ADVERTISEMENT

ಭಕ್ತ ಸಮ್ಮೇಳನ ಕಾರ್ಯಕ್ರಮ 20ರಿಂದ

ಶಾರದಾದೇವಿ ವಿಶ್ವಭಾವೈಕ್ಯ ಮಂದಿರದ ಉದ್ಘಾಟನೆಯ 8ನೇ ವಾರ್ಷಿಕೋತ್ಸವ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2021, 13:22 IST
Last Updated 18 ಮಾರ್ಚ್ 2021, 13:22 IST

ಹುಬ್ಬಳ್ಳಿ: ನಗರದ ಡಾಲರ್ಸ್‌ ಕಾಲೊನಿಯಲ್ಲಿರುವ ಶ್ರೀಮಾತಾ ಆಶ್ರಮದ ಶಾರದಾದೇವಿ ವಿಶ್ವಭಾವೈಕ್ಯ ಮಂದಿರದ ಉದ್ಘಾಟನೆಯ 8ನೇ ವಾರ್ಷಿಕೋತ್ಸವ ಮಾ. 20 ಹಾಗೂ 21ರಂದು ಜರುಗಲಿದೆ.

ಆಶ್ರಮದ ಅಧ್ಯಕ್ಷೆ ಮಾತಾ ತೇಜೋಮಯಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಆಶ್ರಮದ ಸಭಾಭವನದಲ್ಲಿ 20ರಂದು ಬೆಳಿಗ್ಗೆ 9.30ಕ್ಕೆ ಭಕ್ತ ಸಮ್ಮೇಳನ ನಡೆಯಲಿದ್ದು, ಧಾರವಾಡದ ರಾಮಕೃಷ್ಣ ವಿವೇಕಾನಂದ ಆಶ್ರಮದ ವಿಜಯಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಿರ್ದೇಶಕ ರಾಜು ವಿ. ಜರತಾರಘರ ಉದ್ಘಾಟನೆ ನೆರವೇರಿಸಲಿದ್ದು, ಹುಬ್ಬಳ್ಳಿ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ರಘುವೀರಾನಂದ ಮಹಾರಾಜ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ’ ಎಂದರು.

‘ಕಲಬುರ್ಗಿಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಮಹೇಶ್ವರಾನಂದ ಮಹಾರಾಜ್‌ ‘ತ್ಯಾಗ ಸೇವೆಗಳ ಹರಿಕಾರ ಸ್ವಾಮಿ ವಿವೇಕಾನಂದ’ ವಿಷಯ ಕುರಿತು, ದೇವರಹುಬ್ಬಳ್ಳಿಯ ಸಿದ್ಧಾರೂಢಮಠದ ಜಾನಮ್ಮ ಅವರು ‘ಅಧ್ಯಾತ್ಮಲೋಕದ ಧ್ರುವತಾರೆ ಶ್ರೀಮಾತೆ’ ವಿಷಯದ ಕುರಿತು ಉಪನ್ಯಾಸ ನೀಡುವರು. ಹುಬ್ಬಳ್ಳಿಯ ನಲಂದಾ ಪಾಲಿಟೆಕ್ನಿಕ್‌ ಕಾಲೇಜಿನ ಉಪನ್ಯಾಸಕಿ ಶಾಂತಲಾ ನಾಭಾಪುರ, ತುಳಜಾ ಭವಾನಿ ಶಿಕ್ಷಣ ಸಮಿತಿ ಸದಸ್ಯ ಪರಶುರಾಮಸಾ ಎಸ್‌. ಹಬೀಬ, ಸುಜ್ಞಾನ ಪಬ್ಲಿಕ್‌ ಶಾಲೆ ಪ್ರಾಚಾರ್ಯೆ ಸ್ಮಿತಾ ಧಾರವಾಡಕರ ಭಾಗವಹಿಸುವರು. ಸಂಜೆ 5 ಗಂಟೆಗೆ ವರಸಿದ್ಧಿ ಮಂಡಳಿಯಿಂದ ಭಜನೆ ಜರುಗಲಿದೆ’ ಎಂದು ತಿಳಿಸಿದರು.

ADVERTISEMENT

ಬಳಿಕ ಮಹಾಚಾರ್ಯ ವಿದ್ಯಾಲಯದ ಕುಲಪತಿ ಪ್ರದ್ಯುಮ್ನಾಚಾರ್‌ ಜೋಶಿ ‘ನಿತ್ಯ ಜೀವನದಲ್ಲಿ ಆಧ್ಯಾತ್ಮಿಕತೆ’ ವಿಷಯ ಕುರಿತು ಉಪನ್ಯಾಸ ಕೊಡುವರು. ಬನ್ನಂಜೆ ಗೋವಿಂದಾಚಾರ್ಯ ಅವರ ವಿವರಣೆ ಆಧರಿತ ‘ಚಿಂತನ ರಾಮಾಯಣ’ ರೂಪಕವನ್ನು ಕಲಾವಿದ ಸೃಜನ್‌ ಶಾನಭಾಗ ನಡೆಸಿಕೊಡಲಿದ್ದಾರೆ. 21ರಂದು ಚಂಡಿಕಾ ಹೋಮ, ಸಂಜೆ ಧಾರವಾಡದ ಯಕ್ಷಗಾನ ಮತ್ತು ಸಂಸ್ಕೃತಿ ಸಂಘದ ವತಿಯಿಂದ ‘ಯಕ್ಷಗಾನ ಕಂಸವಧೆ’ ನಡೆಯಲಿದೆ. ಆಶ್ರಮದ ಸದಸ್ಯೆ ಅಮೂಲ್ಯಾಮಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.