ADVERTISEMENT

ಧಾರವಾಡ: ಜಿಲ್ಲೆಯಲ್ಲಿ ಕೊರೊನಾಗೆ ಮೊದಲ ಬಲಿ

​ಪ್ರಜಾವಾಣಿ ವಾರ್ತೆ
Published 10 ಜೂನ್ 2020, 13:59 IST
Last Updated 10 ಜೂನ್ 2020, 13:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಧಾರವಾಡ: ಕೋವಿಡ್–19 ಸೋಂಕು ತಗುಲಿದ 58 ವರ್ಷದ ವ್ಯಕ್ತಿ ಬಹು ಅಂಗಾಂಗ ವೈಫಲ್ಯದಿಂದ ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಸೋಂಕ್ತಿ ವ್ಯಕ್ತಿ ಮೃತಪಟ್ಟ ಮೊದಲ ಪ್ರಕರಣ ಇದಾಗಿದೆ.

ಹುಬ್ಬಳ್ಳಿಯ ಗಿರಣಿ ಚಾಳದ ನಿವಾಸಿಯಾದ (ಪಿ–1943) ಇವರು ಮೇ 22ರಂದು ಕುಟುಂಬದ ಇತರ 11 ಜನರೊಂದಿಗೆ ಮುಂಬೈನಿಂದ ನಗರಕ್ಕೆ ಮರಳಿದ್ದರು. ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದ ಈ ವ್ಯಕ್ತಿಯಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದಿದ್ದವು. ಹೀಗಾಗಿ ಮೇ 23ರಂದೇ ಕಿಮ್ಸ್‌ಗೆ ದಾಖಲಿಸಲಾಗಿತ್ತು.

‘ಮಧುಮೇಹ ಹಾಗೂ ಉಸಿರಾಟದ ತೊಂದರೆ ಇದ್ದ ಇವರು ಬಹು ಅಂಗಾಂಗಗಳ ವೈಫಲ್ಯದಿಂದ ಬಳಲುತ್ತಿದ್ದರು. ಮೂತ್ರಪಿಂಡ ವೈಫಲ್ಯದಿಂದಾಗಿ ಇವರಿಗೆ ಡಿಯಾಲಿಸಿಸ್‌ ನಡೆಸಲಾಗುತ್ತಿತ್ತು. ಜತೆಗೆ ಸೋಂಕು ದೇಹವಿಡೀ ವ್ಯಾಪಿಸಿದ್ದರಿಂದ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ’ ಎಂದು ಕಿಮ್ಸ್‌ನ ವೈದ್ಯರೊಬ್ಬರು ತಿಳಿಸಿದರು.

ADVERTISEMENT

ಮೃತ ವ್ಯಕ್ತಿಯ ಅಂತ್ಯಕ್ರಿಯೆ ಹುಬ್ಬಳ್ಳಿ ತಾಲ್ಲೂಕಿನ ಹೆಗ್ಗೇರಿಯಲ್ಲಿರುವ ರುದ್ರಭೂಮಿಯಲ್ಲಿ ಬುಧವಾರ ನೆರವೇರಿತು. ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ (ಐಸಿಎಂಆರ್‌) ಮಾರ್ಗಸೂಚಿಯಂತೆ ಅಂತ್ಯಕ್ರಿಯೆಯನ್ನು ನಡೆಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಮೇ 22ರಂದು ಮುಂಬೈನಿಂದ ಹಿಂದಿರುಗಿದ ಇವರ ಕುಟುಂಬದ ಐವರಲ್ಲಿ ಸೋಂಕು ದೃಢಪಟ್ಟಿತ್ತು. ಜೂನ್ 6ರಂದು ಇದೇ ಕುಟುಂಬದ 2 ವರ್ಷದ ಬಾಲಕ ಸೇರಿದಂತೆ ಇಬ್ಬರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದರು. ಮೃತ ವ್ಯಕ್ತಿಯ ಪತ್ನಿ (ಪಿ–4530) ಹಾಗೂ ಮಗ (ಪಿ–4531) ಸದ್ಯ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಾಗೆಯೇ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗದಗ ಜಿಲ್ಲೆಯ ಲಕ್ಕುಂಡಿಯ 44 ವರ್ಷದ ಕೊರೊನಾ ಸೋಂಕಿತ ಜೂನ್ 4ರಂದು ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.