ADVERTISEMENT

ಹುಬ್ಬಳ್ಳಿ | 15ನೇ ಹಣಕಾಸು ಯೋಜನೆ: ಕಾಮಗಾರಿ ಕುಂಠಿತ, ಇಚ್ಛಾಶಕ್ತಿ ಕೊರತೆ

ಎಲ್‌.ಮಂಜುನಾಥ
Published 22 ಜನವರಿ 2026, 3:11 IST
Last Updated 22 ಜನವರಿ 2026, 3:11 IST
ಕ್ರಿಯಾಯೋಜನೆ ವರದಿಯಲ್ಲಿ ಪ್ರಸ್ತಾಪವಾಗಿದ್ದ ನವಲಗುಂದ ತಾಲ್ಲೂಕಿನ ಗುಡಿಸಾಗರ ಗ್ರಾಮದ ಕೆರೆ ಮಾರ್ಗದ ರಸ್ತೆ ಅನುದಾನದ ಸಮಸ್ಯೆಯಿಂದಾಗಿ ಅಭಿವೃದ್ಧಿ ಕಾಮಗಾರಿ ಕೈಗೊಂಡಿಲ್ಲ
ಕ್ರಿಯಾಯೋಜನೆ ವರದಿಯಲ್ಲಿ ಪ್ರಸ್ತಾಪವಾಗಿದ್ದ ನವಲಗುಂದ ತಾಲ್ಲೂಕಿನ ಗುಡಿಸಾಗರ ಗ್ರಾಮದ ಕೆರೆ ಮಾರ್ಗದ ರಸ್ತೆ ಅನುದಾನದ ಸಮಸ್ಯೆಯಿಂದಾಗಿ ಅಭಿವೃದ್ಧಿ ಕಾಮಗಾರಿ ಕೈಗೊಂಡಿಲ್ಲ   

ಹುಬ್ಬಳ್ಳಿ: ಜಿಲ್ಲೆಯ ಗ್ರಾಮಗಳ ಸಮಗ್ರ ಅಭಿವೃದ್ಧಿಗಾಗಿ 2021–26ನೇ ಅವಧಿಯ 15ನೇ ಹಣಕಾಸು ಯೋಜನೆಯಡಿಯಲ್ಲಿ ₹85 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕಳೆದ 4 ವರ್ಷಗಳ ಅವಧಿಯಲ್ಲಿ ಇದುವರಿಗೆ ಕೇವಲ ₹32 ಕೋಟಿ ಅನುದಾನ ಮಾತ್ರ ಖರ್ಚಾಗಿದ್ದು, ಇನ್ನೂ ₹53 ಕೋಟಿ ಅನುದಾನ ಉಳಿಕೆಯಿದೆ!

ಜಿಲ್ಲೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಯೋಜನೆಗೆ ಸಂಬಂಧಿಸಿದ ಶೇ 60ರ ನಿರ್ಬಂಧಿತ ಅನುದಾನದಲ್ಲಿ ಗ್ರಾಮಗಳಲ್ಲಿ ನೈರ್ಮಲೀಕರಣ, ಬಯಲು ಬಹಿರ್ದೇಸೆ ಮುಕ್ತ ಗ್ರಾಮ ನಿರ್ಮಾಣ, ಶುದ್ಧ ಕುಡಿಯುವ ನೀರು ಸರಬರಾಜು ಸಂಬಂಧಿತ ಕಾಮಗಾರಿಗಳ ಕ್ರಿಯಾಯೋಜನೆ ತಯಾರಿಸುವುದು. ಶೇ 40 ಅನಿರ್ಬಂಧಿತ ಅನುದಾನದಲ್ಲಿ ಗ್ರಾಮಗಳಲ್ಲಿ ರಸ್ತೆ, ಒಳಚರಂಡಿ ನಿರ್ಮಾಣ, ಬೀದಿ ದೀಪ ಅಳವಡಿಕೆ, ಅಂಗನವಾಡಿ ಕಟ್ಟಡ ನಿರ್ಮಾಣ, ಸರ್ಕಾರಿ ಕಟ್ಟಡಗಳ ದುರಸ್ತಿ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಿಕೊಡುವ ಉದ್ದೇಶದಿಂದ 5 ವರ್ಷದ ಕ್ರಿಯಾ ಯೋಜನೆ ವರದಿ ಸಿದ್ಧಪಡಿಸಿ, ಸಕಾಲಿಕವಾಗಿ ಅವುಗಳ ಅನುಷ್ಠಾನಕ್ಕಾಗಿ ಮಾರ್ಗಸೂಚಿ ನೀಡಲಾಗಿರುತ್ತದೆ.

ಆದರೆ, ಗ್ರಾಮ ಪಂಚಾಯಿತಿಯಲ್ಲಿ ಚುನಾಯಿತ ಸದಸ್ಯರ ಹಾಗೂ ಅಧಿಕಾರಿಗಳ ಇಚ್ಛಾಸಕ್ತಿ ಕೊರತೆಯಿಂದಾಗಿ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸಕಾಲಕ್ಕೆ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಕ್ರಿಯಾಯೋಜನೆಯಲ್ಲಿ ಪ್ರಸ್ತಾಪಿಸಿದ ಕಾಮಗಾರಿಗಳ ಅನುಷ್ಠಾನಕ್ಕೂ ಸಕಾಲಕ್ಕೆ ಅನುದಾನ ಬಿಡುಗಡೆಯಲ್ಲಿಯೂ ವಿಳಂಬ ಆಗುತ್ತಿರುವುದೇ ಪ್ರಮುಖ ಕಾರಣವಾಗಿದೆ ಎನ್ನುವ ಆರೋಪಗಳಿವೆ. 

ADVERTISEMENT

ಕ್ರೀಯಾ ಯೋಜನೆಗೆ ಸಮ್ಮತಿ ಕೊರತೆ: ‘15ನೇ ಹಣಕಾಸು ಯೋಜನೆಗೆ ಸಂಬಂಧಿಸಿದ ಅನುದಾನವು ನೇರವಾಗಿ ಆಯಾ ಗ್ರಾಮ ಪಂಚಾಯಿತಿಗಳ ಖಾತೆಗೆ ಹಂತ ಹಂತವಾಗಿ ಬಿಡುಗಡೆಯಾಗುತ್ತದೆ. ಈ ಅನುದಾನದಲ್ಲಿ ಸಂಬಂಧಿಸಿದ ಆಯಾ ಪಂಚಾಯಿತಿ ಅಧಿಕಾರಿಗಳು ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಗ್ರಾಮೀಣ ಅಭಿವೃದ್ಧಿ ಕಾಮಗಾರಿಗಳ ಕ್ರಿಯಾ ಯೋಜನೆ ತಯಾರಿಸಿ, ಕಾಮಗಾರಿ ಕೈಗೊಳ್ಳಬೇಕು. ಇದಕ್ಕೆ ಪಂಚಾಯಿತಿ ಸದಸ್ಯರ ಸಮ್ಮತಿಯೂ ಅಗತ್ಯವಾಗಿರುತ್ತದೆ. ಆದರೆ, ಕೆಲವೊಮ್ಮೆ ಕ್ರಿಯಾಯೋಜನೆಗೆ ಸದಸ್ಯರ ಒಪ್ಪಿಗೆ ಸೂಚಿಸುವುದಿಲ್ಲ. ಇದರಿಂದಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಸಕಾಲಿಕವಾಗಿ ಕೈಗೊಳ್ಳುವಲ್ಲಿ ವಿಳಂಬವಾಗುತ್ತದೆ‘ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು. 

‘ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಮತ್ತು ನೈರ್ಮಲ್ಯ ಯೋಜನೆಯ ಕಾಮಗಾರಿಗಳಿಗೆ ಶೇ 60 ಅನುದಾನವನ್ನು ಕಡ್ಡಾಯವಾಗಿ ಬಳಸಬೇಕು. ಆದರೆ, ಈ ಕಾಮಗಾರಿಗಳನ್ನೂ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಇಂದಿಗೂ ಕುಡಿಯುವ ನೀರಿನ ಸಮಸ್ಯೆ, ನೈರ್ಮಲ್ಯಕರಣ ಹಾಗೂ ಮೂಲಸೌಕರ್ಯಗಳ ಸಮಸ್ಯೆಯಿದೆ’ ಎನ್ನುತ್ತಾರೆ ಅಧಿಕಾರಿಗಳು.

‘ಗ್ರಾಮಗಳಲ್ಲಿ ರಸ್ತೆ, ಚರಂಡಿ ಸೇರಿದಂತೆ ಅಗತ್ಯ ಮೂಲಸೌಕರ್ಯಗಳಿಗೆ ಸಂಬಂಧಿಸಿದ ಯೋಜನೆಗಳ ಅನುಷ್ಠಾನದಲ್ಲಿಯೂ ಸದಸ್ಯರಿಂದ ಕೆಲವೊಮ್ಮೆ ಸಹಕಾರ ಸಿಗಲ್ಲ. ಕ್ರಿಯಾಯೋಜನೆಯಲ್ಲಿ ನಮ್ಮ ವಾರ್ಡ್‌ ವ್ಯಾಪ್ತಿಗೆ ಸಂಬಂಧಿಸಿದ ಕೆಲಸಗಳನ್ನು ಸೇರಿಸಿಲ್ಲ ಎಂಬ ಕಾರಣ ನೀಡಿ, ಯೋಜನೆ ಅನುಷ್ಠಾನಕ್ಕೆ ಸಹಕರಿಸಲ್ಲ. ಇದರಿಂದಾಗಿ ವಿಳಂಬವಾಗುತ್ತಿದೆ. ಕೆಲವೊಮ್ಮೆ ಮುಗಿದಿರುವ ಕಾಮಗಾರಿಗಳಿಗೆ ಅನುದಾನ ಬಿಡುಗಡೆಯಲ್ಲಿಯೂ ವಿಳಂಬವಾಗುತ್ತಿದೆ. ಈ ಕಾರಣಗಳಿಂದಾಗಿ ನಿಗದಿತ ಅವಧಿಯಲ್ಲಿ ಅನುದಾನ ಸಮಪರ್ಕವಾಗಿ ಬಳಕೆಯಾಗುತ್ತಿಲ್ಲ. ಅನುದಾನ ಉಳಿಕೆಯಾಗುತ್ತಿದೆ. ಉಳಿದ ಅನುದಾನದ ಬಳಕೆಗೆ ಮಾರ್ಗಸೂಚಿ ಅನ್ವಯ ಹೆಚ್ಚುವರಿಯಾಗಿ ಇನ್ನೂ ಒಂದು ವರ್ಷ ಸಮಯ ದೊರೆಯುತ್ತದೆ. ಆಗ ಅನುದಾನ ಬಳಕೆಗೆ ಪಿಡಿಒಗಳಿಗೆ ಸೂಚಿಸಲಾಗುತ್ತದೆ’ ಎನ್ನುತ್ತಾರೆ ಅಧಿಕಾರಿಗಳು.

‘ನಮ್ಮ ತಾಲ್ಲೂಕು ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಿಗೆ ಯೋಜನೆಗೆ ಸಂಬಂಧಿಸಿದ 2025–26ನೇ ಅನುದಾನ ಇನ್ನೂ ಬಂದಿಲ್ಲ. ಬಂದ ತಕ್ಷಣ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯಲಿವೆ’ ಎನ್ನುತ್ತಾರೆ ಜಿಲ್ಲೆಯ ತಾಲ್ಲೂಕಿನ ಕಾರ್ಯನಿರ್ವಾಹಕ ಅಧಿಕಾರಿಯೊಬ್ಬರು.

 ನವಲಗುಂದ ತಾಲ್ಲೂಕಿನ ಗುಡಿಸಾಗರ ಗ್ರಾಮದ ಗಟಾರು ನಿರ್ಮಾಣದ ನೈರ್ಮಲೀಕರಣ ಕಾಮಗಾರಿ ಅರ್ಧಕ್ಕೆ ನಿಂತಿರುವುದು
ಜಿಲ್ಲೆಯ 146 ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಂಡು ನಿಗದಿತ ಅವಧಿಯೊಳಗೆ ಯೋಜನೆಯ ಅನುದಾನ ಬಳಕೆ ಮಾಡಬೇಕು ಎಂದು ಕೆಡಿಪಿ ಸಭೆಯಲ್ಲಿ ಪಿಡಿಒಗಳಿಗೆ ಸೂಚಿಸಲಾಗುತ್ತದೆ. ಮತ್ತೊಮ್ಮೆ ಸೂಚನೆ ನೀಡಲಾಗುವುದು.
ಭುವನೇಶ್ ಪಾಟೀಲ್ ಸಿಇಒ ಜಿ.ಪಂ.ಧಾರವಾಡ
ಅನುದಾನದ ಸಮಸ್ಯೆಯಿಂದಾಗಿ ಗುಡಿಸಾಗರ ಗ್ರಾಮದ ಕೆರೆ ಮಾರ್ಗದ ರಸ್ತೆ ದುರಸ್ತಿಯಾಗಿಲ್ಲ. ಯೋಜನೆಗೆ ಸಂಬಂಧಿಸಿದ ನೈರ್ಮಲ್ಯ ಕಾಮಗಾರಿಗಳೂ ಅರ್ಧಕ್ಕೆ ನಿಂತಿವೆ
ವಿರುಪಾಕ್ಷಿ ಬಿಡ್ನಾಳ್ ಗುಡಿಸಾಗರ ಗ್ರಾಮಸ್ಥ 
ಬಿಡುಗಡೆಯಾಗದ ಅನುದಾನ 
‘ನವಲಗುಂದ ತಾಲ್ಲೂಕಿನ ಗುಡಿಸಾಗರ ಗ್ರಾಮ ಪಂಚಾಯಿತಿಗೆ ಯೋಜನೆಗೆ ಸಂಬಂಧಿಸಿದ 2025–26ನೇ ಸಾಲಿಗೆ ₹ 30 ಲಕ್ಷ ಅನುದಾನ ಬರಬೇಕಿತ್ತು. ಇನ್ನೂ ಬಂದಿಲ್ಲ. ಕಳೆದ ಏಪ್ರಿಲ್‌ನಲ್ಲಿಯೇ ಗ್ರಾಮೀಣ ಅಭಿವೃದ್ಧಿ ಕಾಮಗಾರಿಗಳ ವಾರ್ಷಿಕ ಕ್ರಿಯಾಯೋಜನೆ ವರದಿ ಸಲ್ಲಿಸಲಾಗಿತ್ತು. ಅನುದಾನ ಬಿಡುಗಡೆಯಾಗಿಲ್ಲ. ಇದರಿಂದಾಗಿ ಪಂಚಾಯಿತಿ ವ್ಯಾಪ್ತಿಯ ಗುಡಿಸಾಗರ ನಾಗನೂರು ಸೊಟಕನಾಳ ಹಾಗೂ ಕಡದಳ್ಳಿ ಗ್ರಾಮಗಳಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಆಗುತ್ತಿಲ್ಲ’ ಎಂದು ಗುಡಿಸಾಗರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ ಗಂಗಪ್ಪ ಗುಡಸಲ ಮನಿ ದೂರುತ್ತಾರೆ.  ‘ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ನಡೆಯುವ ಸಣ್ಣಪುಟ್ಟ ಕಾಮಗಾರಿಗಳಿಗೆ ಬಿಲ್‌ ಪಾವತಿ ಮಾಡಲು ಹಣವಿಲ್ಲ. ಪಂಚಾಯಿತಿಗೆ ಬರುವ ತೆರಿಗೆಯೂ ತುಂಬಾ ಕಡಿಮೆ. ಯೋಜನೆಗೆ ಸಂಬಂಧಿಸಿದ ಅನುದಾನ ಬಂದರೆ ಅರ್ಧಕ್ಕೆ ನಿಂತಿರುವ ಕಾಮಗಾರಿ ಹೊಸ ಕಾಮಗಾರಿಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ‘ ಎನ್ನುತ್ತಾರೆ ಅವರು. 
ಸಕಾಲಕ್ಕೆ ಮುಗಿಯದ ಕಾಮಗಾರಿಗಳು: ಆರೋಪ
‘ಗ್ರಾಮಗಳಲ್ಲಿ ನೀರು ನೈರ್ಮಲ್ಯ ಬಯಲು ಬಹಿರ್ದೆಸೆ ಮುಕ್ತ ಗ್ರಾಮ ನಿರ್ಮಾಣ ಸೇರಿದಂತೆ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳಿಗಾಗಿ ಕೇಂದ್ರ ಸರ್ಕಾರವು ನೇರವಾಗಿ ಆಯಾ ಗ್ರಾಮ ಪಂಚಾಯಿತಿಗಳಿಗೆ ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡುತ್ತದೆ. ಆದರೆ ಪಂಚಾಯಿತಿ ಸದಸ್ಯರು ಹಾಗೂ ಅಧಿಕಾರಿಗಳ ಇಚ್ಛಾಸಕ್ತಿ ಕೊರತೆ ಹಾಗೂ ಅನುದಾನದ ಸಮಸ್ಯೆಯಿಂದಾಗಿ ಬಹುತೇಕ ಕಾಮಗಾರಿಗಳು ಸಕಾಲದಲ್ಲಿ ಅನುಷ್ಠಾನವಾಗುತ್ತಿಲ್ಲ’ ಎಂದು ಜಿಲ್ಲಾ ಪಂಚಾಯಿತಿ ಅಧಿಕಾರಿಯೊಬ್ಬರು ದೂರುತ್ತಾರೆ.  ‘15ನೇ ಹಣಕಾಸು ಯೋಜನೆಗೆ ಸಂಬಂಧಿಸಿದ ಅನುದಾನದಲ್ಲಿ ‘ನರೇಗಾ’ ಕಾಮಗಾರಿಗಳನ್ನು ಕೈಗೊಳ್ಳಬಾರದು ಎಂಬ ಸೂಚನೆಯಿದೆ. ಆದರೆ ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಅನ್ಯಮಾರ್ಗದ ಮೂಲಕ ಈ ಅನುದಾನವನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ‘ ಎನ್ನುತ್ತಾರೆ ಅವರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.