ADVERTISEMENT

ಧಾರವಾಡ: ಬ್ಯಾಂಕ್ ನಿಧಾನಗತಿಗೆ ಡಿ.ಸಿ ಅಸಮಾಧಾನ

ಫಲಾನುಭವಿಗಳಿಗೆ ಯೋಜನೆಗಳನ್ನು ತಲುಪಿಸಲು ಸಹಕಾರ ನೀಡದ ಬ್ಯಾಂಕ್‌ಗಳು

​ಪ್ರಜಾವಾಣಿ ವಾರ್ತೆ
Published 13 ಜನವರಿ 2022, 12:48 IST
Last Updated 13 ಜನವರಿ 2022, 12:48 IST
ನಿತೇಶ್ ಪಾಟೀಲ
ನಿತೇಶ್ ಪಾಟೀಲ   

ಧಾರವಾಡ: ‘ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ಬ್ಯಾಂಕ್‌ಗಳುನಿಧಾನಗತಿ ಅನುಸರಿಸುತ್ತಿವೆ. ವಿಶೇಷವಾಗಿ ಖಾಸಗಿ ಬ್ಯಾಂಕ್‌ಗಳು ಕೇಂದ್ರ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಿ ಸಮಗ್ರ ಅಭಿವೃದ್ಧಿ ಸಾಧಿಸಲು ಸಹಕಾರ ನೀಡದಿರುವುದು ಕಂಡುಬರುತ್ತಿದೆ’ ಎಂದು ಜಿಲ್ಲಾಧಿಕಾರಿ ನಿತೇಶ್ ಕೆ. ಪಾಟೀಲ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಬ್ಯಾಂಕರ್ಸ್‌ ಸಮಿತಿಯ ತ್ರೈಮಾಸಿಕ ಸಭೆಯಯ ವರ್ಚ್ಯುಯಲ್ ವೇದಿಕೆಯಲ್ಲಿ ಬುಧವಾರ ಮಾತನಾಡಿದ ಅವರು, ‘ಜಿಲ್ಲೆಯ ಅನೇಕ ಖಾಸಗಿ ಬ್ಯಾಂಕ್‌ಗಳು ಸರ್ಕಾರಿ ಯೋಜನೆಗಳ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ನೀಡಲು ವಿಳಂಬ ಧೋರಣೆ ಅನುಸರಿಸುತ್ತಿವೆ. ವಿಶೇಷವಾಗಿ ಪಿಎಂಎವೈ ಸೇರಿದಂತೆ ವಸತಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಬ್ಯಾಂಕ್‌ಗಳು ಸಕಾಲಕ್ಕೆ ಸಹಕಾರ ನೀಡುತ್ತಿಲ್ಲ’ ಎಂದರು.

‘ಜಿಲ್ಲಾ ಲೀಡ್ ಬ್ಯಾಂಕ್ ಖಾಸಗಿ ಲೇವಾದೇವಿಗಾರರಿಂದ ಸಾಲ ಪಡೆಯುವುದನ್ನು ತಪ್ಪಿಸಲು ಜಿಲ್ಲೆಯಾದ್ಯಂತ ಇರುವ ಬ್ಯಾಂಕ್‌ಗಳು ನೀಡಿರುವ ಸಾಲ ಹಾಗೂ ಖಾಸಗಿ ಲೇವಾ ದೇವಿಗಾರರಿಂದ ಪಡೆದಿರುವ ಸಾಲದ ಕುರಿತು ಕಾರ್ಯಾಚರಣೆ ಕೈಗೊಳ್ಳಬೇಕು. ಬ್ಯಾಂಕಿನ ಬಡ್ಡಿ ದರ ಹಾಗೂ ಸಲ್ಲಿಸಬೇಕಾದ ಸರಳ ದಾಖಲೆಗಳ ಕುರಿತು ಆಯಾ ಬ್ಯಾಂಕಿನ ವ್ಯಾಪ್ತಿಯ ಗ್ರಾಹಕರು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ನರೇಗಾ ಯೋಜನೆಯಡಿ ಬರುವ ದುಡಿಮೆಯ ಹಣ, ಬೆಳೆವಿಮೆ ಮತ್ತು ಬೆಳೆ ಪರಿಹಾರದ ಹಣವನ್ನು ರೈತರ ಅಥವಾ ಫಲಾನುಭವಿಗಳ ಸಾಲದ ಮೊತ್ತಕ್ಕೆ ಬ್ಯಾಂಕ್‌ಗಳು ಹೊಂದಾಣಿಕೆ ಮಾಡಿಕೊಳ್ಳುತ್ತಿರುವ ಕುರಿತು ಜಿಲ್ಲಾಡಳಿತಕ್ಕೆ ದೂರುಗಳು ಬರುತ್ತಿವೆ. ಈ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗಸೂಚಿ ಹಾಗೂ ಸುತ್ತೋಲೆಗಳನ್ನು ಅನೇಕ ಬ್ಯಾಂಕ್‌ಗಳು ಪಾಲನೆ ಮಾಡುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯ್ತಿ ಸಿಇಒ ಡಾ. ಬಿ. ಸುಶೀಲಾ ಮಾತನಾಡಿ, ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಹಿಳಾ ಸಬಲೀಕರಣ ಮತ್ತು ಮಹಿಳಾ ಸ್ವಉದ್ಯೋಗಿಯಾಗಿ ಸ್ವಾವಲಂಬಿಯಾಗಲು ಅನೇಕ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿವೆ. ಪ್ರಮುಖವಾಗಿ ಎಸ್‌ಎಚ್‌ಜಿ ಮಹಿಳಾ ಗುಂಪುಗಳನ್ನು ರಚಿಸಿ ಬ್ಯಾಂಕ್ ಲಿಂಕೇಜ್ ಮಾಡಿ ಉತ್ತೇಜಿಸಲು ಕ್ರಮ ವಹಿಸಲಾಗುತ್ತಿದೆ. ಆದರೆ, ಕೆಲವು ಬ್ಯಾಂಕ್‌ಗಳು ದಾಖಲೆಗಳನ್ನು ಕೇಳುವ ನೆಪದಲ್ಲಿ ಸೌಲಭ್ಯ ನೀಡಲು ನಿಧಾನಗತಿ ಮಾಡುತ್ತಿರುವುದು ಕಂಡುಬರುತ್ತಿದೆ’ ಎಂದರು.

ಬ್ಯಾಂಕ್ ಆಫ್ ಬರೋಡಾ ಹುಬ್ಬಳ್ಳಿ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ವ್ಯವಸ್ಥಾಪಕ ಮತಿ ಚಕ್ರವರ್ತಿ,ಜಿಲ್ಲಾ ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪಕ ಆರ್. ಅಣ್ಣಯ್ಯ, ನಬಾರ್ಡ್ ಡಿಡಿಎಂ ಮಯೂರ ಕಾಂಬಳೆ, ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳು, ಹಣಕಾಸು ಸಂಸ್ಥೆಗಳ ಮುಖ್ಯಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.