ಧಾರವಾಡ: ಇಲ್ಲಿನ ನಗರ ಬಸ್ ನಿಲ್ದಾಣದ ಕಾಮಗಾರಿ ಆರಂಭಗೊಂಡು ಒಂದು ವರ್ಷವಾದರೂ ಇನ್ನೂ ಪೂರ್ಣಗೊಂಡಿಲ್ಲ. ಇದರಿಂದ ಸಾರ್ವಜನಿಕರು ಸಂಕಷ್ಟ ಅನುಭವಿಸುವಂತಾಗಿದೆ. ಬಸ್‌ಗಳು ಅಲ್ಲಿ ಬಾರದ ಕಾರಣ ಪ್ರಯಾಣಿಕರು, ಮಹಾರಾಣ ಪ್ರತಾಪ್ ವೃತ್ತ ಮತ್ತು ಜೂಬಿಲಿ ವೃತ್ತದ ಬಳಿ ಬಸ್ ಹತ್ತುವಂತಹ ಪರಿಸ್ಥಿತಿ ಇದೆ.
ಕಾಮಗಾರಿ ನಡೆಯುತ್ತಿರುವ ಕಾರಣ ದೂಳುಮಯ ವಾತಾವರಣ ನಿರ್ಮಾಣವಾಗಿದೆ. ಅಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆ ಆಗಿದೆ ಅಲ್ಲದೇ, ಬೀದಿ ವ್ಯಾಪಾರಸ್ಥರಿಗೂ ಸಮಸ್ಯೆಯಾಗಿದೆ. ಬೀದಿ ವ್ಯಾಪಾರಸ್ಥರು ಒಂದೇ ಕಡೆ ನಿಂತು ಅಥವಾ ಕೂತು ವ್ಯಾಪಾರ ಮಾಡಲು ಆಗದ ಸ್ಥಿತಿ ಇದೆ.
‘ಜೂಬಿಲಿ ವೃತ್ತದಲ್ಲಿ ಅಥವಾ ಮಹಾರಾಣ ಪ್ರತಾಪ ವೃತ್ತದಲ್ಲಿ ಬಸ್‌ಗಾಗಿ ಕಾಯುತ್ತ ನಿಂತಾಗ, ಅಪಘಾತಕ್ಕೀಡಾಗುವ ಭಯ ಕಾಡುತ್ತದೆ. ವಾಹನಗಳು ವೇಗವಾಗಿ ಚಲಿಸುವುದರಿಂದ ಅವು ಡಿಕ್ಕಿ ಹೊಡೆಯುವ ಆತಂಕ ಕಾಡುತ್ತದೆ. ಎಷ್ಟೇ ಎಚ್ಚರ ವಹಿಸಿದರೂ ಸಾಲದು. ನೂಕುನುಗ್ಗಲಿನಲ್ಲಿ ಬಿದ್ದು ಬಿಡುತ್ತೇವೆ’ ಎಂದು ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುವ ಮಲ್ಲಮ್ಮ ತಿಳಿಸಿದರು.
‘ಬಸ್ ನಿಲ್ದಾಣ ಕಾಮಗಾರಿ ಬೇಗ ಮುಗಿಯಲಿದೆ ಎಂಬ ನಿರೀಕ್ಷೆ ಇತ್ತು. ಆದರೆ, ಅದು ಕಾಮಗಾರಿ ಮಾತ್ರ ಪೂರ್ಣಗೊಳ್ಳುತ್ತಿಲ್ಲ. ಇದರಿಂದ ತುಂಬಾ ಕಷ್ಟವಾಗುತ್ತಿದೆ. ಬಸ್ ಎಲ್ಲಿ ನಿಲ್ಲುತ್ತವೆ ಎಂಬುದು ಗೊತ್ತಿಲ್ಲ. ಎಷ್ಟು ಸಮಯಕ್ಕೆ ಬರುತ್ತವೆ ಎಂಬುದು ಗೊತ್ತಾಗಲ್ಲ. ನಿಲ್ದಾಣ ಎಂಬುದು ಇದ್ದರೆ, ಅವುಗಳ ಸಂಚಾರದ ಬಗ್ಗೆ ಮಾಹಿತಿ ಇರುತ್ತದೆ’ ಎಂದು ಅವರು ತಿಳಿಸಿದರು.
ಶಾಲಾಕಾಲೇಜು ವಿದ್ಯಾರ್ಥಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಲ್ಲಿ ನಿಂತು ಬಸ್‌ನ್ನು ಏರುತ್ತಾರೆ. ಎಷ್ಟೋ ಬಾರಿ ಗೊಂದಲ, ಗೌಜುಗದ್ದಲದಲ್ಲಿ ಅವರಿಗೆ ಸಮಸ್ಯೆಯಾಗುತ್ತದೆ. ಬಸ್ ನಿಲ್ದಾಣವಿದ್ದರೆ, ಬಸ್‌ಗಳು ಮುಂಚಿತವಾಗಿಯೇ ಬಂದು ನಿಲ್ಲುತ್ತವೆ. ವಿದ್ಯಾರ್ಥಿಗಳು ಆಯಾ ಸಮಯಕ್ಕೆ ಬಂದು ಬಸ್ ಹತ್ತುತ್ತಾರೆ. ನಿಲ್ದಾಣ ಕಾಮಗಾರಿ ಬೇಗನೇ ಪೂರ್ಣಗೊಂಡರೆ, ಎಲ್ಲರಿಗೂ ಅನುಕೂಲವಾಗುತ್ತದೆ’ ಎಂದು ಶಾಲಾ ಶಿಕ್ಷಕಿಯೊಬ್ಬರು ತಿಳಿಸಿದರು.
‘ಕಾಮಗಾರಿ ಬೇಗನೇ ಪೂರ್ಣಗೊಳ್ಳದ ಕಾರಣ ಬೀದಿ ವ್ಯಾಪಾರಸ್ಥರು ಎಲ್ಲಿ ಬೇಕೆಂದಲ್ಲಿ ಕೂತು, ನಿಂತು ವ್ಯಾಪಾರ ಮಾಡಬೇಕಾದ ಸ್ಥಿತಿ ಇದೆ. ಪಾದಚಾರಿಗಳಿಗೆ ಅಲ್ಲದೇ, ಪ್ರಯಾಣಿಕರಿಗೂ ತೊಂದರೆ ಆಗುತ್ತಿದೆ. ಕಾಮಗಾರಿ ಪೂರ್ಣಗೊಂಡರೆ, ಹೆಚ್ಚಿನ ಸ್ಥಳಾವಕಾಶ ಸಿಗುತ್ತದೆ. ಅಚ್ಚುಕಟ್ಟಾಗಿ ವ್ಯಾಪಾರ ಮಾಡಲು ಸಾಧ್ಯವಾಗುತ್ತದೆ’ ಎಂದು ವ್ಯಾಪಾರಿ ರಮೇಶ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.