ADVERTISEMENT

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ₹2,000 ಕೋಟಿ ಮೀಸಲಿಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2020, 12:34 IST
Last Updated 19 ನವೆಂಬರ್ 2020, 12:34 IST

ಹುಬ್ಬಳ್ಳಿ: ಬಹುವರ್ಷಗಳ ಬೇಡಿಕೆ ಈಡೇರಿಸಿರುವ ರಾಜ್ಯ ಸರ್ಕಾರ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಕೂಡಲೇ ₹2,000 ಕೋಟಿ ಅನುದಾನ ಮೀಸಲಿಡಬೇಕು ಎಂದು ಕರ್ನಾಟಕ ರಾಜ್ಯ ರತ್ನಭಾರತ ರೈತ ಸಮಾಜದ ರಾಜ್ಯ ಗೌರವ ಅಧ್ಯಕ್ಷ ಹೇಮನಗೌಡ ಬಸನಗೌಡ ಆಗ್ರಹಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ನಿಗಮ ಸ್ಥಾಪನೆಗೆ ಎಂ.ಬಿ. ಪಾಟೀಲ ಸೇರಿದಂತೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ. ಈ ಮೂಲಕ ಅವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಪಾಟೀಲರು ಚುನಾವಣೆಯ ಸಮಯದಲ್ಲಿ ಮತಕ್ಕಾಗಿ ಇಂಥ ಹೇಳಿಕೆಗಳನ್ನು ನೀಡಲಿ. ಈಗ ಚುನಾವಣೆಯ ಸಮಯವಲ್ಲ, ವಿರೋಧದ ಹೇಳಿಕೆಗಳನ್ನು ನೀಡುವುದು ತರವಲ್ಲ’ ಎಂದರು.

‘ವೀರಶೈವ ಲಿಂಗಾಯತ ಸಮಾಜದಲ್ಲಿ ಅನೇಕ ಉಪಪಂಗಡಗಳಿದ್ದು, ಅವರಲ್ಲಿ ಬಹಳಷ್ಟು ಜನರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಪರಿಣಾಮ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಕೊಡಿಸಲು ಸಾಧ್ಯವಾಗುತ್ತಿಲ್ಲ. ನಿಗಮದ ಮೂಲಕ ಸೌಲಭ್ಯಗಳನ್ನು ಒದಗಿಸಿ ನೆರವಾಗಬೇಕು’ ಎಂದರು.

ADVERTISEMENT

‘ಎರಡು ವರ್ಷಗಳಿಂದ ಮೇಲಿಂದ ಮೇಲೆ ಮಳೆ ಸುರಿದ ಪರಿಣಾಮ ಬೆಳೆ ಹಾಗೂ ಮನೆಗಳಿಗೆ ಹಾನಿಯಾಗಿದ್ದು, ಇದಕ್ಕೆ ಸರ್ಕಾರ ಆದಷ್ಟು ಬೇಗನೆ ಸೂಕ್ತ ಪರಿಹಾರ ನೀಡಬೇಕು. ರೈತರ ಎಲ್ಲ ಬೆಳೆಗಳಿಗೆ ಬೆಂಬಲ ಬೆಲೆ ನೀಡಿ ನೆರವಿಗೆ ಬರಬೇಕು’ ಎಂದು ಕೋರಿದರು.

ರೈತ ಸಮಾಜದ ಪ್ರಮುಖರಾದ ವಿ.ಎಫ್‌. ಪಾಟೀಲ, ಸಿ.ಎಸ್‌. ಪಾಟೀಲ, ಎನ್‌.ವಿ. ಸಿದ್ದನಗೌಡ್ರ, ಬಸನಗೌಡ ಹಿರೇಗೌಡ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.