
ಧಾರವಾಡ: ‘ಪದವಿ ಹಂತದಲ್ಲಿ ಕೃತಕ ಬುದ್ಧಿಮತ್ತೆ(ಎ.ಐ) ವಿಷಯವನ್ನು ಪಠ್ಯದಲ್ಲಿ ಅಳವಡಿಸಲು ನಿರ್ಧರಿಸಲಾಗಿದೆ. ಕಲಿಕೆಯಲ್ಲಿ ತಂತ್ರಜ್ಞಾನವನ್ನು ಅಳವಡಿಸುವ ಮೂಲಕ ಸಮಕಾಲೀನ ಅಗತ್ಯಗಳಿಗೆ ಶಿಕ್ಷಣ ಕ್ಷೇತ್ರ ಸ್ಪಂದಿಸಬೇಕಿದೆ’ ಎಂದು ಕರ್ನಾಟಕ ವಿ.ವಿ ಕುಲಪತಿ ಪ್ರೊ.ಎ.ಎಂ.ಖಾನ್ ತಿಳಿಸಿದರು.
ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯ ಕಾಲೇಜು ಇಂಗ್ಲಿಷ್ ಶಿಕ್ಷಕರ ಸಂಘದ ವತಿಯಿಂದ ಪ್ರೊ. ಚಂದ್ರಶೇಖರ ಕಂಬಾರ ಸಭಾಂಗಣದಲ್ಲಿ ಬುಧವಾರ ನಡೆದ ‘ನಮಗೆ ಯಾವ ರೀತಿಯ ಪಠ್ಯ ಬೇಕು?’ ವಿಷಯ ಕುರಿತ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಭಾರತೀಯ ಸಂಸ್ಕೃತಿಯನ್ನು ಮನದಟ್ಟು ಮಾಡುವ, ಮೌಲ್ಯಗಳನ್ನು ಜಾಗೃತಗೊಳಿಸುವ ಪಠ್ಯ ಅಳವಡಿಸಬೇಕು. ವಿದ್ಯಾರ್ಥಿಗಳಿಗೆ ವಿಷಯದ ಆಯ್ಕೆಯನ್ನು ಮುಕ್ತವಾಗಿಸಲು ಚಿಂತನೆ ನಡೆದಿದೆ’ ಎಂದರು
ಪರೀಕ್ಷಾಂಗ ಕುಲಸಚಿವ ಪ್ರೊ. ಎನ್.ವೈ. ಮಟ್ಟಿಹಾಳ ಮಾತನಾಡಿ, ‘ಉದ್ಯೋಗಾವಕಾಶ ಕಲ್ಪಿಸುವ, ಕೌಶಲವನ್ನು ಹೆಚ್ಚಿಸುವ, ಪರಿಸರದ ಕುರಿತು ಜಾಗೃತಿ ಮೂಡಿಸುವ ಪಠ್ಯ ರಚನೆ ಮಾಡಬೇಕು. ಈ ಕಾರ್ಯಾಗಾರ ಚರ್ಚೆಯನ್ನು ಪ್ರಸಾರಾಂಗದ ವತಿಯಿಂದ ಪುಸ್ತಕ ರೂಪದಲ್ಲಿ ಪ್ರಕಟಿಸಲು ಕ್ರಮ ವಹಿಸಲಾಗುವುದು’ ಎಂದು ತಿಳಿಸಿದರು.
ವಿಮರ್ಶಕ ಪ್ರೊ. ರಾಜೇಂದ್ರ ಚೆನ್ನಿ, ರಾಜ್ಯ ಪಠ್ಯ ಪುನರ್ರಚನಾ ಸಮಿತಿಯ ಅಧ್ಯಕ್ಷ ಎಂ.ಜಿ.ಹೆಗಡೆ ಕುಮಟಾ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.