ADVERTISEMENT

ಹು–ಧಾ ಪಾಲಿಕೆ ಧಾರವಾಡ 9ನೇ ವಾರ್ಡ್‌: ಚರಂಡಿ ನಿರ್ವಹಣೆ ಕೊರತೆ

ಬಿ.ಜೆ.ಧನ್ಯಪ್ರಸಾದ್
Published 7 ನವೆಂಬರ್ 2025, 5:04 IST
Last Updated 7 ನವೆಂಬರ್ 2025, 5:04 IST
   

ಧಾರವಾಡ: ನಗರದ ಒಂಬತ್ತನೇ ವಾರ್ಡ್‌ನಲ್ಲಿ ನೀರು ಪೂರೈಕೆ ಸಮರ್ಪಕವಾಗಿದೆ. ಹಲವೆಡೆ ಸಿ.ಸಿ ರಸ್ತೆಗಳನ್ನು ನಿರ್ಮಿಸಲಾಗಿದೆ, ಕೆಲ ಓಣಿಗಳಲ್ಲಿ ಹೊಸದಾಗಿ ಒಳಚರಂಡಿ ನಿರ್ಮಾಣ ಮಾಡಲಾಗಿದೆ. ಗಟಾರ ನಿರ್ವಹಣೆ ಕೊರತೆ, ಬೀದಿನಾಯಿಗಳ ಹಾವಳಿ, ಖಾಲಿ ಜಾಗಗಳಲ್ಲಿ ಕಸ ಎಸೆಯುವುದು ಮೊದಲಾದ ಸಮಸ್ಯೆಗಳು ಇವೆ.

ಹಲವೆಡೆ ಓಣಿಗಳಲ್ಲಿ ಸಿಮೆಂಟ್‌ ರಸ್ತೆ ನಿರ್ಮಿಸಲಾಗಿದೆ. ಕೆಲವೆಡೆ ಇಂಟರ್‌ಲಾಕ್‌ ಸಿಮೆಂಟ್‌ ಇಟ್ಟಿಗೆಗಳನ್ನು ಅಳವಡಿಸಲಾಗಿದೆ. ಭೂಸಪ್ಪ ಚೌಕ, ಹೊಸ ಯಲ್ಲಾಪುರ ಭಾಗ ಸಹಿತ ಎಲ್ಲ ಕಡೆ ನೀರಿನ ಪೂರೈಕೆ ಸಮರ್ಪಕವಾಗಿದೆ. ಕುರುಬರ ಓಣಿ, ಉಳ್ಳಾಗಡ್ಡಿ ಓಣಿಗಳಲ್ಲಿ ಹೊಸದಾಗ ಚರಂಡಿ ನಿರ್ಮಾಣ ಮಾಡಲಾಗಿದೆ.

ವಾರ್ಡ್‌ನಲ್ಲಿ ಚರಂಡಿ ನಿರ್ವಹಣೆ ಸಮಸ್ಯೆ ಇದೆ. ನಿರ್ವಹಣೆ ಕೊರತೆಯಿಂದಾಗಿ ಚರಂಡಿಗಳಲ್ಲಿ ಕಸ, ಕಡ್ಡಿ, ಪ್ಲಾಸ್ಟಿಕ್‌, ಹೂಳು ತುಂಬಿಕೊಂಡಿದೆ. ಕೆಲವೆಡೆ ಹೂಳು ತೆಗೆದು ರಸ್ತೆ ಬದಿ ಹಾಕಲಾಗಿದೆ. ಅದನ್ನು ವಿಲೇವಾರಿ ಮಾಡಿಲ್ಲ. ಹಲವೆಡೆ ಕಿರಿದಾದ ರಸ್ತೆಗಳು ಇವೆ.

ADVERTISEMENT

ಕಣ್ಗಾವಲಿಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಲ್ಲ. ದುಷ್ಕೃತ್ಯ, ಅಕ್ರಮ ಚಟುವಟಿಕೆ ಪತ್ತೆ ನಿಟ್ಟಿನಲ್ಲಿ ಪ್ರಮುಖ ವೃತ್ತಗಳು, ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದರೆ ಅನುಕೂಲ ಎಂಬುದು ಸಾರ್ವಜನಿಕರ ಒತ್ತಾಯ.

ಖಾಲಿ ಜಾಗದಲ್ಲಿ ಕಸ ಎಸೆಯುವ ಸಮಸ್ಯೆ ಇದೆ. ಬೀದಿನಾಯಿಗಳ ಹಾವಳಿ ಇದೆ. ನಾಯಿಗಳು ಹಿಂಡುಗಟ್ಟಿ ಓಡಾಡುವ, ಮಲಗುವ ರಸ್ತೆ ಪ್ರದೇಶ, ಕಸದ ರಾಶಿ ಬದಿಗಳಲ್ಲಿ ಎಚ್ಚರಿಕೆಯಿಂದ ಓಡಾಡಬೇಕಾದ ಸ್ಥಿತಿ ಇದೆ ಎನ್ನುತ್ತಾರೆ ನಿವಾಸಿಗಳು.

ಈ ವಾರ್ಡ್‌ ವ್ಯಾಪ್ತಿಯಲ್ಲಿ ಉದ್ಯಾನ ಇಲ್ಲ. ಜಾಗ ಗುರುತಿಸಿ ಉದ್ಯಾನ ನಿರ್ಮಾಣ ಮಾಡಬೇಕು ಎಂಬ ಬೇಡಿಕೆ ಇದೆ.

‘ಅಭಿವೃದ್ಧಿಗೆ ಒತ್ತು’

ಮದಾರಮಡ್ಡಿ ಮುಖ್ಯರಸ್ತೆ ಭಾಗದಲ್ಲಿ ಚರಂಡಿ ನಿರ್ಮಿಸಲಾಗಿದೆ. ಮಾದರ ಓಣಿ ಸಹಿತ ಹಲವೆಡೆ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಅಂಬಾಭವಾನಿ ದೇಗಲ ಸಮೀಪ ಒಳಚರಂಡಿ ನಿರ್ಮಿಸಲಾಗಿದೆ. ಕಾಮನಕಟ್ಟಿಯ ಆಸ್ಪತ್ರೆಗೆ ದುರಸ್ತಿ ಮಾಡಿಸಲಾಗಿದೆ ಎಂದು ವಾರ್ಡ್‌ ಸದಸ್ಯೆ ರತ್ನಾಬಾಯಿ ನಾಝರೆ ‘ಪ್ರಜಾವಾಣಿ’ಗೆ ತಿಳಿಸಿದರು. ‘ಮದಾರಮಡ್ಡಿಯ ನಾಲ್ಕನೇ ಅಡ್ಡರಸ್ತೆ ಭಾಗದಲ್ಲಿ ₹ 95 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲಾಗುವುದು. ಟೆಂಡರ್‌ ಪ್ರಕ್ರಿಯೆ ಮುಗಿದಿದ್ದು ಶೀಘ್ರದಲ್ಲಿ ಕಾಮಗಾರಿ ಆರಂಭವಾಗಲಿದೆ. ವಾರ್ಡ್‌ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ಒತ್ತು ನೀಡಿದ್ದೇನೆ’ ಎಂದರು.