
ಹುಬ್ಬಳ್ಳಿ: ರಾಜ್ಯ ಪೊಲೀಸ್ ಮಹಾನಿರ್ದೇಶಕ(ಡಿಜಿ–ಐಜಿಪಿ) ಎಂ.ಎ. ಸಲೀಂ ಅವರು ಭಾನುವಾರ ಇಲ್ಲಿನ ನವನಗರದ ಹು–ಧಾ ಮಹಾನಗರ ಪೊಲೀಸ್ ಕಮಿಷನರ್ ಕಚೇರಿಗೆ ಭೇಟಿ ನೀಡಿ, ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಕಮಿಷನರೇಟ್‌ನ ಕಾರ್ಯವೈಖರಿ, ಅಪರಾಧ ಪ್ರಕರಣಗಳ ಮಾಹಿತಿ ಪಡೆದು, ಸಲಹೆ ಸೂಚನೆಗಳನ್ನು ನೀಡಿದರು. ಕಡತಗಳ ಪರಿಶೀಲನೆ ನಡೆಸಿ, ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಕುರಿತು ಚರ್ಚಿಸಿದರು.
ಪೊಲೀಸ್ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರು ಅಸಮಾಧಾನಗೊಳ್ಳದಂತೆ, ನ್ಯಾಯಕೇಳಿ ಠಾಣೆಗೆ ಬರುವವರ ಜೊತೆ ಸೌಜನ್ಯದಿಂದ ವರ್ತಿಸಿ ಕಾನೂನು ವ್ಯಾಪ್ತಿಯಲ್ಲಿ ಕ್ರಮಕೈಗೊಳ್ಳಲು ಸೂಚಿಸಿದರು. ಪೊಲೀಸ್ ಇಲಾಖೆಯೆ ಹೆಸರು ಕೆಡದಂತೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಲು ನಿರ್ದೇಶಿಸಿದರು.
ಗೋಕುಲ್ ರಸ್ತೆ ಪೊಲೀಸ್ ಠಾಣೆಗೆ ಭೇಟಿ ನೀಡಿದ ಅವರು, ಸಿಬ್ಬಂದಿ ಜೊತೆ ಚರ್ಚಿಸಿ ಕೆಲವು ಸಲಹೆಗಳನ್ನು ನೀಡಿ, ಕಡ್ಡಾಯವಾಗಿ ಪಾಲಿಸಲು ಹೇಳಿದರು. ಕೆಲವು ಸಿಬ್ಬಂದಿಯ ಸಮಸ್ಯೆ ತೋಡಿಕೊಂಡಿದ್ದು, ಪರಿಹಾರ ನೀಡುವ ಭರವಸೆ ನೀಡಿದರು.
ನಗರದ ಹಳೇ ಸಿಎಆರ್ ಮೈದಾನದ ಬಳಿ ಇರುವ ಪೊಲೀಸ್ ವಸತಿ ಗೃಹಕ್ಕೆ ಭೇಟಿ ನೀಡಿದ ಡಿಜಿ–ಐಜಿಪಿ, ಅಲ್ಲಿರುವ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದರು. ಸಿಬ್ಬಂದಿ ಹಾಗೂ ಅವರ ಕುಟುಂಬದವರೊಂದಿಗೆ ಚರ್ಚಿಸಿ, ಕುಂದು-ಕೊರತೆ ಆಲಿಸಿದರು. ಅಗತ್ಯವಿರುವ ಮೂಲಸೌಕರ್ಯ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ಸಿಐಡಿ ಎಸ್ಪಿ ರಶ್ಮಿ ಪರಡಿ, ಧಾರವಾಡ ಪೊಲೀಸ್ ವರಿಷ್ಠಾಧಿಕಾರಿ ಆರ್ಯನ ಗುಂಜನ್, ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ ಸಿ.ಆರ್., ಎಸಿಪಿಗಳಾದ ಶಿವಪ್ರಕಾಶ ನಾಯ್ಕ, ಉಮೇಶ ಚಿಕ್ಕಮಠ ಹಾಗೂ ಇತರ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.