ADVERTISEMENT

ಧಾರವಾಡ: ಕೊರತೆಗಳ ನಡುವೆ ಅಭಿವೃದ್ಧಿಯತ್ತ ಹೆಜ್ಜೆ

ಹಲವೆಡೆ ಐದಾರು ದಿನಕ್ಕೊಮ್ಮೆ ನೀರು ಪೂರೈಕೆ, ಹದಗೆಟ್ಟ ಒಳರಸ್ತೆಗಳು

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 7:39 IST
Last Updated 21 ನವೆಂಬರ್ 2025, 7:39 IST
ಧಾರವಾಡದ ಕೆಲಗೇರಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸ್ಮಶಾನದಲ್ಲಿ ಶೆಡ್ ನಿರ್ಮಿಸಿರುವುದು 
ಧಾರವಾಡದ ಕೆಲಗೇರಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸ್ಮಶಾನದಲ್ಲಿ ಶೆಡ್ ನಿರ್ಮಿಸಿರುವುದು    

ಧಾರವಾಡ: ನಗರದ 10ನೇ ವಾರ್ಡ್ ಹಲವು ಕೊರತೆಗಳ ನಡುವೆಯೂ ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿದೆ. ಕೆಲಗೇರಿ ಭಾಗದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಸ್ಮಶಾನದಲ್ಲಿ ಶೆಡ್ ನಿರ್ಮಿಸಿ ಎರಡು ದಹನ ಘಟಕ ಅಳವಡಿಸಲಾಗಿದೆ. ಕಟ್ಟಿಗೆ ಸಂಗ್ರಹ ಕೊಠಡಿ, ವಿಶಾಲ ಶೆಡ್, ಸಿಮೆಂಟ್ ಬೆಂಚು ವ್ಯವಸ್ಥೆ ಮಾಡಲಾಗಿದೆ. ಕಣ್ಗಾವಲಿಗೆ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ.

ವಾರ್ಡ್‍ನ ಹಲವು ಒಳರಸ್ತೆಗಳು ಹದಗೆಟ್ಟಿವೆ. ಸ್ವಚ್ಛತೆ, ಯುಜಿಡಿ ಸಮಸ್ಯೆ, ಕಸ ವಿಲೇವಾರಿ, ಬೀದಿ ನಾಯಿಗಳ ಹಾವಳಿ ಸಹಿತ ಹಲವು ಸಮಸ್ಯೆಗಳು ಇವೆ.

ಶ್ರೀನಗರ, ಬಸವನಗರ, ವಿಜಯ ನಗರ, ನೆಹರೂ ನಗರ, ಕೆಲಗೇರಿ, ಆಂಜನೇಯನಗರ, ಹೊಸಗೇರಿ, ಮಹಾಲಕ್ಷ್ಮಿ ಲೇಔಟ್, ಜಾಧವ ಲೇಔಟ್, ಸೇರಿ ಹಲವೆಡೆ ಕಾಂಕ್ರೀಟ್ ರಸ್ತೆ ಹಾಗೂ ಡಾಂಬರು ರಸ್ತೆಗಳನ್ನು ನಿರ್ಮಿಸಲಾಗಿದೆ. ಹಳೇ ಶ್ರೀನಗರ, ಶೀಲವಂತರ ಓಣಿ, ಗಾಯತ್ರಿಪುರ, ಶಿವಶಕ್ತಿ ನಗರ, ಗೌಡರ ಓಣಿ, ಒಳರಸ್ತೆಗಳಲ್ಲಿ ಇಂಟರ್ ಲಾಕಿಂಗ್ ಸಿಮೆಂಟ್ ಇಟ್ಟಿಗೆ ಅಳವಡಿಸಿರುವುದರಿಂದ ಅನುಕೂಲವಾಗಿದೆ.

ADVERTISEMENT

ಈ ವಾರ್ಡ್‌ನ ಹಲವೆಡೆ ಐದಾರು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ನೀರು ಪೂರೈಕೆಯಾದಾಗ ಆರು ದಿನಕ್ಕಾಗುವಷ್ಟು ನೀರನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಮಳೆ ಸುರಿದಾಗ ಮಣ್ಣುಮಿಶ್ರಿತ ನೀರು ಪೂರೈಕೆಯಾಗುತ್ತದೆ ಎಂಬ ದೂರುಗಳು ಇವೆ. ನೆಹರೂ ನಗರದಲ್ಲಿ ನೀರಿಗಾಗಿ ಸಾರ್ವಜನಿಕರು ಕೊಳವೆಬಾವಿ ಹಾಗೂ ಟ್ಯಾಂಕರ್‌ ಅವಲಂಬಿಸಿದ್ದಾರೆ.

ವಾರ್ಡ್‌ನಲ್ಲಿ ಎಂಟು ಅಂಗನವಾಡಿ ಕೇಂದ್ರಗಳಿವೆ. ಆಂಜನೇಯ ನಗರದಲ್ಲಿ ಹೊಸ ಅಂಗನವಾಡಿ ಕೇಂದ್ರದ ಹೊಸ ಕಟ್ಟಡ ನಿರ್ಮಿಸಲಾಗಿದೆ. ಬಣ್ಣ ಹಚ್ಚುವುದು ಬಾಕಿ ಇದೆ. ಶಿವಶಕ್ತಿ ನಗರದಲ್ಲಿ ಲೋಕೋಪಯೋಗಿ ಇಲಾಖೆ ಅನುದಾನದಲ್ಲಿ ಎಂಟು ಶಾಲಾ ಕೊಠಡಿ ನಿರ್ಮಿಸಲಾಗಿದೆ. ಕೇಲಗೇರಿ ಹಾಗೂ ಆಂಜನೇಯ ನಗರದಲ್ಲಿ ಹೈಮಾಸ್ಟ್ ದೀಪಗಳನ್ನು ಅಳವಡಿಸಲಾಗಿದೆ.

24X7 ನೀರು ಪೂರೈಕೆ ಯೋಜನೆಗಾಗಿ ಪೈಪ್ ಅಳವಡಿಸಲು ರಸ್ತೆಗಳನ್ನು ಅಗೆದು ಸರಿಯಾಗಿ ಮುಚ್ಚಿಲ್ಲ. ಚರಂಡಿ ಸಮಸ್ಯೆ, ಗಟಾರಗಳಲ್ಲಿ ಕಸ, ಕಡ್ಡಿ, ಹೂಳು ತುಂಬಿಕೊಂಡಿದೆ. ಕೆಲವೆಡೆ ಬೀದಿ ದೀಪಗಳು ಹಾಳಾಗಿವೆ ಸರಿಪಡಿಸಬೇಕು ಎಂದು ನಿವಾಸಿಯೊಬ್ಬರು ತಿಳಿಸಿದರು.

ವ್ಯಾಸ ವಿಹಾರ, ಕಬಾಡಿ ಲೇಔಟ್, ಮ್ಯಾಪಲ್‍ಬ್ಲೆ ನೂತನ ಬಡಾವಣೆಗಳು ಸೇರಿ ಹಲವೆಡೆ ರಸ್ತೆ, ಒಳಚಂರಂಡಿ, ಬೀದಿ ದೀಪಗಳ ವ್ಯವಸ್ಥೆಯಾಗಬೇಕಿದೆ. ನಿವೇಶನ, ರಸ್ತೆ ಬದಿ ಕಸ ಎಸೆಯಲಾಗುತ್ತಿದೆ. ಗಾಯತ್ರಿಪುರ ಬಡಾವಣೆಯಲ್ಲಿ ಮಳೆಗಾಲದಲ್ಲಿ ರಸ್ತೆಯಲ್ಲಿ ನೀರು ಆವರಿಸುವ ಸಮಸ್ಯೆ ಇದೆ. ಈ ಸಮಸ್ಯೆ ಪರಿಹರಿಸಬೇಕು ಎಂಬುದು ನಿವಾಸಿಗಳ ಆಗ್ರಹ.

ವಾರ್ಡ್ 10ರ ನಕ್ಷೆ
ಎರಡು ದಿನಗಳಿಗೊಮ್ಮೆ ನೀರು ಪೂರೈಸಬೇಕು. ಸುರಕ್ಷತೆಗೆ ಬೀದಿಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಬೇಕು. ಒಳ ರಸ್ತೆಗಳಲ್ಲಿ ಹಂಪ್‌ ನಿರ್ಮಿಸಬೇಕು.
– ಮಂಜುನಾಥ ದಾಸರ, ಶಿವಶಕ್ತಿ ನಗರ ನಿವಾಸಿ
ಪ್ರಮುಖ ಬಡಾವಣೆಗಳು
ಶ್ರೀನಗರ ಶಿವಶಕ್ತಿ ನಗರ, ರಾಧಾಕೃಷ್ಣ ನಗರ, ಜಲದರ್ಶಿನಿ ನಗರ, ಬಸವ ನಗರ, ಶೀಲವಂತರ ಓಣಿ, ಗೌಡರ ಕಾಲೊನಿ, ತಪೋವನ ನೆಹರೂ ನಗರ, ಹೊಸಗೇರಿ ಕೆಲಗೇರಿ, ಆಂಜನೇಯ ನಗರ, ಅಯೋಧ್ಯೆ ನಗರ, ಮಹಾಲಕ್ಷ್ಮಿ ಬಡಾವಣೆ, ಗಾಯತ್ರಿಪುರ.

‘ಪೈಪ್‌ಲೈನ್‌ ಅಳವಡಿಕೆ ಶೇ 50ರಷ್ಟು ಪೂರ್ಣ‘

ಕೆಲಗೇರಿ ಭಾಗದಲ್ಲಿ ₹64 ಲಕ್ಷದಲ್ಲಿ ಸ್ಮಶಾನ ಅಭಿವೃದ್ಧಿಪಡಿಸಲಾಗಿದೆ. ₹1 ಕೋಟಿ ಅನುದಾನದಲ್ಲಿ ಶಿವಶಕ್ತಿ ನಗರ ಹಾಗೂ ಆಂಜನೇಯ ನಗರದಲ್ಲಿ ಕಾಂಕ್ರೀಟ್ ರಸ್ತೆ ಲೋಕೋಪಯೋಗಿ ಇಲಾಖೆಯ ₹83 ಲಕ್ಷ ಅನುದಾನದಲ್ಲಿ ಶಿವಶಕ್ತಿ ನಗರದಲ್ಲಿ ಎಂಟು ಶಾಲಾ ಕೊಠಡಿ ನಿರ್ಮಿಸಲಾಗಿದೆ 10ನೇ ವಾರ್ಡ್‌ ಸದಸ್ಯೆ ಚಂದ್ರಕಲಾ ಕೊಟಬಾಗಿ ತಿಳಿಸಿದರು.

ರಾಧಾಕೃಷ್ಣ ನಗರದಲ್ಲಿ ₹25 ಲಕ್ಷ ವೆಚ್ಚದಲ್ಲಿ ಡಾಂಬರ್ ರಸ್ತೆ ನಿರ್ಮಿಸಲಾಗಿದೆ. ಗಾಯತ್ರಿಪುರದಲ್ಲಿ ₹25 ಲಕ್ಷ ವೆಚ್ಚದಲ್ಲಿ ಸಿಮೆಂಟ್ ಇಂಟರ್ ಲಾಕಿಂಗ್ ಇಟ್ಟಿಗೆ ಅಳವಡಿಸಲಾಗಿದೆ. ವಾರ್ಡ್‌ನಲ್ಲಿ 24X7 ನೀರು ಪೂರೈಕೆಗೆ ಪೈಪ್‍ಲೈನ್ ಅಳವಡಿಕೆ ಕಾಮಗಾರಿ ಶೇ 50ರಷ್ಟು ಮುಗಿದಿದೆ. ನೆಹರೂ ನಗರಕ್ಕೆ ನೀರು ಪೂರೈಸಲು ತಪೋವನದಲ್ಲಿ ಟ್ಯಾಂಕ್ ನಿರ್ಮಿಸಲಾಗಿದೆ. ಪೈಪ್‌ಲೈನ್ ಅಳವಡಿಕೆ ಬಾಕಿ ಇದೆ. ಗಾಯತ್ರಿಪುರ ಬಸವನಗರ ಆರ್.ಕೆ.ನಗರ ಉದ್ಯಾನ ಸಿಐಟಿಬಿ ಕಾಲೊನಿ ಶ್ರೀನಗರ ಉದ್ಯಾನಗಳ ಅಭಿವೃದ್ಧಿಗೆ ಅನುದಾನ ಮಂಜೂರಾಗಿದೆ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.