೆ ₹200 ಕೋಟಿ ಬಿಡುಗಡೆ ಮಾಡಿದ್ದರು. ಆಗ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಚಂದ್ರಬಾಬು ನಾಯ್ಡು ಆಕ್ಷೇಪ ವ್ಯಕ್ತಪಡಿಸಿ, ಬೆಂಬಲ ವಾಪಸ್ ಪಡೆಯುವ ಬೆದರಿಕೆ ಹಾಕಿದ್ದರು. ಅದಕ್ಕೆ ದೇವೇಗೌಡರು ಜಗ್ಗದೆ ಬದ್ಧತೆ ತೋರಿಸಿದರು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಪಾಲಿಕೆ ಚುನಾವಣೆಯಲ್ಲಿ ಗೆಲ್ಲಲು ತಂತ್ರ’

‘ಹುಬ್ಬಳ್ಳಿ–ಧಾರವಾಡ, ಕಲಬುರ್ಗಿ ಹಾಗೂ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ತಂತ್ರ ಹೆಣೆಯಲಾಗಿದೆ. ಪಕ್ಷದ ಸಾಮರ್ಥ್ಯಕ್ಕೆ ಅನುಗುಣವಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತಿದೆ’ ಎಂದು ಕುಮಾರಸ್ವಾಮಿ ಹೇಳಿದರು.

‘ಹುಬ್ಬಳ್ಳಿ–ಧಾರವಾಡದಲ್ಲಿ 70 ವಾರ್ಡ್‌ಗಳಿಂದ, ಕಲಬುರ್ಗಿಯಿಂದ 55 ಹಾಗೂ ಬೆಳಗಾವಿಯಲ್ಲಿ 22 ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ವೈದ್ಯರು, ವಕೀಲರು, ಸಾಹಿತಿಗಳು ಸೇರಿದಂತೆ ವಿದ್ಯಾವಂತರಿಗೆ ಟಿಕೆಟ್ ನೀಡಲಾಗಿದೆ’ ಎಂದರು.

ಬಿಜೆಪಿಕಾಂಗ್ರೆಸ್‌ನಿಂದ ಕೋವಿಡ್ ನಿಯಮ ಉಲ್ಲಂಘನೆ

‘ಕೇಂದ್ರ ಸಚಿವರ ನೇತೃತ್ವದಲ್ಲಿ ನಡೆಯುತ್ತಿರುವ ಜನಾಶೀರ್ವಾದ ಯಾತ್ರೆಯಲ್ಲಿ ಜನಪ್ರತಿನಿಧಿಗಳೇ ಕೋವಿಡ್ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಕಾಂಗ್ರೆಸ್‌ನವರೂ ಪಕ್ಷದ ಉಸ್ತುವಾರಿ ನೇತೃತ್ವದಲ್ಲಿ ಸಮಾವೇಶ ಮಾಡುತ್ತಾ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ’ ಎಂದು ಕುಮಾರಸ್ವಾಮಿ ಆರೋಪಿಸಿದರು.

‘ಜನಾಶೀರ್ವಾದದಲ್ಲಿ ಜನರಿಗೆ ಯಾವುದೇ ಸಂದೇಶಗಳಿಲ್ಲ. ಕಾರ್ಯಕರ್ತರು ಮತ್ತು ಬೆಂಬಲಿಗರ ಗುಂಪು ಕಟ್ಟಿಕೊಂಡು ಹಾರ ಹಾಕುವುದು, ಗಾಳಿಯಲ್ಲಿ ಗುಂಡು ಹಾರಿಸುವುದಷ್ಟೇ ನಡೆಯುತ್ತಿದೆ. ನಿಯಮ ಪಾಲಿಸಿ ಮಾದರಿಯಾಗಬೇಕಾದವರೇ, ಉಲ್ಲಂಘಿಸಿ ಕೋವಿಡ್ ಹರಡಲು ಕಾರಣವಾಗಬಾರದು’ ಎಂದರು.

ಪಕ್ಷದ ಮುಖಂಡರಾದ ಎನ್‌.ಎಚ್. ಕೋನರಡ್ಡಿ, ಶರಣಗೌಡ ಕಂದಕೂರ, ಗುರುರಾಜ ಹುಣಸಿಮರದ ಹಾಗೂ ಸ್ಥಳಿಯ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.