ಹುಬ್ಬಳ್ಳಿ: ಇಲ್ಲಿನ ಈಶ್ವರನಗರದ ದಕ್ಷಿಣ ವೈಷ್ಣೋದೇವಿ ಮಂದಿರದ ಬಳಿ ಅರ್ಚಕ ದೇವಪ್ಪಜ್ಜ ವನಹಳ್ಳಿ ಅವರನ್ನು ಕೊಲೆ ಮಾಡಿದ ಆರೋಪಿಯಾದ ಕಮರಿಪೇಟೆ ನಿವಾಸಿ ಸಂತೋಷ ಭೋಜಗಾರನನ್ನು ಸೋಮವಾರ ತಡರಾತ್ರಿ ಪೊಲೀಸರು ಬಂಧಿಸಿದ್ದಾರೆ.
ದೇವಪ್ಪಜ್ಜ ಅವರು ವಿವಿಧ ಪೂಜಾ ಪ್ರಕ್ರಿಯೆ ನಡೆಸುತ್ತಿದ್ದರು. ಸಂತೋಷನ ಕುಟುಂಬ ಸಹ ಪೂಜೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿತ್ತು. ಆದರೆ ಅದು ಸಕಾರಾತ್ಮಕ ಪರಿಣಾಮ ಬೀರಿರಲಿಲ್ಲ. ಅವರ ಕುಟುಂಬದ ಕೆಲವು ಸದಸ್ಯರು ಮೃತಪಟ್ಟಿದ್ದರು. ಇದರಿಂದ ಕೋಪಗೊಂಡು ಸಂತೋಷ ದೇವಪ್ಪಜ್ಜ ಅವರನ್ನು ಕೊಲೆ ಮಾಡಿರುವುದಾಗಿ ಪೊಲೀಸ್ ವಿಚಾರಣೆಯಲ್ಲಿ ತಿಳಿದು ಬಂದಿದೆ. ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದ್ದು, ಹೆಚ್ಚಿನ ತನಿಖೆಗೆ ಪೊಲೀಸ್ ಕಸ್ಟಡಿಗೆ ಪಡೆಯಲು ನಿರ್ಧರಿಸಲಾಗಿದೆ.
'ಅರ್ಚಕ ದೇವಪ್ಪಜ್ಜ ಅವರನ್ನು ಜುಲೈ 21ರಂದು ಸಂಜೆ ಚಾಕು ಇರಿದು ಕೊಲೆ ಮಾಡಲಾಗಿತ್ತು. ಪ್ರಕರಣ ನವನಗರ ಠಾಣೆಯಲ್ಲಿ ದಾಖಲಾಗಿದ್ದು, ಆರೋಪಿ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು. ಎರಡು ವರ್ಷದ ಹಿಂದೆಯೂ ದೇವಪ್ಪಜ್ಜ ಅವರನ್ನು ಕೊಲೆಗೆ ಯತ್ನಿಸಲಾಗಿತ್ತು. ಅಂದಿನ ಹಾಗೂ ಈಗಿನ ಸಿಸಿಟಿವಿ ವಿಡಿಯೊ ದೃಶ್ಯ ಪರಿಶೀಲಿಸಿ, ಅನುಮಾನಾಸ್ಪದ ವ್ಯಕ್ತಿಯ ಚಿತ್ರವನ್ನು ಮಾಧ್ಯಮಗಳಿಗೆ ನೀಡಲಾಗಿತ್ತು. ಅದನ್ನು ನೋಡಿದ ವ್ಯಕ್ತಿಯೊಬ್ಬರು ಆರೋಪಿ ಗುರುತು ಪತ್ತೆ ಹಚ್ಚಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಚನ್ನಮ್ಮ ವೃತ್ತದಲ್ಲಿ ಸೋಮವಾರ ರಾತ್ರಿ 11ರ ವೇಳೆ ಆರೋಪಿಯನ್ನು ಬಂಧಿಸಲಾಗಿದೆ' ಎಂದು ಸುದ್ದಿಗೋಷ್ಠಿಯಲ್ಲಿ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಹೇಳಿದರು.
'ಆರೋಪಿ ಸಂತೋಷ ಕೋವಿಡ್ ಪೂರ್ವ ವಾಹನ ಶುಚಿಗೊಳಿಸುವ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಆಟೊ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಕಮರಿಪೇಟೆ ಸುತ್ತಮುತ್ತ ಅವನ ಸಂಬಂಧಿಕರ ಮನೆಗಳಿವೆ. ಅವನ ಸಹೋದರ ಹಾಗೂ ಇತರರು ದೇವಪ್ಪಜ್ಜರ ಬಳಿ ಪೂಜಾ ವಿಧಾನಕ್ಕೆ ಹೋಗುತ್ತಿದ್ದರು. ಅದರೆ, ಅದು ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು. ತನ್ನ ಕುಟುಂಬಕ್ಕೆ ದೇವಪ್ಪಜ್ಜ ಅವರಿಂದಲೇ ಅನ್ಯಾಯವಾಗಿದೆ ಎಂದು ಭಾವಿಸಿ, ಕೊಲೆಗೆ ನಿರ್ಧರಿಸಿದ್ದ' ಎಂದು ಹೇಳಿದರು.
'ಈವರೆಗಿನ ತನಿಖೆಯಲ್ಲಿ ಕೊಲೆ ಆರೋಪಿ ಸಂತೋಷ ಒಬ್ಬನೇ ಆಗಿರುವುದು ಕಂಡು ಬಂದಿದೆ. ಅವನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದೇವೆ. ಕೃತ್ಯ ನಡೆದ ನಂತರ ಧರಿಸಿದ ಜರ್ಕಿನ್ ಹಾಗೂ ಚಾಕು ಎಸೆದಿರುವುದಾಗಿ ಹೇಳಿದ್ದಾನೆ. ಅವುಗಳನ್ನು ವಶಪಡಿಸಿಕೊಂಡು, ಎಲ್ಲ ದೃಷ್ಟಿಕೋನದಲ್ಲೂ ತನಿಖೆ ನಡೆಸಲಾಗುವುದು' ಎಂದು ಹೇಳಿದರು.
ಡಿಸಿಪಿಗಳಾದ ಮಹಾನಿಂಗ ನಂದಗಾವಿ, ಸಿ.ಆರ್. ರವೀಶ್, ಎಸಿಪಿಗಳಾದ ಶಿವಪ್ರಕಾಶ ನಾಯ್ಕ, ಉಮೇಶ ಚಿಕ್ಕಮಠ, ನವನಗರ ಠಾಣೆ ಇನ್‌ಸ್ಪೆಕ್ಟರ್ ಸಮೀವುಲ್ಲ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.