ADVERTISEMENT

ಡಿಕೆಶಿ ಅಕ್ರಮ ಆಸ್ತಿ ಸರ್ಕಾರದ ವಶಕ್ಕೆಪಡೆಯಲು ಎಸ್‌.ಆರ್‌. ಹಿರೇಮಠ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2019, 4:06 IST
Last Updated 25 ಸೆಪ್ಟೆಂಬರ್ 2019, 4:06 IST

ಹುಬ್ಬಳ್ಳಿ: ಹಣಕಾಸಿನ ಅವ್ಯವಹಾರದಲ್ಲಿ ಆರೋಪಿಯಾಗಿರುವ ಶಾಸಕ ಡಿ.ಕೆ. ಶಿವಕುಮಾರ ಅವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್‌. ಹಿರೇಮಠ ಆಗ್ರಹಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 25ಕ್ಕೂ ಹೆಚ್ಚು ವರ್ಷಗಳ ಕಾಲ ಜನಪ್ರತಿನಿಧಿಯಾಗಿದ್ದಾರೆ. ಆದ್ದರಿಂದ ಪಿಸಿ ಆ್ಯಕ್ಟ್‌ನಡಿ ಪ್ರಕರಣ ದಾಖಲಿಸಬೇಕು. ಅಕ್ರಮವಾಗಿ ಸಂಪಾದಿಸಿರುವ ಆಸ್ತಿಯನ್ನು ಸರ್ಕಾರದ ವಶಕ್ಕೆ ಒಪ್ಪಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಯಶವಂತಪುರ ಹೋಬಳಿಯ ಸೋಮಕಟ್ಟಿ ಗ್ರಾಮದಲ್ಲಿನ ಗೋಮಾಳದ ಭೂಮಿಯನ್ನು ಕೆಲ ಭ್ರಷ್ಟ ಅಧಿಕಾರಿಗಳು ಹರಾಜು ಹಾಕಿದ್ದಾರೆ. ಅದನ್ನು ಬೇನಾಮಿ ಹೆಸರಿನಲ್ಲಿ ಡಿ.ಕೆ. ಶಿವಕುಮಾರ ಅವರು ಖರೀದಿಸಿದ್ದಾರೆ. ಅಲ್ಲಿ 30–40 ವರ್ಷಗಳಿಂದ 300ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಅವರ ಮೇಲೆ ದಬ್ಬಾಳಿಕೆ ಮಾಡಿ ಒಕ್ಕಲೆಬ್ಬಿಸಲು ಕೆಲವರು ಮುಂದಾಗಿದ್ದಾರೆ. ಪ್ರಕರಣ ಹೈಕೋರ್ಟ್‌ನಲ್ಲಿರುವುದುರಿಂದ ಅವರಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.

ADVERTISEMENT

ಅತಿವೃಷ್ಟಿಯಿಂದ ಉತ್ತರ ಕರ್ನಾಟಕದ ಜನತೆ ಬಹಳಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ. ರಾಜ್ಯ ಸರ್ಕಾರ ಪರಿಹಾರ ಕಾರ್ಯಗಳಿಗಾಗಿ ಹಣ ಬಿಡುಗಡೆ ಮಾಡಿರುವುದು ಸ್ವಾಗತಾರ್ಹ. ಆದರೆ, ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡುವಲ್ಲಿ ವಿಳಂಬ ಮಾಡುತ್ತಿರುವುದು ದುರದೃಷ್ಟಕರ. ಕೂಡಲೇ ಕೇಂದ್ರವು ರಾಜ್ಯದ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.