ADVERTISEMENT

ಧರ್ಮಸ್ಥಳ ಪ್ರಕರಣ | ‘ಅಪಪ್ರಚಾರದ ವಿರುದ್ಧ ಎನ್‌ಐಎ ತನಿಖೆ ನಡೆಸಿ’: ಆರ್‌.ಅಶೋಕ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 5:24 IST
Last Updated 18 ಆಗಸ್ಟ್ 2025, 5:24 IST
   

ಹುಬ್ಬಳ್ಳಿ: ‘ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪ್ರಚಾರ ಮಾಡುತ್ತಿರುವವರಿಗೆ ವಿದೇಶದಿಂದ ಹಣ ಬರುತ್ತಿದೆ. ಈ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ (ಎನ್‌ಐಎ) ತನಿಖೆ ನಡೆಸಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಆಗ್ರಹಿಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಾಮಾಜಿಕ ಮಾಧ್ಯಮದಲ್ಲಿ ಆರೋಪ ಮಾಡಿರುವ ಸಮೀರ್‌, ಪಿಎಫ್‌ಐ, ಎಸ್‌ಡಿಪಿಐ ಕಾರ್ಯಕರ್ತ. ಆತನ ಜತೆ ಇನ್ನೂ ಕೆಲವರು ಯೂಟ್ಯೂಬ್‌ ಚಾನೆಲ್‌ಗಳಲ್ಲಿ ಅಪಪ್ರಚಾರದಲ್ಲಿ ತೊಡಗಿದ್ದಾರೆ’ ಎಂದರು.

‘ಕೆಲವರು ಧರ್ಮಸ್ಥಳದ ದೇವಸ್ಥಾನಕ್ಕೆ ಜೆಸಿಬಿ ನುಗ್ಗಿಸುತ್ತೇವೆ ಎನ್ನುತ್ತಿದ್ದಾರೆ. ಕಾಡಿನಲ್ಲಿದ್ದ ಮತಾಂಧ ನಕ್ಸಲ್‌ರನ್ನು ರೆಡ್‌ ಕಾರ್ಪೆಟ್‌ ಹಾಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಡಿಗೆ ಕರೆಸಿಕೊಂಡಿದ್ದರ ಪರಿಣಾಮ ಇದು. ಕಾಡಲ್ಲಾದರೆ ಅವರು ಊಟ, ಬಟ್ಟೆಗೆ ಅಲೆಯಬೇಕಾಗಿತ್ತು, ಈಗ ಅವರಿಗೆ ನಗರದಲ್ಲಿ ಎಲ್ಲವೂ ಸಿಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ADVERTISEMENT

‘‌ಮುಸ್ಲಿಂ ಲೀಗ್‌ ಸೇರಿ ಹಲವು ಹಿಂದೂ ವಿರೋಧಿ ಸಂಘಟನೆಗಳ ಜತೆ ಸಂಪರ್ಕ ಹೊಂದಿರುವ ಕಾಂಗ್ರೆಸ್‌, ದೇಶದ ಗುಡಿಗಳನ್ನು ಒಡೆಯುವ ಪ್ರಯತ್ನ ಮಾಡುತ್ತಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು. 

ವರೂರಿನ ನವಗ್ರಹತೀರ್ಥ ಕ್ಷೇತ್ರದಲ್ಲಿ ಮಾತನಾಡಿದ ಗುಣಧರನಂದಿ ಮಹಾರಾಜ, ‘ಧರ್ಮಸ್ಥಳ ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ಎಸ್‌ಐಟಿಯಿಂದ ಸತ್ಯಾಂಶ ಹೊರಬರುವ ವಿಶ್ವಾಸವಿದೆ. ಷಡ್ಯಂತ್ರ ನಡೆಸಿದವರು, ಅಪಪ್ರಚಾರ ಮಾಡಿದ ಯೂಟ್ಯೂಬರ್‌ಗಳ ವಿರುದ್ಧವೂ ತನಿಖೆ ನಡೆಸಿ, ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.