
ಮಂಜು ಆರ್.ಗಿರಿಯಾಲ
ಧಾರವಾಡ: ತುಕ್ಕುಹಿಡಿದ ಗೇಟುಗಳು, ಕಸದ ರಾಶಿ, ಹದಗೆಟ್ಟ ರಸ್ತೆ, ದುಃಸ್ಥಿತಿಯಲ್ಲಿರುವ ಸಂತೆಕಟ್ಟೆಗಳು... ಇದು ನಗರದ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಪ್ರಾಂಗಣದ ಪರಿಸ್ಥಿತಿ. ಅವ್ಯವಸ್ಥೆ ಕಾರಣ ಇಲ್ಲಿ ವ್ಯಾಪಾರ ನಡೆಸುವುದು ದುಸ್ತರವಾಗಿದೆ.
ಎಪಿಎಂಸಿ ಪ್ರಾಂಗಣದಲ್ಲಿ ತರಕಾರಿ, ಹಣ್ಣು, ಧಾನ್ಯಗಳ ಮಾರಾಟ ಹಾಗೂ ಖರೀದಿ ನಡೆಯುತ್ತದೆ. ಜಿಲ್ಲೆಯ ವಿವಿಧೆಡೆಯಿಂದ ರೈತರು ಪ್ರತಿದಿನ ಕೃಷಿ ಉತ್ಪನ್ನಗಳನ್ನು ಮಾರಾಟಕ್ಕೆ ತರುತ್ತಾರೆ. ಆದರೆ, ಸೌಲಭ್ಯಗಳ ಕೊರತೆಯಿಂದಾಗಿ ವ್ಯಾಪಾರಿಗಳು, ರೈತರು ತೊಂದರೆ ಅನುಭವಿಸುವಂತಾಗಿದೆ.
ಆವರಣದಲ್ಲಿನ ರಸ್ತೆಗಳ ಡಾಂಬರು ಹಾಳಾಗಿದೆ. ಎಲ್ಲೆಡೆ ಗುಂಡಿಮಯವಾಗಿದೆ. ಮುಖ್ಯ ರಸ್ತೆಯಲ್ಲಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲುಗಡೆ ಮಾಡುತ್ತಾರೆ. ವಿವಿಧೆಡೆ ಕಸ ರಾಶಿ ಬಿದ್ದಿದ್ದು, ಕೊಳೆತ ಹಣ್ಣು, ತರಕಾರಿಗಳನ್ನು ಎಲ್ಲೆಂದರಲ್ಲಿ ಎಸೆಯಲಾಗಿದೆ. ಬೀಡಾಡಿ ಜಾನುವಾರುಗಳು ತ್ಯಾಜ್ಯವನ್ನು ಎಳೆದಾಡಿ, ರಾಡಿ ಮಾಡುತ್ತವೆ. ದುರ್ವಾಸನೆ ಸಹಿಸಿಕೊಂಡು ವ್ಯಾಪಾರ ನಡೆಸಬೇಕಾಗಿದೆ.
ಸಂತೆಕಟ್ಟೆಗಳಲ್ಲಿ ದನಗಳು, ನಾಯಿಗಳು, ಹಂದಿಗಳು ಮಲಗುತ್ತವೆ. ಒಂದು ಪಾವತಿ ಶೌಚಾಲಯವಿದ್ದು, ಹಣ ನೀಡಬೇಕೆಂಬ ಕಾರಣಕ್ಕೆ ಬಹಳಷ್ಟು ಮಂದಿ ಅದನ್ನು ಬಳಸಲ್ಲ. ಬಯಲಲ್ಲೇ ಮೂತ್ರ ವಿಸರ್ಜನೆ ಮಾಡುತ್ತಾರೆ.
‘ಎಪಿಎಂಸಿ ಆವರಣ ಮದ್ಯವ್ಯಸನಿಗಳ ಅಡ್ಡೆಯಾಗಿದೆ. ರಾತ್ರಿ ಇಲ್ಲಿ ಮದ್ಯ ಕುಡಿದು, ಖಾಲಿ ಬಾಟಲಿಗಳು, ಪ್ಯಾಕೇಟುಗಳನ್ನು ಎಲ್ಲೆಂದರಲ್ಲಿ ಬಿಸಾಕುತ್ತಾರೆ. ಬೆಳಿಗ್ಗೆ ಅವುಗಳನ್ನು ತೆಗೆದು ಸ್ವಚ್ಛ ಮಾಡುತ್ತೇವೆ’ ಎಂದು ವರ್ತಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಇಲ್ಲಿ ಜಾನುವಾರುಗಳ ಹಾವಳಿ ಹೆಚ್ಚಾಗಿದೆ. ತರಕಾರಿ, ಧಾನ್ಯಗಳಿಗೆ ಬಾಯಿ ಹಾಕುತ್ತವೆ. ಬೆದರಿಸಿದರೂ ಬಗ್ಗಲ್ಲ. ಜಾನುವಾರುಗಳು ಬರದಂತೆ ತಡೆಯುವುದೇ ಸವಾಲಾಗಿದೆ. ಕೆಲವು ದಿನಗಳ ಹಿಂದೆ ಹಸುವೊಂದು ಇಬ್ಬರು ಮಹಿಳೆಯರಿಗೆ ಗುದ್ದಿ ಗಾಯಗೊಳಿಸಿತ್ತು’ ಎಂದು ತರಕಾರಿ ವ್ಯಾಪಾರಿಯೊಬ್ಬರು ಸಂಕಷ್ಟ ತೋಡಿಕೊಂಡರು.
Quote - ಎಪಿಎಂಸಿ ಪ್ರಾಂಗಣದಲ್ಲಿ ಮೂಲಸೌಕರ್ಯ ಕಲ್ಪಿಸಲು ಒತ್ತು ನೀಡಬೇಕು. ಒಳರಸ್ತೆ ದುರಸ್ತಿಗೊಳಿಸಬೇಕು. ಕಾವಲಿಗೆ ಪೊಲೀಸ್ ಚೌಕಿ ನಿರ್ಮಿಸಬೇಕು ಆರ್.ಆರ್.ಚಿಕ್ಕನಗೌಡ್ರ ವರ್ತಕ
Quote - ಎಪಿಎಂಸಿಯಲ್ಲಿ ಕುಡಿಯುವ ನೀರಿನ ಘಟಕ ಇಲ್ಲ. ಬಾಟಲಿಯಲ್ಲಿ ನೀರು ತರುತ್ತೇವೆ. ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕು. ಇನ್ನೊಂದು ಶೌಚಾಲಯ ನಿರ್ಮಿಸಬೇಕು ದ್ಯಾಮಣ್ಣ ರಾಣಿಗೇರ ಹಮಾಲಿ ಕಾರ್ಮಿಕ
Cut-off box - ಪಾಳುಬಿದ್ದ ರೈತ ಭವನ ಮಾರುಕಟ್ಟೆಗೆ ಬರುವ ರೈತರ ಅನುಕೂಲಕ್ಕಾಗಿ ನಿರ್ಮಿಸಿರುವ ‘ರೈತ ಭವನ’ ನಿರ್ವಹಣೆ ಇಲ್ಲದೆ ಪಾಳು ಬಿದ್ದಿದೆ. ಭವನದ ಸುತ್ತ ಗಿಡಗಂಟಿ ಬೆಳೆದಿವೆ. ಭವನದ ಕಿಟಕಿಗಳ ಗಾಜು ಒಡೆದಿವೆ. ವಿದ್ಯುತ್ ಸಂಪರ್ಕದ ಬೋರ್ಡ್ ಹಾಳಾಗಿದೆ. ಕೊಠಡಿಗಳಲ್ಲಿ ದೂಳು ಆವರಿಸಿದೆ. ಖಾಲಿ ಬಾಟಲಿಗಳು ಬೀಡಿ ಸಿಗರೇಟು ಚುಟ್ಟಾಗಳು ಭವನದೊಳಗೆ ಬಿದ್ದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.